ಹೈದರಾಬಾದ್[ಮೇ.12]: ಬಹುನಿರೀಕ್ಷಿತ 12ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ದಾಖಲೆಯ 4ನೇ ಐಪಿಎಲ್ ಕಪ್ ಎತ್ತಿ ಹಿಡಿಯಲು ಚೆನ್ನೈ ಸೂಪರ್’ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈಗಾಗಾಲೇ ತಲಾ 3 ಐಪಿಎಲ್ ಕಪ್ ಜಯಿಸಿರುವ ಉಭಯ ತಂಡಗಳು ಇದೀಗ ಮತ್ತೊಂದು ಕಪ್ ತಮ್ಮ ತೆಕ್ಕೆಗೆ ಹಾಕಿಕೊಳ್ಳಲು ಕಾದಾಡಲಿವೆ.

ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಮೈದಾನದಲ್ಲಿ ನಡೆಯಲಿರುವ ಫೈನಲ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್’ಕಿಂಗ್ಸ್ ತಂಡವನ್ನು ಈ ಆವೃತ್ತಿಯಲ್ಲೇ ಮೂರು ಬಾರಿ ಸೋಲಿಸಿ ಆತ್ಮವಿಶ್ವಾದಿಂದ ಬೀಗುತ್ತಿರುವ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಪಡೆ ಇದೀಗ ಮತ್ತೊಂದು ಅಂತಹದ್ದೇ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ. ಕುತೂಹಲದ ಸಂಗತಿಯೆಂದರೆ ಇದುವರೆಗೂ ಚೆನ್ನೈ ಹಾಗೂ ಮುಂಬೈ ತಂಡಗಳು 27 ಬಾರಿ ಮುಖಾಮುಖಿಯಾಗಿದ್ದು, ಮುಂಬೈ ಇಂಡಿಯನ್ಸ್ ತಂಡ 16 ಬಾರಿ ಜಯ ಸಾಧಿಸಿದ್ದರೆ, ಚೆನ್ನೈ ಸೂಪರ್’ಕಿಂಗ್ಸ್ ತಂಡವು ಕೇವಲ 11 ಬಾರಿ ಗೆಲುವಿನ ಸಿಹಿಯುಂಡಿದೆ. ಇನ್ನು ಈ 2 ತಂಡಗಳ ನಡುವೆ ನಡೆದ ಕಳೆದ 8 ಐಪಿಎಲ್ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡ 7ರಲ್ಲಿ ಜಯ ಸಾಧಿಸಿದ್ದರೆ, ಚೆನ್ನೈ ಗೆದ್ದಿರೋದು ಕೇವಲ ಒಮ್ಮೆ ಮಾತ್ರ. 

ಲೀಗ್ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ 9 ಗೆಲುವು ಹಾಗೂ 5 ಸೋಲಿನೊಂದಿಗೆ 18 ಅಂಕ ಕಲೆಹಾಕುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದ ಮುಂಬೈ ಇಂಡಿಯನ್ಸ್ ತಂಡ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಧೋನಿ ಪಡೆಗೆ ಶಾಕ್ ನೀಡಿ ಫೈನಲ್ ಪ್ರವೇಶಿಸಿದೆ. 

12ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಫೈನಲ್’ವರೆಗಿನ ಏಳು-ಬೀಳಿನ ಹಾದಿ ಹೇಗಿತ್ತು ಎನ್ನುವುದನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.