ಚೊಚ್ಚಲ ಖೋ ಖೋ ವಿಶ್ವಕಪ್‌ನಲ್ಲಿ ಭಾರತ ಪುರುಷ ಮತ್ತು ಮಹಿಳಾ ತಂಡಗಳು ಚಾಂಪಿಯನ್ ಪಟ್ಟ ಅಲಂಕರಿಸಿವೆ. ಫೈನಲ್‌ನಲ್ಲಿ ಎರಡೂ ತಂಡಗಳು ನೇಪಾಳವನ್ನು ಸೋಲಿಸಿವೆ. ಮಹಿಳೆಯರು 78-40 ಅಂಕಗಳಿಂದ, ಪುರುಷರು 54-36 ಅಂಕಗಳಿಂದ ಜಯ ಸಾಧಿಸಿದರು. ಕನ್ನಡಿಗರಾದ ಗೌತಮ್ ಮತ್ತು ಚೈತ್ರಾ ಉತ್ತಮ ಪ್ರದರ್ಶನ ನೀಡಿದರು.

ನವದೆಹಲಿ: ಚೊಚ್ಚಲ ಆವೃತ್ತಿಯ ಖೋ ಖೋ ವಿಶ್ವಕಪ್‌ನಲ್ಲಿ ನಿರೀಕ್ಷೆಯಂತೆಯೇ ಭಾರತದ ತಂಡಗಳು ಚಾಂಪಿಯನ್‌ ಆಗಿ ಹೊರಹೊಮ್ಮಿವೆ. ಪುರುಷರ ಜೊತೆಗೆ ಮಹಿಳಾ ತಂಡಗಳೂ ನೇಪಾಳವನ್ನು ಮಣಿಸಿ ಟ್ರೋಫಿಗೆ ಮುತ್ತಿಟ್ಟಿವೆ.

ಟೂರ್ನಿಯುದ್ದಕ್ಕೂ ಅಬ್ಬರಿಸಿದ್ದ ಭಾರತದ ತಂಡಗಳು ಫೈನಲ್‌ನಲ್ಲೂ ಅಧಿಕಾರಯುತ ಗೆಲುವು ಸಾಧಿಸಿದವು. ವೇಗ, ಕಾರ್ಯತಂತ್ರ ಮತ್ತು ಕೌಶಲ್ಯ ಪ್ರದರ್ಶನದಲ್ಲಿ ವಿಶ್ವದ ಯಾವ ತಂಡಕ್ಕೂ ಸರಿಸಾಟಿಯಿಲ್ಲ ಎಂಬಂತೆ ಪ್ರದರ್ಶನ ನೀಡಿದ ಆತಿಥೇಯ ತಂಡಗಳು ಚೊಚ್ಚಲ ಆವೃತ್ತಿ ವಿಶ್ವಕಪ್‌ ಎತ್ತಿ ಹಿಡಿದವು.

ಭಾನುವಾರ ಸಂಜೆ ಇಲ್ಲಿನ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮಜಿಳಾ ವಿಭಾಗದ ಫೈನಲ್‌ನಲ್ಲಿ ಭಾರತ ತಂಡ ನೇಪಾಳ ವಿರುದ್ಧ 78-40 ಅಂಕಗಳ ಭರ್ಜರಿ ಜಯ ದಾಖಲಿಸಿತು.

Scroll to load tweet…

ಖೋ ಖೋ ವಿಶ್ವಕಪ್ 2025: ಭಾರತ ಪುರುಷರ ತಂಡ ಚಾಂಪಿಯನ್

ಮೊದಲ ಅವಧಿಯಿಂದಲೇ ಭಾರತೀಯ ದಾಳಿಕೋರರು ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು. ಇದರ ಫಲವಾಗಿ 7 ಬಾರಿ ನೇಪಾಳ ತಂಡದ ಮೂರು ಬ್ಯಾಚ್‌ಗಳನ್ನು ಔಟ್‌ ಮಾಡಿದ ಭಾರತೀಯರು 14 ಅಂಕಗಳನ್ನು ಗಳಿಸಿ ಪಾರಮ್ಯ ಸಾಧಿಸಿದರು. 2ನೇ ಅವಧಿ ಮುಕ್ತಾಯಕ್ಕೆ ಭಾರತ 35-24 ಅಂಕಗಳಿಂದ ಮುನ್ನಡೆ ಸಾಧಿಸಿತ್ತು. ಆ ಬಳಿಕವೂ ಪಂದ್ಯದ ಮೇಲಿನ ಹಿಡಿತ ಸಡಿಲಿಸದ ಭಾರತ, 38 ಅಂಕಗಳ ಅಂತರದಲ್ಲಿ ಗೆದ್ದು ಕಪ್‌ ತನ್ನದಾಗಿಸಿಕೊಂಡಿತು.

ಪುರುಷರ ಪ್ರಾಬಲ್ಯ: ಮಹಿಳಾ ತಂಡದ ರೀತಿ ಪುರುಷರ ತಂಡವೂ ಫೈನಲ್‌ನಲ್ಲಿ ನೇಪಾಳವನ್ನು ಸುಲಭದಲ್ಲಿ ಸೋಲಿಸಿತು. ತಂಡಕ್ಕೆ 54-36 ಅಂಕಗಳಿಂದ ಗೆಲುವು ಲಭಿಸಿತು.

ಆರಂಭದಲ್ಲೇ ನೇಪಾಳ ಮೇಲೆ ಪ್ರಾಬಲ್ಯ ಸಾಧಿಸಿದ ಭಾರತ, ಮೊದಲ ಅವಧಿಯಲ್ಲೇ 26-0 ಮುನ್ನಡೆ ಪಡೆಯಿತು. 2ನೇ ಅವಧಿಯಲ್ಲಿ ನೇಪಾಳ 18 ಅಂಕ ಗಳಿಸಿ ಭಾರತಕ್ಕೆ ಪೈಪೋಟಿ ನೀಡಿತು. ಆದರೆ 3ನೇ ಅವಧಿಯಲ್ಲಿ 28 ಅಂಕ ದೋಚಿದ ಭಾರತ, ಅಂತರವನ್ನು 54-18ರಲ್ಲಿ ಏರಿಸಿತು. ಹೀಗಾಗಿ ಕೊನೆ ಅವಧಿಯಲ್ಲಿ ಆತ್ಮವಿಶ್ವಾಸದೊಂದಿಗೇ ಕಣಕ್ಕಿಳಿದ ಭಾರತ, 18 ಅಂಕ ಬಿಟ್ಟುಕೊಟ್ಟರೂ ಸುಲಭ ಗೆಲುವು ತನ್ನದಾಗಿಸಿಕೊಂಡಿತು.

Scroll to load tweet…

ಖೋ ಖೋ ವಿಶ್ವಕಪ್ 2025: ಭಾರತ ಮಹಿಳಾ ತಂಡ ಚಾಂಪಿಯನ್

ಕಪ್‌ ಗೆಲುವಿನಲ್ಲಿ ಕನ್ನಡಿಗರ ಕೊಡುಗೆ

ಭಾರತ ತಂಡಗಳು ಚಾಂಪಿಯನ್ ಆಗಿದ್ದರ ಹಿಂದೆ ಇಬ್ಬರು ಕನ್ನಡಿಗರ ಕೊಡುಗೆ ಇದೆ. ಪುರುಷರ ತಂಡದಲ್ಲಿ ಬೆಂಗಳೂರಿನ ಗೌತಮ್‌(ಡಿಫೆಂಡರ್‌) ಪ್ರಮುಖ ಪಾತ್ರ ವಹಿಸಿದರೆ, ಮಹಿಳಾ ತಂಡಕ್ಕೆ ಮೈಸೂರಿನ ಚೈತ್ರಾ ಬೆನ್ನೆಲುಬಾಗಿ ನಿಂತರು. ಎಲ್ಲಾ ಪಂದ್ಯಗಳಲ್ಲೂ ಇಬ್ಬರು ತಮ್ಮ ಕೌಶಲ್ಯ ಪ್ರದರ್ಶಿಸಿದರು. ಟೂರ್ನಿಗೆ ಆಯ್ಕೆಯಾಗುವ ಮೂಲಕ ಮೊದಲ ಬಾರಿ ಭಾರತ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದ ಚೈತ್ರಾ, ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.

ಚೊಚ್ಚಲ ಖೋ ಖೋ ವಿಶ್ವಕಪ್ ಗೆದ್ದ ಭಾರತದ ತಂಡಗಳಿಗೆ ಅಭಿನಂದನೆಗಳು. ಭಾರತೀಯರ ಅಪ್ರತಿಮ ಕೌಶಲ್ಯ, ದೃಢಸಂಕಲ್ಪಕ್ಕೆ ಈ ವಿಶ್ವಕಪ್‌ ಒಲಿದಿದೆ. ಈ ಗೆಲುವು ಭಾರತದ ಅತ್ಯಂತ ಹಳೆಯ ಸಾಂಪ್ರದಾಯಿಕ ಕ್ರೀಡೆಗೆ ಮತ್ತಷ್ಟು ಪ್ರಚಾರ ನೀಡಿದ್ದಲ್ಲದೇ, ದೇಶದ ಅಸಂಖ್ಯಾತ ಯುವ ಕ್ರೀಡಾಪಟುಗಳನ್ನು ಖೋ ಖೋ ಆಡಲು ಪ್ರೇರೇಪಿಸಿದೆ. ವಿಶ್ವಕಪ್‌ ಗೆಲುವು ಎಲ್ಲರಿಗೂ ಸ್ಫೂರ್ತಿ ತುಂಬಲಿದೆ.

ನರೇಂದ್ರ ಮೋದಿ, ಪ್ರಧಾನಿ