ಬೆಂಗಳೂರು[ಮೇ.13]: ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್’ಕಿಂಗ್ಸ್ ನಡುವಿನ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ 1 ರನ್’ಗಳ ರೋಚಕ ಜಯ ಸಾಧಿಸಿ ದಾಖಲೆಯ 4ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

IPL 2019: ಚೆನ್ನೈಗೆ ಆಘಾತ- ಮುಂಬೈಗೆ ಚಾಂಪಿಯನ್ ಕಿರೀಟ

ಮುಂಬೈ ನೀಡಿದ್ದ 150 ರನ್’ಗಳ ಗುರಿ ಬೆನ್ನತ್ತಿದ್ದ ಚೆನ್ನೈ ಕೊನೆಯ ಓವರ್’ನಲ್ಲಿ ಆಘಾತಕಾರಿ ಸೋಲು ಕಂಡು ಸತತ ಎರಡನೇ ಬಾರಿಗೆ ಕಪ್ ಗೆಲ್ಲುವ ಅವಕಾಶ ಕೈಚೆಲ್ಲಿತು. ಕೊನೆಯ ಓವರ್’ನಲ್ಲಿ ಚೆನ್ನೈ ಗೆಲ್ಲಲು 9 ರನ್’ಗಳ ಅವಶ್ಯಕತೆಯಿತ್ತು. 16ನೇ ಓವರ್’ನಲ್ಲಿ 20 ರನ್ ನೀಡಿ ದುಬಾರಿಯಾಗಿದ್ದ ಮಾಲಿಂಗ, ಕೊನೆಯ ಓವರ್ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. 20ನೇ ಓವರ್’ನ ಮೊದಲ ಎಸೆತವನ್ನು ವಾಟ್ಸನ್ ಲಾಂಗ್ ಆನ್’ನತ್ತ ಬಾರಿಸಿ ಕೇವಲ ಒಂದು ರನ್ ಗಳಿಸಿದರು. ಲೋ ಫುಲ್ ಟಾಸ್ ಆಗಿ ಬಂದ ಎರಡನೇ ಎಸೆತದಲ್ಲಿ ಜಡೇಜಾ ಒಂದು ರನ್ ಕಲೆಹಾಕಿದರು. ಮೂರನೇ ಎಸೆತದಲ್ಲಿ ವಾಟ್ಸನ್ 2 ರನ್ ಗಳಿಸುವ ಮೂಲಕ ಚೆನ್ನೈಗೆ ಗೆಲುವಿನ ಆಸೆ ಹುಟ್ಟಿಸಿದರು. ಆದರೆ ನಾಲ್ಕನೇ ಎಸೆತದಲ್ಲಿ ಒಂದು ರನ್’ಗಳಿಸಿ ಎರಡನೇ ರನ್ ಕದಿಯುವ ವೇಳೆ ಡಿಕಾಕ್ ಮಾಡಿದ ಅದ್ಭುತ ರನೌಟ್’ಗೆ ವಾಟ್ಸನ್ ಪೆವಿಲಿಯನ್ ಸೇರಿದರು. ಆಗ ಕೊನೆಯ 2 ಎಸೆತಗಳಲ್ಲಿ 4 ರನ್’ಗಳ ಅವಶ್ಯಕತೆಯಿತ್ತು. 5ನೇ ಎಸೆತದಲ್ಲಿ ಶಾರ್ದೂಲ್ ಠಾಕೂರ್ 2 ರನ್ ಗಳಿಸಿದರು. ಕೊನೆಯ ಎಸೆತವನ್ನು ಮಾಲಿಂಗ್ ಸ್ಲೋ ಲೆಗ್’ಕಟ್ಟರ್ ಹಾಕುವ ಮೂಲಕ ಠಾಕೂರ್ ಎಲ್’ಬಿ ಬಲೆಗೆ ಕೆಡವಿದರು. ಈ ಮೂಲಕ ಮುಂಬೈ ಒಂದು ರನ್ ಅಂತರದ ರೋಚಕ ಜಯ ಸಾಧಿಸಿತು.

ಹೀಗಿತ್ತು ನೋಡಿ ಎದೆ ಬಡಿತ ಹೆಚ್ಚಿಸಿದ ಆ ಕೊನೆಯ ಓವರ್:

ಮುಂಬೈ ಇಂಡಿಯನ್ಸ್ ತಂಡ ಈ ಮೊದಲು 2013, 2015, 2017ರಲ್ಲಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ 2019ರಲ್ಲೂ ರೋಹಿತ್ ಕಪ್ ಜಯಿಸಿದ ಸಾಧನೆ ಮಾಡಿದೆ.