ಭಾರತ ತಂಡ ಅಜೇಯವಾಗಿ ಫೈನಲ್ ತಲುಪಿದೆ. ಗುಂಪು ಹಂತದಲ್ಲಿ ಪ್ರಚಂಡ ಆಟವಾಡಿದ ರಾಣಿ ಪಡೆ, ಕ್ವಾರ್ಟರ್ ಫೈನಲ್ ಹಾಗೂ ಸೆಮಿಫೈನಲ್‌'ನಲ್ಲೂ ಸುಲಭ ಗೆಲುವು ದಾಖಲಿಸಿತು. ಅದರಲ್ಲೂ ಸೆಮೀಸ್‌'ನಲ್ಲಿ ಹಾಲಿ ಚಾಂಪಿಯನ್ ಜಪಾನ್ ಬಗ್ಗುಬಡಿದಿದ್ದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.
ಕಕಮಿಗಹಾರ(ನ.05): ಏಷ್ಯಾ ಮಹಿಳಾ ಹಾಕಿ ಕಪ್ ಫೈನಲ್ ಪಂದ್ಯವು ಇಂದು ನಡೆಯಲಿದ್ದು, ಪ್ರಶಸ್ತಿಗಾಗಿ ಭಾರತ ಹಾಗೂ ಚೀನಾ ಸೆಣಸಾಡಲಿವೆ. ಎರಡು ವಾರಗಳ ಹಿಂದಷ್ಟೇ ಪುರುಷರ ತಂಡ ಏಷ್ಯಾ ಚಾಂಪಿಯನ್ ಆಗಿತ್ತು. ಇದೀಗ ಮಹಿಳಾ ತಂಡ ಕೂಡ ಏಷ್ಯಾಕಪ್ ಎತ್ತಿಹಿಡಿಯಲು ಪಣತೊಟ್ಟಿದೆ.
‘ಭಾರತ ಪುರುಷರ ತಂಡದ ಗೆಲುವೇ ನಮಗೆ ಸ್ಫೂರ್ತಿ. ಮನ್'ಪ್ರೀತ್ ಪಡೆ ದೇಶಕ್ಕೆ ಹೆಮ್ಮೆ ತಂದಿದೆ. ಇದೀಗ ನಮ್ಮ ಸರದಿ. ಟೂರ್ನಿಯುದ್ದಕ್ಕೂ ಅತ್ಯುತ್ತಮ ಆಟವಾಡುತ್ತಾ ಬಂದಿದ್ದೇವೆ. ಅದೇ ಲಯ ಮುಂದುವರಿಸಿ ಟ್ರೋಫಿಗೆ ಮುತ್ತಿಕ್ಕುವುದು ನಮ್ಮ ಗುರಿ’ ಎಂದು ಭಾರತ ತಂಡದ ನಾಯಕಿ ರಾಣಿ ಹೇಳಿದ್ದಾರೆ. 2004ರ ನಂತರ ಮೊದಲ ಬಾರಿಗೆ ಭಾರತಕ್ಕೆ ಏಷ್ಯಾಕಪ್ ಗೆಲ್ಲಲು ಅತ್ಯುತ್ತಮ ಅವಕಾಶ ದೊರೆತಿದೆ.
ಅಜೇಯ ಓಟ: ಭಾರತ ತಂಡ ಅಜೇಯವಾಗಿ ಫೈನಲ್ ತಲುಪಿದೆ. ಗುಂಪು ಹಂತದಲ್ಲಿ ಪ್ರಚಂಡ ಆಟವಾಡಿದ ರಾಣಿ ಪಡೆ, ಕ್ವಾರ್ಟರ್ ಫೈನಲ್ ಹಾಗೂ ಸೆಮಿಫೈನಲ್'ನಲ್ಲೂ ಸುಲಭ ಗೆಲುವು ದಾಖಲಿಸಿತು. ಅದರಲ್ಲೂ ಸೆಮೀಸ್'ನಲ್ಲಿ ಹಾಲಿ ಚಾಂಪಿಯನ್ ಜಪಾನ್ ಬಗ್ಗುಬಡಿದಿದ್ದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.
ಚೀನಾ ವಿರುದ್ಧ 2ನೇ ಮುಖಾಮುಖಿ: ವಿಶ್ವ ಶ್ರೇಯಾಂಕದಲ್ಲಿ 8ನೇ ಸ್ಥಾನ ಹೊಂದಿರುವ ಚೀನಾ ವಿರುದ್ಧ ಗುಂಪು ಹಂತದ ಪಂದ್ಯದಲ್ಲಿ ಭಾರತ ಸೆಣಸಾಡಿ, 4-1 ಗೋಲುಗಳಿಂದ ಪಂದ್ಯವನ್ನು ಗೆದ್ದುಕೊಂಡಿತ್ತು. ಇದೀಗ ಮತ್ತೊಮ್ಮೆ ಚೀನಿ ಪಡೆಯನ್ನು ಸದೆಬಡಿಯಲು ಭಾರತ ವನಿತೆಯರು ಕಾತರಿಸುತ್ತಿದ್ದಾರೆ. ‘ಚೀನಾ ಕಠಿಣ ಎದುರಾಳಿ ಎನ್ನುವ ಅರಿವಿದೆ. ಮೊದಲ ಪಂದ್ಯದಲ್ಲಿ ನಾವು ಅವರ ಮೇಲೆ ಪ್ರಾಬಲ್ಯ ಮೆರೆದಿದ್ದೆವು. ಆದರೆ ಅವರನ್ನು ಲಘುವಾಗಿ ಪರಿಗಣಿಸುತ್ತಿಲ್ಲ’ ಎಂದು ರಾಣಿ ಹೇಳಿದ್ದಾರೆ.
