ಜೈಪುರ[ಏ.27]: ಸನ್’ರೈಸರ್ಸ್ ಹೈದರಾಬಾದ್ ವಿರುದ್ಧ ಬೌಲಿಂಗ್ ಹಾಗೂ ಬ್ಯಾಟಿಂಗ್’ನಲ್ಲಿ ಸಂಘಟಿತ ಪ್ರದರ್ಶನ ತೋರಿದ ರಾಜಸ್ಥಾನ ರಾಯಲ್ಸ್ ತಂಡ 7 ವಿಕೆಟ್’ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ರಾಜಸ್ಥಾನ ರಾಯಲ್ಸ್ ತಂಡ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದೆ.

ಹೈದರಾಬಾದ್ ನೀಡಿದ್ದ 161 ರನ್’ಗಳ ಗುರಿ ಬೆನ್ನತ್ತಿದ ರಾಜಸ್ಥಾನ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್’ಗೆ ಲಿವಿಂಗ್’ಸ್ಟೋನ್-ಅಜಿಂಕ್ಯ ರಹಾನೆ ಜೋಡಿ 78 ರನ್’ಗಳ ಜತೆಯಾಟ ನಿಭಾಯಿಸಿದರು. ಸ್ಫೋಟಕ ಇನ್ನಿಂಗ್ಸ್ ಕಟ್ಟಿದ ಲಿವಿಂಗ್’ಸ್ಟೋನ್ ಕೇವಲ 26 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 44 ರನ್ ಸಿಡಿಸಿ ರಶೀದ್ ಖಾನ್’ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ರಹಾನೆ 39 ರನ್ ಬಾರಿಸಿ ಶಕೀಬ್’ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಜತೆಯಾದ ಸಂಜು ಸ್ಯಾಮ್ಸನ್[48*] ಹಾಗೂ ನಾಯಕ ಸ್ಟೀವ್ ಸ್ಮಿತ್ 22 ರನ್ ಬಾರಿಸುವ ಮೂಲಕ ತಂಡವನ್ನು ಗೆಲುವಿನತ್ತ ಸಾಗಿಸಿದರು.

ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಸನ್’ರೈಸರ್ಸ್ ಹೈದರಾಬಾದ್ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ನಾಯಕ ಕೇನ್ ವಿಲಿಯಮ್ಸನ್ ಕೇವಲ 13 ರನ್ ಬಾರಿಸಿ ಕನ್ನಡಿಗ ಶ್ರೇಯಸ್ ಗೋಪಾಲ್’ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ವಾರ್ನರ್ ಕೂಡಿಕೊಂಡ ಮತ್ತೋರ್ವ ಕನ್ನಡಿಗ ಮನೀಶ್ ಪಾಂಡೆ ಆಕರ್ಷಕ ಇನ್ನಿಂಗ್ಸ್ ಕಟ್ಟಿದರು. ಎರಡನೇ ವಿಕೆಟ್’ಗೆ ಈ ಜೋಡಿ 75 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಎಚ್ಚರಿಕೆ ಆಟವಾಡಿದ ವಾರ್ನರ್ 32 ಎಸೆತಗಳಲ್ಲಿ ಒಂದೂ ಬೌಂಡರಿ ಬಾರಿಸದೆಯೇ 37 ರನ್ ಗಳಿಸಿ ಓಶಾನೆ ಥಾಮಸ್’ಗೆ ವಿಕೆಟ್ ಒಪ್ಪಿಸಿದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ಸ್ಫೋಟಕ ಬ್ಯಾಟಿಂಗ್ ನಡೆಸಿದ ಮನೀಶ್ ಪಾಂಡೆ ಕೇವಲ 36 ಎಸೆತಗಳಲ್ಲಿ 9 ಬೌಂಡರಿ ಸಹಿತ 61 ರನ್ ಸಿಡಿಸಿದರು. 

ನಾಟಕೀಯ ಕುಸಿತ: ಒಂದು ಹಂತದಲ್ಲಿ 120 ರನ್’ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಸನ್’ರೈಸರ್ಸ್ ಮನೀಶ್ ಪಾಂಡೆ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ನಾಟಕೀಯ ಕುಸಿತ ಕಂಡಿತು. ಆ ಬಳಿಕ 26 ರನ್ ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತು. ಕೆಳ ಕ್ರಮಾಂಕದಲ್ಲಿ ರಶೀದ್ ಖಾನ್[17] ಹೊರತು ಪಡಿಸಿ ಉಳಿದ್ಯಾವ ಬ್ಯಾಟ್ಸ್’ಮನ್’ಗಳು ಎರಡಂಕಿ ಮೊತ್ತ ತಲುಪಲು ಸಫಲರಾಗಲಿಲ್ಲ.