ಜೈಪುರ[ಏ.27]: ತಾರಾ ವಿದೇಶಿ ಆಟಗಾರರ ಅನುಪಸ್ಥಿತಿಯಲ್ಲಿ ರಾಜಸ್ಥಾನ ರಾಯಲ್ಸ್‌ ಹಾಗೂ ಸನ್‌ರೈಸರ್ಸ್ ಹೈದರಾಬಾದ್‌ ತಂಡಗಳು ಶನಿವಾರ ಇಲ್ಲಿನ ಸವಾಯ್‌ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಜೋಸ್‌ ಬಟ್ಲರ್‌ ಮುಂಚಿತವಾಗಿಯೇ ತವರಿಗೆ ವಾಪಸಾದ ಕಾರಣ, ರಾಯಲ್ಸ್‌ಗೆ ಸ್ವಲ್ಪ ಮಟ್ಟಿಗಿನ ಹಿನ್ನಡೆ ಉಂಟಾಗಿತ್ತು. ಇದೀಗ ಆಲ್ರೌಂಡರ್‌ಗಳಾದ ಜೋಫ್ರಾ ಆರ್ಚರ್‌ ಹಾಗೂ ಬೆನ್‌ ಸ್ಟೋಕ್ಸ್‌ ಸಹ ಇಂಗ್ಲೆಂಡ್‌ಗೆ ತೆರಳಿದ್ದಾರೆ. 

ಸನ್‌ರೈಸ​ರ್ಸ್’ಗೆ ಆರಂಭಿಕ ಬ್ಯಾಟ್ಸ್‌ಮನ್‌, ವಿಕೆಟ್‌ ಕೀಪರ್‌ ಜಾನಿ ಬೇರ್‌ಸ್ಟೋವ್‌ ಅನುಪಸ್ಥಿತಿ ಕಾಡಲಿದೆ. ಬೇರ್‌ಸ್ಟೋವ್‌ ಹಾಗೂ ವಾರ್ನರ್‌ ಈ ಆವೃತ್ತಿಯ ಶ್ರೇಷ್ಠ ಆರಂಭಿಕ ಜೋಡಿ ಎಂದು ಕರೆಸಿಕೊಂಡಿದ್ದು, ಸನ್‌ರೈಸ​ರ್ಸ್ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ. ವಾರ್ನರ್‌ ಜತೆ ಮಾರ್ಟಿನ್‌ ಗಪ್ಟಿಲ್‌ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆ ಇದೆ. ವಿಕೆಟ್‌ ಕೀಪರ್‌ ಸ್ಥಾನಕ್ಕೆ ವೃದ್ಧಿಮಾನ್‌ ಸಾಹರನ್ನು ಆಡಿಸಲಾಗುವುದು ಎನ್ನಲಾಗಿದೆ.

ರಾಜಸ್ಥಾನ ಈಗಾಗಲೇ ಆಸ್ಟನ್‌ ಟರ್ನರ್‌ ಹಾಗೂ ಲಿಯಾಮ್‌ ಲಿವಿಂಗ್‌ಸ್ಟೋನ್‌ಗೆ ಅವಕಾಶ ನೀಡಿ ಕೈಸುಟ್ಟುಕೊಂಡಿದೆ. ಹೀಗಾಗಿ ವಿದೇಶಿ ಆಟಗಾರರ ಆಯ್ಕೆಯಲ್ಲಿ ಗೊಂದಲ ಎದುರಾಗಲಿದೆ. ಪ್ಲೇ-ಆಫ್‌ ಲೆಕ್ಕಾಚಾರದ ದೃಷ್ಟಿಯಿಂದ ಈ ಪಂದ್ಯ ಎರಡೂ ತಂಡಗಳಿಗೆ ಮಹತ್ವದಾಗಿದೆ. ಸನ್‌ರೈಸ​ರ್ಸ್ 10 ಪಂದ್ಯಗಳಲ್ಲಿ 5 ಗೆಲುವುಗಳೊಂದಿಗೆ 10 ಅಂಕ ಗಳಿಸಿದೆ. ಇನ್ನುಳಿದ 4 ಪಂದ್ಯಗಳಲ್ಲಿ ಕನಿಷ್ಠ 3ರಲ್ಲಿ ಗೆಲುವು ಸಾಧಿಸಬೇಕಿದೆ. ತಂಡದ ನೆಟ್‌ ರನ್‌ರೇಟ್‌ ಉಳಿದೆಲ್ಲಾ ತಂಡಗಳಿಗಿಂತ ಉತ್ತಮವಾಗಿದ್ದು, ಮತ್ತಷ್ಟು ಸುಧಾರಣೆ ಕಾಣಲು ಎದುರು ನೋಡುತ್ತಿದೆ. ಕೊನೆ ಹಂತದಲ್ಲಿ ನೆಟ್‌ ರನ್‌ರೇಟ್‌ ಆಧಾರದಲ್ಲಿ ಪ್ಲೇ-ಆಫ್‌ ಸ್ಥಾನಗಳು ನಿರ್ಧಾರವಾಗುವ ಸಾಧ್ಯತೆ ಹೆಚ್ಚಿರುವ ಕಾರಣ, ಸನ್‌ರೈಸರ್ಸ್ ಪಂದ್ಯ ಗೆಲ್ಲುವುದು ಮಾತ್ರವಲ್ಲ, ಉತ್ತಮ ರನ್‌ರೇಟ್‌ ಕಾಯ್ದುಕೊಳ್ಳಲು ಎದುರು ನೋಡುತ್ತಿದೆ. ತಂಡ ಡೇವಿಡ್‌ ವಾರ್ನರ್‌ ಮೇಲೆಯೇ ಹೆಚ್ಚು ಅವಲಂಬಿತಗೊಂಡಿದೆ. ಈ ಆವೃತ್ತಿಯಲ್ಲಿ ವಾರ್ನರ್‌ 1 ಶತಕ, 7 ಅರ್ಧಶತಕಗಳೊಂದಿಗೆ 574 ರನ್‌ ಸಿಡಿಸಿ, ತಂಡದ ಯಶಸ್ಸಿನಲ್ಲಿ ಅತಿದೊಡ್ಡ ಪಾತ್ರ ವಹಿಸಿದ್ದಾರೆ.

ಮತ್ತೊಂದೆಡೆ ರಾಜಸ್ಥಾನ ರಾಯಲ್ಸ್‌ ಈ ಹಿಂದಿನ ಒಂದೆರಡು ಪಂದ್ಯಗಳಿಂದಲೇ ಮಾಡು ಇಲ್ಲವೇ ಮಡಿ ಸ್ಥಿತಿ ಎದುರಿಸುತ್ತಿದೆ. ತಂಡ 11 ಪಂದ್ಯಗಳಿಂದ 4ರಲ್ಲಿ ಗೆದ್ದು 8 ಅಂಕ ಗಳಿಸಿದೆ. ಇನ್ನುಳಿದ 3 ಪಂದ್ಯಗಳಲ್ಲಿ ಗೆದ್ದರೆ ಗರಿಷ್ಠ 14 ಅಂಕ ತಲುಪಬಹುದು. ಆದರೂ ಪ್ಲೇ-ಆಫ್‌ನಲ್ಲಿ ಸ್ಥಾನ ಖಚಿತವಿಲ್ಲ. ಉಳಿದ ತಂಡಗಳ ಫಲಿತಾಂಶದ ಆಧಾರದ ಮೇಲೆ ತಂಡದ ಭವಿಷ್ಯ ನಿಧಾರವಾಗಲಿದೆ. ಈ ಪಂದ್ಯದಲ್ಲಿ ರಾಯಲ್ಸ್‌ ಸೋತರೆ, ಅಧಿಕೃತವಾಗಿ ಹೊರಬೀಳಲಿದೆ. ನಾಯಕ ಸ್ಟೀವ್‌ ಸ್ಮಿತ್‌, ಅಜಿಂಕ್ಯ ರಹಾನೆ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಯುವ ಆಲ್ರೌಂಡರ್‌ ರಿಯಾನ್‌ ಪರಾಗ್‌ ಭರವಸೆ ಹೆಚ್ಚಿಸಿದ್ದಾರೆ.

ಪಿಚ್‌ ರಿಪೋರ್ಟ್‌

ಜೈಪುರ ಪಿಚ್‌ನಲ್ಲಿ ಈ ಆವೃತ್ತಿಯಲ್ಲಿ 6 ಪಂದ್ಯಗಳು ನಡೆದಿದ್ದು, ಮೊದಲು ಬೌಲ್‌ ಮಾಡಿದ ತಂಡ 5 ಪಂದ್ಯಗಳಲ್ಲಿ ಗೆದ್ದಿದೆ. ಹೀಗಾಗಿ ಟಾಸ್‌ ಪ್ರಮುಖ ಪಾತ್ರ ವಹಿಸಲಿದೆ. ತವರು ತಂಡ 4 ಪಂದ್ಯಗಳಲ್ಲಿ ಸೋತಿದೆ. ದೊಡ್ಡ ಮೊತ್ತ ನಿರೀಕ್ಷೆ ಮಾಡುವುದು ಕಷ್ಟ. ವೇಗಿಗಳಿಗೆ ಹೆಚ್ಚಿನ ನೆರವು ಸಿಗಲಿದೆ.

ಒಟ್ಟು ಮುಖಾಮುಖಿ: 10

ರಾಜಸ್ಥಾನ 04

ಹೈದರಾಬಾದ್‌ 06

ರಾಜಸ್ಥಾನ: ರಹಾನೆ, ಸಂಜು, ಸ್ಟೀವ್‌ ಸ್ಮಿತ್‌ (ನಾಯಕ), ಟರ್ನರ್‌, ರಿಯಾನ್‌, ಬಿನ್ನಿ, ಶ್ರೇಯಸ್‌, ಲಿಯಾಮ್‌, ಉನಾದ್ಕತ್‌, ಥಾಮಸ್‌, ಆ್ಯರೋನ್‌.

ಹೈದ್ರಾಬಾದ್‌: ವಾರ್ನರ್‌, ಗಪ್ಟಿಲ್‌, ಮನೀಶ್‌, ವಿಜಯ್‌, ಸಾಹ, ಶಕೀಬ್‌, ದೀಪಕ್‌, ರಶೀದ್‌, ಭುವನೇಶ್ವರ್‌, ಸಂದೀಪ್‌, ಖಲೀಲ್‌ ಅಹ್ಮದ್‌.

ಸ್ಥಳ: ಜೈಪುರ
ಆರಂಭ: ರಾತ್ರಿ 8.00
ನೇರ ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್ 1