ನವದೆಹಲಿ[ಏ.28]: 12 ಆವೃತ್ತಿಯ ಐಪಿಎಲ್ ಮುಕ್ತಾಯದ ಹಂತ ಸಮೀಪಿಸುತ್ತಿದ್ದಂತೆ ಲಯ ಕಂಡುಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಕೊನೆಯ ಅವಕಾಶದ ಪ್ಲೇ ಆಫ್‌ಗಾಗಿ ಕಸರತ್ತು ನಡೆಸುತ್ತಿದೆ. ಭಾನುವಾರ ಇಲ್ಲಿನ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ ಸತತ 4ನೇ ಜಯದ ಮೇಲೆ ಕಣ್ಣಿಟ್ಟಿದೆ.

ಡೆಲ್ಲಿ ತಂಡ ಆಡಿರುವ 11 ಪಂದ್ಯಗಳಲ್ಲಿ 7 ರಲ್ಲಿ ಗೆಲುವು ಸಾಧಿಸಿದ್ದು ಕೇವಲ 4 ರಲ್ಲಿ ಮಾತ್ರ ಸೋಲುಂಡಿದೆ. 14 ಅಂಕಗಳೊಂದಿಗೆ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿರುವ ಡೆಲ್ಲಿ ತಂಡ ಇನ್ನೊಂದು ಗೆಲುವು ಪಡೆದರೆ, ಪ್ಲೇ ಆಫ್ ಹಂತವನ್ನು ಖಚಿತಪಡಿಸಿಕೊಳ್ಳಲಿದೆ. ಆರ್‌ಸಿಬಿ ವಿರುದ್ಧದ ಪಂದ್ಯ ಸೇರಿದಂತೆ ಡೆಲ್ಲಿ ಉಳಿದ 3 ಪಂದ್ಯಗಳಲ್ಲಿ 1ರಲ್ಲಿ ಗೆದ್ದರೂ ಮುಂದಿನ ಹಂತಕ್ಕೇರುವುದು ಪಕ್ಕಾ ಆಗಲಿದೆ.

ಆರಂಭಿಕ ಶಿಖರ್ ಧವನ್, ಪೃಥ್ವಿ ಶಾ ಬ್ಯಾಟಿಂಗ್ ಲಯ ಕಂಡುಕೊಂಡಿದ್ದಾರೆ. ಮಿಡ್ಲ್ ಆರ್ಡರ್‌ನಲ್ಲಿ ರಿಷಭ್ ಪಂತ್, ಕಾಲಿನ್ ಇನ್‌ಗ್ರಾಂ ಮೊತ್ತ ಹೆಚ್ಚಿಸುವ ಕಾರ್ಯದಲ್ಲಿ ನಿರತರಾಗಲಿದ್ದಾರೆ. ಬೌಲಿಂಗ್‌ನಲ್ಲಿ ವೇಗಿ ರಬಾಡ ಬಲ ತಂಡಕ್ಕಿದೆ. ಸತತ 6 ಸೋಲುಗಳಿಂದ ಕಂಗೆಟ್ಟಿದ್ದ ಬಳಿಕ ಜಯದ ಹಾದಿಗೆ ಮರಳಿರುವ ಕೊಹ್ಲಿ ಪಡೆ, ತವರಿನಲ್ಲಿ ಪಂಜಾಬ್ ವಿರುದ್ಧ ಗೆದ್ದು ಹ್ಯಾಟ್ರಿಕ್ ಜಯ ಸಾಧಿಸಿತ್ತು. ಈಗ ಉತ್ತಮ ನೆಟ್ ರನ್‌ರೇಟ್ ಕಾಯ್ದು ಕೊಂಡು ಜಯ ಸಾಧಿಸಿ ಮುಂದಿನ ಹಂತದ ಕೊನೆಯ ಅವಕಾಶಕ್ಕಾಗಿ ಜಾತಕ ಪಕ್ಷಿಯಂತೆ ಕಾಯಲು ಸಜ್ಜಾಗಿದೆ. ಉಳಿದಿರುವ 3 ಪಂದ್ಯಗಳಲ್ಲಿ ಆರ್‌ಸಿಬಿ ಜಯ ಸಾಧಿಸಲೇಬೇಕಿದೆ. ಒಂದರಲ್ಲಿ ಸೋತರೂ ಪ್ಲೇ ಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಬೀಳಲಿದೆ.

ಪಂಜಾಬ್ ವಿರುದ್ಧ ನಾಯಕ ಕೊಹ್ಲಿ, ಆಲ್ರೌಂಡರ್ ಮೋಯಿನ್ ಅಲಿ ವೈಫಲ್ಯ ಕಂಡರೂ, ಪಾರ್ಥೀವ್ ಪಟೇಲ್, ಡಿವಿಲಿಯರ್ಸ್, ಸ್ಟೋಯ್ನಿಸ್ ಅಬ್ಬರದ ಬ್ಯಾಟಿಂಗ್ ನಡೆಸಿ ದೊಡ್ಡ ಮೊತ್ತ ಕಲೆಹಾಕಲು ನೆರವಾಗಿದ್ದರು. ಪ್ರತಿ ಪಂದ್ಯದಲ್ಲೂ ಪಾರ್ಥೀವ್ ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದು ತಂಡಕ್ಕೆ ಸ್ಫೋಟಕ ಆರಂಭ ನೀಡುವಲ್ಲಿ ಸಫಲರಾಗುತ್ತಿದ್ದಾರೆ. ಡೆಲ್ಲಿ ವಿರುದ್ಧದ ಈ ಪಂದ್ಯದಲ್ಲಿ ಆರ್‌ಸಿಬಿಯ ಕೆಲ ವಿದೇಶಿ ಆಟಗಾರರು ಅಲಭ್ಯರಾಗಿದ್ದಾರೆ. ಇದರಲ್ಲಿ ಮೋಯಿನ್ ಅಲಿ, ಸ್ಟೋಯ್ನಿಸ್ ಪ್ರಮುಖರು. ಸ್ಟೇನ್ ಈಗಾಗಲೇ ಗಾಯಗೊಂಡು ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಹೀಗಾಗಿ ಆರ್‌ಸಿಬಿಗೆ ಮತ್ತೆ ದೇಶಿಯ ಆಟಗಾರರೇ ಕೈಹಿಡಿಯಬೇಕಾದ ಪರಿಸ್ಥಿತಿ ತಲೆದೋರಿದೆ. ಪಂಜಾಬ್ ವಿರುದ್ಧ ವೇಗಿ ಉಮೇಶ್ ಯಾದವ್, ನವದೀಪ್ ಸೈನಿ ಉತ್ತಮ ಬೌಲಿಂಗ್ ಮಾಡಿದ್ದರು. ಅಂತಹದ್ದೇ ಪ್ರದರ್ಶನ, ಡೆಲ್ಲಿ ವಿರುದ್ಧ ಮೂಡಿದರೆ ಗೆಲುವು ಅಸಾಧ್ಯವೇನಲ್ಲ. ಆಲ್ರೌಂಡರ್ ಸ್ಥಾನದಲ್ಲಿ ಆಡುತ್ತಿರುವ ಪವನ್ ನೇಗಿ ಅವರಿಂದ ಉತ್ತಮ ಪ್ರದರ್ಶನ ಹೊರಬಂದಿಲ್ಲ. ತಜ್ಞ ಬ್ಯಾಟ್ಸ್‌ಮನ್ ಸ್ಥಾನದಲ್ಲಿ ಆಡುತ್ತಿರುವ ಅಕ್ಷ್ ದೀಪ್’ನಾಥ್ ಹೇಳಿಕೊಳ್ಳುವಂತಹ ಆಟ ನೀಡಿಲ್ಲ. ಆದರೂ ಆರ್‌ಸಿಬಿ ಜಯದ ಆಸೆಯನ್ನು ಕೈಬಿಟ್ಟಿಲ್ಲ.

ಪಿಚ್ ರಿಪೋರ್ಟ್:

ಕೋಟ್ಲಾ ಪಿಚ್ ನಿಧಾನಗತಿಯ ಬೌಲಿಂಗ್‌ಗೆ ಹೆಚ್ಚಿನ ನೆರವು ನೀಡಲಿದೆ. ಚೆಂಡು ಹೆಚ್ಚು ತಿರುವು ಪಡೆಯುವುದರಿಂದ ಬ್ಯಾಟ್ಸ್’ಮನ್‌ಗಳಿಗೆ ರನ್ ಗಳಿಸುವುದು ಸವಾಲಾಗಿರಲಿದೆ. ಮೊದಲು ಬ್ಯಾಟಿಂಗ್ ಮಾಡುವ ತಂಡ 170ಕ್ಕೂ ಅಧಿಕ ರನ್ ಗಳಿಸಿದರೆ ಮಾತ್ರ ಗೆಲುವು ಸಾಧಿಸುವ ಸಾಧ್ಯತೆ ಅಧಿಕವಾಗಿರಲಿದೆ. ಟಾಸ್ ಪ್ರಮುಖ ಪಾತ್ರ ವಹಿಸಲಿದೆ.

ಸಂಭಾವ್ಯ ತಂಡ:

ಡೆಲ್ಲಿ ಕ್ಯಾಪಿಟಲ್ಸ್:
ಪೃಥ್ವಿ, ಧವನ್, ಶ್ರೇಯಸ್ (ನಾಯಕ), ರಿಷಭ್, ರುದರ್‌ಫೋರ್ಡ್, ಇನ್‌ಗ್ರಾಂ, ಮೋರಿಸ್, ಅಕ್ಷರ್, ರಬಾಡ, ಮಿಶ್ರಾ, ಇಶಾಂತ್ ಶರ್ಮಾ

ರಾಯಲ್ ಚಾಲೆಂಜರ್ಸ್ ಬೆಂಗಳೂರು:
ಪಾರ್ಥೀವ್, ಕೊಹ್ಲಿ (ನಾಯಕ), ಡಿವಿಲಿಯರ್ಸ್, ಅಕ್ಷ್‌ದೀಪ್, ವಾಷಿಂಗ್ಟನ್, ಸೈನಿ, ಉಮೇಶ್, ಚಹಲ್, ಹೆಟ್ಮೇಯರ್, ನೇಗಿ, ಕ್ಲಾಸೆನ್

ಸ್ಥಳ: ನವದೆಹಲಿ
ಆರಂಭ: ಸಂಜೆ 4.00
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್