ಮುಂಬೈ[ಏ.13]: ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಕ್ವಿಂಟಾನ್ ಡಿಕಾಕ್ ಆಕರ್ಷಕ ಅರ್ಧಶತಕ ಹಾಗೂ ನಾಯಕ ರೋಹಿತ್ ಶರ್ಮಾ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು 187 ರನ್ ಬಾರಿಸಿದ್ದು, ರಾಜಸ್ಥಾನ ತಂಡಕ್ಕೆ ಸವಾಲಿನ ಗುರಿ ನೀಡಿದೆ.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಮುಂಬೈ ಭರ್ಜರಿ ಆರಂಭ ಪಡೆಯಿತು. ಮೊದಲ ವಿಕೆಟ್’ಗೆ ನಾಯಕ ರೋಹಿತ್ ಶರ್ಮಾ ಹಾಗೂ ಡಿಕಾಕ್ ಕೇವಲ 10.5 ಓವರ್’ಗಳಲ್ಲಿ 96 ರನ್’ಗಳ ಜತೆಯಾಟವಾಡಿದರು. ರೋಹಿತ್ ಶರ್ಮಾ ಕೇವಲ 32 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 47 ರನ್ ಬಾರಿಸಿ ಆರ್ಚರ್’ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್[16] ಹಾಗೂ ಕಿರಾನ್ ಪೊಲ್ಲಾರ್ಡ್[6] ಕೂಡಾ ಪೆವಿಲಿಯನ್ ಸೇರಿದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಮತ್ತೊಂದೆಡೆ ದಿಟ್ಟ ಬ್ಯಾಟಿಂಗ್ ನಡೆಸಿದ ಡಿಕಾಕ್ 52 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 81 ರನ್ ಬಾರಿಸಿ ಆರ್ಚರ್’ಗೆ ಮೂರನೇ ಬಲಿ ಆದರು. ಇನ್ನು ಕೊನೆಯಲ್ಲಿ ಅಬ್ಬರಿಸಿದ ಪಾಂಡ್ಯ 11 ಎಸೆತಗಳಲ್ಲಿ 1 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 28 ರನ್ ಬಾರಿಸಿ ತಂಡದ ಮೊತ್ತವನ್ನು 180ರ ಗಡಿ ದಾಟಿಸುವಲ್ಲಿ ನೆರವಾದರು.

ರಾಜಸ್ಥಾನ ರಾಯಲ್ಸ್ ಪರ ಜೋಪ್ರಾ ಆರ್ಚರ್ 3 ವಿಕೆಟ್ ಪಡೆದರೆ, ಧವಳ್ ಕುಲಕರ್ಣಿ, ಜಯದೇವ್ ಉನಾದ್ಕಟ್ ತಲಾ ಒಂದೊಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ರಾಜಸ್ಥಾನ ರಾಯಲ್ಸ್: 187/5
ಡಿಕಾಕ್: 81
ಆರ್ಚರ್: 39/3
[* ವಿವರ ಅಪೂರ್ಣ]