ಹೈದರಾಬಾದ್‌: ರಾಯಲ್‌ ಚಾಲೆಂಜ​ರ್ಸ್ ಬೆಂಗಳೂರು ತಂಡ ಐಪಿಎಲ್‌ 12ನೇ ಆವೃತ್ತಿಯ ಆರಂಭದಲ್ಲೇ ಒತ್ತಡಕ್ಕೆ ಸಿಲುಕಿದೆ. ಕಳಪೆ ಬ್ಯಾಟಿಂಗ್‌ ಪ್ರದರ್ಶನದಿಂದಾಗಿ ಮೊದಲೆರಡು ಪಂದ್ಯಗಳನ್ನು ಕೈಚೆಲ್ಲಿದ್ದ ಆರ್‌ಸಿಬಿ, ಭಾನುವಾರ ಇಲ್ಲಿನ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ಸನ್‌ರೈಸ​ರ್ಸ್ ಹೈದರಾಬಾದ್‌ ವಿರುದ್ಧ ಸೆಣಸಲಿದ್ದು ಹ್ಯಾಟ್ರಿಕ್‌ ಸೋಲಿನ ಭೀತಿಯಲ್ಲಿದೆ.

12ನೇ ಆವೃತ್ತಿ IPLನ ಮೊದಲ ಟೈ- ಸೂಪರ್ ಓವರ್‌ನಲ್ಲಿ ಗೆದ್ದ ಡೆಲ್ಲಿ

ವಿರಾಟ್‌ ಕೊಹ್ಲಿ ಹಾಗೂ ಎಬಿ ಡಿವಿಲಿಯ​ರ್ಸ್ ಹೊರತುಪಡಿಸಿ, ಆರ್‌ಸಿಬಿಯ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳಿಂದಲೂ ನಿರೀಕ್ಷಿತ ಪ್ರದರ್ಶನ ಮೂಡಿಬರುತ್ತಿಲ್ಲ. ಮೊದಲ ಪಂದ್ಯದಲ್ಲಿ ತಂಡ ಸಂಯೋಜನೆಯಲ್ಲಿ ಆಗಿರುವ ಎಡವಟ್ಟಿನ ಬಗ್ಗೆ ಅರಿವಾದರೂ, ನಾಯಕ ಕೊಹ್ಲಿ ಮುಂಬೈ ವಿರುದ್ಧದ ಪಂದ್ಯಕ್ಕೆ ಆಟಗಾರರನ್ನು ಬದಲಿಸದಿರಲು ನಿರ್ಧರಿಸಿದರು. ಆದರೆ ಸನ್‌ರೈಸ​ರ್ಸ್ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿ ಕೆಲ ಬದಲಾವಣೆಗಳನ್ನು ಮಾಡಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಡಿಗ್ರಾಂಡ್‌ಹೋಮ್‌ ಬದಲಿಗೆ ಟಿಮ್‌ ಸೌಥಿ ಆಡುವ ನಿರೀಕ್ಷೆ ಇದೆ. ವಾಷಿಂಗ್ಟನ್‌ ಸುಂದರ್‌ ಸಹ ಕಣಕ್ಕಿಳಿಯಲು ಕಾತರಿಸುತ್ತಿದ್ದಾರೆ. ಬ್ಯಾಟಿಂಗ್‌ ಕ್ರಮಾಂಕದಲ್ಲೂ ಕೆಲ ಬದಲಾವಣೆಗಳಾಗುವ ನಿರೀಕ್ಷೆ ಇದೆ.

IPL 2019:ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟೈಂ ಟೇಬಲ್!

ಆರ್‌ಸಿಬಿ ಬೌಲಿಂಗ್‌ ಕಳೆದ ಆವೃತ್ತಿಗಳಿಗೆ ಹೋಲಿಸಿದರೆ ಈ ಬಾರಿ ಉತ್ತಮ ಎನಿಸುತ್ತಿದೆ. ಯಜುವೇಂದ್ರ ಚಹಲ್‌ ಸ್ಪಿನ್‌ ಮೋಡಿ ಹೈದರಾಬಾದ್‌ನಲ್ಲೂ ನಡೆದರೆ ಆರ್‌ಸಿಬಿಗೆ ಗೆಲುವು ಸುಲಭವಾಗಲಿದೆ. ನವ್‌ದೀಪ್‌ ಸೈನಿ ತಮ್ಮ ವೇಗದಿಂದ ಭರವಸೆ ಮೂಡಿಸಿದ್ದಾರೆ. ಮೊಹಮದ್‌ ಸಿರಾಜ್‌ ಓವರಲ್ಲಿ ಒಂದೆರಡು ಎಸೆತಗಳನ್ನು ಅತ್ಯುತ್ತಮವಾಗಿ ಎಸೆದರೆ ಇನ್ನುಳಿದವು ಕಳಪೆಯಾಗಿರಲಿವೆ. ಸ್ಥಿರತೆಯ ಕೊರತೆಯಿಂದ ಅವರು ಪರಿಣಾಮಕಾರಿಯಾಗುತ್ತಿಲ್ಲ.

ಹೈದರಾಬಾದ್‌ಗೆ ಆರಂಭಿಕರ ಅಭಯ!: ಸನ್‌ರೈಸ​ರ್ಸ್ ಆರಂಭಿಕರಾದ ಡೇವಿಡ್‌ ವಾರ್ನರ್‌ ಹಾಗೂ ಜಾನಿ ಬೇರ್‌ಸ್ಟೋವ್‌ ಎರಡೂ ಪಂದ್ಯಗಳಲ್ಲಿ ಶತಕದ ಜೊತೆಯಾಟವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಕೇನ್‌ ವಿಲಿಯಮ್ಸನ್‌, ವಿಜಯ್‌ ಶಂಕರ್‌, ಮನೀಶ್‌ ಪಾಂಡೆ, ಯೂಸುಫ್‌ ಪಠಾಣ್‌ ಬಲವಿದೆ. ಬೌಲಿಂಗ್‌ನಲ್ಲಷ್ಟೇ ತಂಡದ ಟ್ರಂಪ್‌ಕಾರ್ಡ್‌ ಆಗಿದ್ದ ರಶೀದ್‌ ಖಾನ್‌ ಈಗ ಬ್ಯಾಟಿಂಗ್‌ನಲ್ಲೂ ಅಬ್ಬರಿಸಲು ಆರಂಭಿಸಿದ್ದು, ಎದುರಾಳಿಗಳಲ್ಲಿ ಭಯ ಶುರುವಾಗಿದೆ. ಭುವನೇಶ್ವರ್‌ ದುಬಾರಿಯಾಗುತ್ತಿರುವುದು ತಂಡದ ಆತಂಕ ಹೆಚ್ಚಿಸಿದೆ.

ಒಟ್ಟು ಮುಖಾಮುಖಿ: 12

ಆರ್‌ಸಿಬಿ: 05

ಸನ್‌ರೈಸ​ರ್ಸ್: 07

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ಪಾರ್ಥೀವ್‌ ಪಟೇಲ್‌, ಮೋಯಿನ್‌ ಅಲಿ, ವಿರಾಟ್‌ ಕೊಹ್ಲಿ (ನಾಯಕ), ಎಬಿ ಡಿವಿಲಿಯ​ರ್ಸ್, ಶಿಮ್ರೊನ್‌ ಹೆಟ್ಮೇಯರ್‌, ಶಿವಂ ದುಬೆ, ವಾಷಿಂಗ್ಟನ್‌ ಸುಂದರ್‌, ಟಿಮ್‌ ಸೌಥಿ, ನವ್‌ದೀಪ್‌ ಸೈನಿ, ಮೊಹಮದ್‌ ಸಿರಾಜ್‌, ಯಜುವೇಂದ್ರ ಚಹಲ್‌.

ಸನ್‌ರೈಸರ್ಸ್: ಡೇವಿಡ್‌ ವಾರ್ನರ್‌, ಬೇರ್‌ಸ್ಟೋವ್‌, ಕೇನ್‌ ವಿಲಿಯಮ್ಸನ್‌ (ನಾಯಕ), ವಿಜಯ್‌ ಶಂಕರ್‌, ಮನೀಶ್‌ ಪಾಂಡೆ, ಯೂಸುಫ್‌ ಪಠಾಣ್‌, ರಶೀದ್‌ ಖಾನ್‌, ಭುವನೇಶ್ವರ್‌, ಸಿದ್ಧಾಥ್‌ರ್‍ ಕೌಲ್‌, ಸಂದೀಪ್‌ ಶರ್ಮಾ, ಶಬಾಜ್‌ ನದೀಮ್‌.

ಸ್ಥಳ: ಹೈದರಾಬಾದ್‌, ಪಂದ್ಯಆರಂಭ: ಸಂಜೆ 4ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1

ಪಿಚ್‌ ರಿಪೋರ್ಟ್‌

ರಾಜೀವ್‌ ಗಾಂಧಿ ಕ್ರೀಡಾಂಗಣದ ಪಿಚ್‌ ಬ್ಯಾಟ್ಸ್‌ಮನ್‌ ಸ್ನೇಹಿಯಾಗಿದ್ದು ಈ ಪಂದ್ಯದಲ್ಲೂ ರನ್‌ ಹೊಳೆ ಹರಿಯುವ ನಿರೀಕ್ಷೆ ಇದೆ. ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಸನ್‌ರೈಸ​ರ್ಸ್ 199 ರನ್‌ ಗುರಿಯನ್ನು ಇನ್ನೂ ಒಂದು ಓವರ್‌ ಬಾಕಿ ಇರುವಂತೆಯೇ ತಲುಪಿತ್ತು. ಮೊದಲು ಬ್ಯಾಟ್‌ ಮಾಡುವ ತಂಡ 200ಕ್ಕಿಂತ ಹೆಚ್ಚು ಮೊತ್ತ ದಾಖಲಿಸಿದರೂ ಸುರಕ್ಷಿತವಲ್ಲ. ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸಲಿದ್ದಾರೆ.