ಮೊಹಾಲಿ[ಮೇ.03]: ಶುಭ್’ಮನ್ ಗಿಲ್ ಆಕರ್ಷಕ ಅರ್ಧಶತಕದ ನೆರವಿನಿಂದ ಕೋಲ್ಕತಾ ನೈಟ್’ರೈಡರ್ಸ್ 7 ವಿಕೆಟ್’ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಕೆಕೆಆರ್ ತಂಡ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡರೆ, ಪಂಜಾಬ್ ಪ್ಲೇ ಆಫ್ ಕನಸು ಬಹುತೇಕ ಭಗ್ನವಾದಂತಾಗಿದೆ. ಇದೀಗ ಕೆಕೆಆರ್ 12 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. 

ಪಂಜಾಬ್ ನೀಡಿದ್ದ 184 ರನ್’ಗಳ ಸವಾಲಿನ ಗುರಿ ಬೆನ್ನತ್ತಿದ ಕೆಕೆಆರ್ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್’ಗೆ ಲಿನ್-ಗಿಲ್ ಜೋಡಿ 62 ರನ್’ಗಳ ಜತೆಯಾಟವಾಡವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಲಿನ್ ಕೇವಲ 22 ಎಸೆತಗಳಲ್ಲಿ 46 ರನ್ ಬಾರಿಸಿ ಟೈಗೆ ವಿಕೆಟ್ ಒಪ್ಪಿಸಿದರು. ಇನ್ನು ಉಪಯುಕ್ತ ಬ್ಯಾಟಿಂಗ್ ನಡೆಸಿದ ರಾಬಿನ್ ಉತ್ತಪ್ಪ 22 ರನ್ ಬಾರಿಸಿದರೆ, ರಸೆಲ್ 24 ರನ್ ಸಿಡಿಸಿ ಪೆವಿಲಿಯನ್ ಸೇರಿದರು. ಮತ್ತೊಂದು ತುದಿಯಲ್ಲಿ ಎಚ್ಚರಿಕೆಯ ಆಟವಾಡಿದ ಗಿಲ್ 49 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 65 ರನ್ ಬಾರಿಸಿ ಅಜೇಯರಾಗುಳಿದರು. ಕೊನೆಯಲ್ಲಿ 9 ಎಸೆತಗಳಲ್ಲಿ 21 ರನ್ ಚಚ್ಚಿದ ನಾಯಕ ದಿನೇಶ್ ಕಾರ್ತಿಕ್ ತಂಡವನ್ನು ಅಜೇಯವಾಗಿ ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮೊದಲು ಸ್ಯಾಮ್ ಕರ್ರನ್[55*] ಹಾಗೂ ನಿಕೋಲಸ್ ಪೋರನ್[48] ಬ್ಯಾಟಿಂಗ್ ನೆರವಿನಿಂದ ಕಿಂಗ್ಸ್ ಇಲೆವನ್ ಪಂಜಾಬ್ 183 ರನ್ ಬಾರಿಸಿತ್ತು.  

ಸಂಕ್ಷಿಪ್ತ ಸ್ಕೋರ್:

KXIP : 183/6
ಸ್ಯಾಮ್ ಕರ್ರನ್: 55*
ಸಂದೀಪ್ ವಾರಿಯರ್: 31/2

KKR: 185/3

ಶುಭ್’ಮನ್ ಗಿಲ್: 65*

ಶಮಿ: 15/1