ಇಂಡೋನೇಷ್ಯಾ ಓಪನ್: ಸೆಮೀಸ್ ತಲುಪಿದ ಎಚ್ ಎಸ್ ಪ್ರಣಯ್
ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಣಯ್ ಅದ್ಭುತ ಪ್ರದರ್ಶನ
ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಡೆನ್ಮಾರ್ಕ್ ಆಟಗಾರನ ಎದುರು ಜಯಭೇರಿ
ಡೆನ್ಮಾರ್ಕ್‌ನ ರಾಸ್ಮಸ್ ಗೆಮ್ಮೆ ವಿರುದ್ದ 21-14, 21-12 ಅಂತರದಲ್ಲಿ ಜಯ
ಜಕಾರ್ತ(ಜೂ.18): ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ತಾರಾ ಶಟ್ಲರ್ ಎಚ್.ಎಸ್. ಪ್ರಣಯ್ ಅವರು ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. 2017ರಲ್ಲೂ ಇಂಡೋನೇಷ್ಯಾ ಓಪನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಪ್ರಣಯ್, ಇದೀಗ ಎರಡನೇ ಬಾರಿಗೆ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು ಡೆನ್ಮಾರ್ಕ್‌ನ ರಾಸ್ಮಸ್ ಗೆಮ್ಮೆ ವಿರುದ್ದ 21-14, 21-12 ಅಂತರದಲ್ಲಿ ಗೆಲುವು ಸಾಧಿಸಿದರು. ಪ್ರಣಯ್, ಇಂಡೋನೇಷ್ಯಾ ಓಪನ್ ಟೂರ್ನಿಯಲ್ಲಿ ಸ್ಪರ್ಧೆಯಲ್ಲಿರುವ ಭಾರತೀಯರ ಪೈಕಿ ಏಕೈಕ ಶಟ್ಲರ್ ಎನಿಸಿದ್ದಾರೆ. ಇದೀಗ ಶನಿವಾರ ನಡೆಯುವ ಸೆಮಿಫೈನಲ್‌ನಲ್ಲಿ ಎಚ್ ಎಸ್ ಪ್ರಣಯ್, ಚೀನಾದ ಜಾವೊ ಜುನ್ ಪೆಂಗ್ ವಿರುದ್ದ ಸೆಣಸಾಡಲಿದ್ದಾರೆ. ಈ ಇಬ್ಬರು ಆಟಗಾರರು ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿದ್ದಾರೆ.
ಪ್ರೊ ಲೀಗ್ ಹಾಕಿ: ಇಂದು ಭಾರತ-ನೆದರ್ಲೆಂಡ್ಸ್ ಫೈಟ್
ಆಮ್ಸ್‌ಟೆರ್ಡಮ್(ನೆದರ್ಲೆಂಡ್ಸ್): ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಶನಿವಾರ ಭಾರತ ಪುರುಷ ಹಾಗೂ ಮಹಿಳಾ ತಂಡಗಳು ಕ್ರಮವಾಗಿ ನೆದರ್ಲೆಂಡ್‌್ಸ ಹಾಗೂ ಅರ್ಜೆಂಟೀನಾ ವಿರುದ್ಧ ಸೆಣಸಾಡಲಿವೆ. ಉಭಯ ತಂಡಗಳ ನಡುವಿನ 2ನೇ ಸುತ್ತಿನ ಪಂದ್ಯಗಳು ಭಾನುವಾರ ನಡೆಯಲಿವೆ.
ಪುರುಷರ ತಂಡ ಸದ್ಯ 14 ಪಂದ್ಯಗಳಲ್ಲಿ 8ರಲ್ಲಿ ಗೆದ್ದಿದ್ದು, 29 ಅಂಕಗಳನ್ನು ಸಂಪಾದಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ನೆದರ್ಲೆಂಡ್‌್ಸ ತಂಡ 31 ಅಂಕದೊಂದಿಗೆ 2ನೇ ಸ್ಥಾನದಲ್ಲಿದೆ. ಭಾರತ ಈ ಪಂದ್ಯದಲ್ಲಿ ಗೆದ್ದರೆ ನೆದರ್ಲೆಂಡ್ಸ್, ಬೆಲ್ಜಿಯಂ(31 ಅಂಕ) ತಂಡಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರುವ ಅವಕಾಶವಿದೆ. ಇನ್ನು, ಮಹಿಳಾ ತಂಡ 10 ಪಂದ್ಯಗಳಲ್ಲಿ 22 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಅರ್ಜೆಂಟೀನಾ 38 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ.
ಎಫ್‌ಸಿಬಿಯು ಜೊತೆ ಸ್ಪೇನ್‌ನ ಸೆವಿಲ್ಲಾ ಎಫ್‌ಸಿ ಕ್ಲಬ್ ಒಪ್ಪಂದ
ಬೆಂಗಳೂರು: ಭಾರತದಲ್ಲಿ ಫುಟ್ಬಾಲ್ ಕ್ರೀಡೆಯ ಬೆಳವಣಿಗೆಗೆ ಸಹಾಯ ಮಾಡುವ ನಿಟ್ಟಿನಲ್ಲಿ ಇತ್ತೀಚೆಗೆ ಸ್ಪೇನ್‌ನ ಮುಂಚೂಣಿ ಕ್ಲಬ್ ಸೆವಿಲ್ಲಾ ಎಫ್‌ಸಿ ತಂಡದ ಅಧಿಕಾರಿಗಳು ಬೆಂಗಳೂರಿಗೆ ಆಗಮಿಸಿದ್ದು, ಎಫ್‌ಸಿ ಬೆಂಗಳೂರು ಯುನೈಟೆಡ್ ತಂಡದ ಜೊತೆ ಹಲವು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಸ್ಪೇನ್‌ನ ಫುಟ್ಬಾಲ್ ಟೂರ್ನಿಯಾದ ಲಾ ಲಿಗಾ ಲೀಗ್‌ನಲ್ಲಿ ಆಡುತ್ತಿರುವ ಸೆವಿಲ್ಲಾ ಎಫ್‌ಸಿ ತಂಡದ ಅಧ್ಯಕ್ಷ ಜೋಸ್ ಕ್ಯಾಸ್ಟೊ್ರ ಕಾರ್ಮೊನಾ, ಕಾರ್ಯನಿರ್ವಹಣಾಧಿಕಾರಿ ಜೋಸ್ ಮರಿಯಾ ಕ್ರೂಜ್ ಅವರನ್ನೊಳಗೊಂಡ ಪ್ರತಿನಿಧಿಗಳ ತಂಡ 5 ದಿನ ಬೆಂಗಳೂರಿನಲ್ಲಿ ವಿವಿಧ ಕಾರ‍್ಯಕಮಗಳಲ್ಲಿ ಪಾಲ್ಗೊಂಡಿತು.
ಇಂಡೋನೇಷ್ಯಾ ಓಪನ್: ಎಚ್ ಎಸ್ ಪ್ರಣಯ್ ಕ್ವಾರ್ಟರ್‌ಗೆ ಲಗ್ಗೆ
ಲಾ ಲಿಗಾ ಜೊತೆಗಿನ ಹಲವು ಒಪ್ಪಂದಗಳ ಬಗ್ಗೆ ವಿವಿಧ ಸಭೆಗಳನ್ನೂ ನಡೆಸಿದ ತಂಡ, ಭಾರತದಲ್ಲಿ ಫುಟ್ಬಾಲ್ ಬೆಳವಣಿಗೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿತು. ವಿವಿಧ ಸಂಸ್ಥೆಗಳಿಗೆ ಭೇಟಿ ನೀಡಿದ ತಂಡ, ಬೆಂಗಳೂರು ಯುನೈಟೆಡ್‌ನ ಮಹಿಳಾ ತಂಡಕ್ಕೆ ಚಾಲನೆ ನೀಡಿದು. ಜೊತೆಗೆ ಯುನೈಟೆಡ್ ತಂಡದ ಜೊತೆ ಕೆಲ ಒಪ್ಪಂದಗಳನ್ನು ಅಂತಿಮಗೊಳಿಸಿತು. ಮುಂದಿನ ವರ್ಷ ಐ ಲೀಗ್ ಟೂರ್ನಿಗೆ ಪ್ರವೇಶ ಪಡೆಯುವ ಹಂಬಲದಲ್ಲಿರುವ ಎಫ್‌ಸಿಬಿಯುಗೆ ಕೋಚ್, ಅಕಾಡೆಮಿ ಮತ್ತಿತರ ನೆರವು ನೀಡಲಿದ್ದೇವೆ ಎಂದು ಜೋಸ್ ಮರಿಯಾ ಕ್ರೂಜ್ ತಿಳಿಸಿದ್ದಾರೆ.