ಬೆಂಗಳೂರು[ಮೇ.04]: ಐಪಿಎಲ್‌ ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದಿರುವ ಆರ್‌ಸಿಬಿ, ಸನ್‌ರೈಸ​ರ್ಸ್ ಹೈದರಾಬಾದ್‌ ತಂಡದ ಪ್ಲೇ-ಆಫ್‌ ಆಸೆಗೂ ತಣ್ಣೀರೆರೆಚಿದರೆ ಅಚ್ಚರಿಯಿಲ್ಲ. 
ಬೆಂಗಳೂರು ತಂಡಕ್ಕಿದು ಈ ಆವೃತ್ತಿಯ ಕೊನೆ ಪಂದ್ಯವಾಗಿದ್ದು, ಗೆಲುವಿನೊಂದಿಗೆ ವಿದಾಯ ಹೇಳಲು ಎದುರು ನೋಡುತ್ತಿದೆ. ಅತ್ತ ಸನ್‌ರೈಸ​ರ್ಸ್ ಪಾಲಿಗಿದು ಮಾಡು ಇಲ್ಲವೇ ಮಡಿ ಪಂದ್ಯ. ಮುಂಬೈ ವಿರುದ್ಧ ಸೂಪರ್‌ ಓವರ್‌ನಲ್ಲಿ ಅನುಭವಿಸಿದ ಸೋಲು, ಸನ್‌ರೈಸರ್ಸ್’ಗೆ ದೊಡ್ಡ ಪೆಟ್ಟು ನೀಡಿದೆ. ಈ ಪಂದ್ಯದಲ್ಲಿ ಗೆದ್ದರೆ ತಂಡ 14 ಅಂಕ ಗಳಿಸಲಿದ್ದು, ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ಉಳಿದುಕೊಳ್ಳುವ ಸಾಧ್ಯತೆ ಹೆಚ್ಚಿರಲಿದೆ. ಕಳೆದ ಪಂದ್ಯದಲ್ಲಿ ಸೋಲು ಅನುಭವಿಸಿದರೂ, ಸನ್‌ರೈಸ​ರ್ಸ್ ನೆಟ್‌ ರನ್‌ರೇಟ್‌ +0.653 ಇದೆ. ಪ್ಲೇ-ಆಫ್‌ ಪೈಪೋಟಿಯಲ್ಲಿರುವ ಉಳಿದೆಲ್ಲಾ ತಂಡಗಳಿಗಿಂತ ಉತ್ತಮ ರನ್‌ರೇಟ್‌ ಹೊಂದಿರುವ ಕಾರಣ, ಸನ್‌ರೈಸರ್ಸ್’ಗೆ ಮುಂದಿನ ಹಂತಕ್ಕೇರಲು ಅವಕಾಶ ಹೆಚ್ಚಿರಲಿದೆ.

ಡೇವಿಡ್‌ ವಾರ್ನರ್‌ ಅನುಪಸ್ಥಿತಿ ಸನ್‌ರೈಸ​ರ್ಸ್’ಗೆ ಬಲವಾಗಿ ಕಾಡುತ್ತಿದೆ. ನಾಯಕ ಕೇನ್‌ ವಿಲಿಯಮ್ಸನ್‌ ಕಳಪೆ ಲಯ ತಂಡದ ಸಮಸ್ಯೆ ಹೆಚ್ಚಿಸಿದೆ. ಮನೀಶ್‌ ಪಾಂಡೆ ಮೇಲೆ ತಂಡ ಅವಲಂಬಿತಗೊಂಡಿದ್ದು, ತವರು ಮೈದಾನದಲ್ಲಿ ಮಿಂಚಲು ಪಾಂಡೆ ಕಾತರರಾಗಿದ್ದಾರೆ.

ಆರ್‌ಸಿಬಿ ಪಾಲಿಗಿದು ಪ್ರತಿಷ್ಠೆಯ ಪಂದ್ಯವಾಗಿದ್ದು, ಅಂತಿಮ ಪಂದ್ಯದಲ್ಲಿ ತವರು ಅಭಿಮಾನಿಗಳನ್ನು ರಂಜಿಸುವ ಉತ್ಸಾಹದಲ್ಲಿದೆ. ವಿಶ್ವಕಪ್‌ಗೂ ಮುನ್ನ ದೊಡ್ಡ ಇನ್ನಿಂಗ್ಸ್‌ ಆಡಲು ನಾಯಕ ವಿರಾಟ್‌ ಕೊಹ್ಲಿ ಸಹ ಕಾತರಿಸುತ್ತಿದ್ದಾರೆ. ಈ ಆವೃತ್ತಿಯಲ್ಲಿ ತಂಡದಲ್ಲಿರುವ ಬಹುತೇಕ ಆಟಗಾರರಿಗೆ ಅವಕಾಶ ಸಿಕ್ಕಿದೆ. ಆದರೆ ಕರ್ನಾಟಕದ ದೇವದತ್‌ ಪಡಿಕ್ಕಲ್‌, ದೆಹಲಿಯ ಹಿಮ್ಮತ್‌ ಸಿಂಗ್‌ ಹಾಗೂ ಮಿಲಿಂದ್‌ ಕುಮಾರ್‌ ಬೆಂಚ್‌ ಕಾಯುತ್ತಲೇ ಇದ್ದಾರೆ. ಈ ಮೂವರಿಗೆ ಆಡುವ ಹನ್ನೊಂದರಲ್ಲಿ ಸ್ಥಾನ ಸಿಗಲಿದೆಯೇ ಎನ್ನುವ ಕುತೂಹಲವಿದೆ.

ಪಿಚ್‌ ರಿಪೋರ್ಟ್‌

ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ಇಲ್ಲಿ ಪ್ರತಿ ಪಂದ್ಯದಲ್ಲೂ ಸ್ಪರ್ಧಾತ್ಮಕ ಮೊತ್ತ ದಾಖಲಾಗಿದೆ. ವೇಗಿಗಳಿಗೆ ಹೆಚ್ಚಿನ ನೆರವು ನಿರೀಕ್ಷೆ ಮಾಡಬಹುದಾಗಿದೆ. ಮೊದಲು ಬ್ಯಾಟ್‌ ಮಾಡುವ ತಂಡಕ್ಕೆ ಲಾಭ ಜಾಸ್ತಿ.

ಒಟ್ಟು ಮುಖಾಮುಖಿ: 13

ಆರ್‌ಸಿಬಿ: 05

ಸನ್‌ರೈಸ​ರ್ಸ್: 08

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ಕೊಹ್ಲಿ(ನಾಯಕ), ಪಾರ್ಥೀವ್‌, ಡಿ ವಿಲಿಯ​ರ್ಸ್, ಹೆಟ್ಮೇಯರ್‌, ಗುರ್‌ಕೀರತ್‌, ಕ್ಲಾಸನ್‌, ನೇಗಿ, ಉಮೇಶ್‌, ಸೈನಿ, ಖೇಜ್ರೋಲಿಯಾ, ಚಹಲ್‌.

ಸನ್‌ರೈಸರ್ಸ್: ಗಪ್ಟಿಲ್‌, ಸಾಹ, ವಿಲಿಯಮ್ಸನ್‌ (ನಾಯಕ), ಪಾಂಡೆ, ವಿಜಯ್‌, ನಬಿ, ಅಭಿಷೇಕ್‌, ರಶೀದ್‌, ಭುವನೇಶ್ವರ್‌, ಖಲೀಲ್‌, ಸಂದೀಪ್‌ ಶರ್ಮಾ.

ಸ್ಥಳ: ಬೆಂಗಳೂರು
ಪಂದ್ಯ ಆರಂಭ: ರಾತ್ರಿ 8ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1