ಇಂದಿನಿಂದ ಐಎಸ್‌ಎಲ್ ಫುಟ್ಬಾಲ್ ಕಿಕ್ ಆರಂಭ
ಚೆನ್ನೈಯನ್ ಎಫ್‌ಸಿ ಹಾಲಿ ಚಾಂಪಿಯನ್ ಆಗಿದೆ. ಕಳೆದ ವರ್ಷ ಫೈನಲ್‌ನಲ್ಲಿ ಬೆಂಗಳೂರು ಎಫ್‌ಸಿ ತಂಡವನ್ನು ಸೋಲಿಸಿ ತಂಡ ಪ್ರಶಸ್ತಿ ಗೆದ್ದಿತ್ತು. ಚೊಚ್ಚಲ ಪ್ರಯತ್ನದಲ್ಲೇ ರನ್ನರ್-ಅಪ್ ಆಗಿದ್ದ ಬಿಎಫ್‌ಸಿ ಈ ಬಾರಿ ಪ್ರಶಸ್ತಿ ಮೇಲೆ ಕಣ್ಣಿರಿಸಿದೆ.
ಕೋಲ್ಕತಾ(ಸೆ.29): 2018-19ರ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಗೆ ಇಂದು ಇಲ್ಲಿ ಚಾಲನೆ ದೊರೆಯಲಿದೆ. ಇದು ಲೀಗ್‌ನ 5ನೇ ಆವೃತ್ತಿಯಾಗಿದ್ದು, ಬೆಂಗಳೂರು ಫುಟ್ಬಾಲ್ ಕ್ಲಬ್ ಸೇರಿ ಒಟ್ಟು 10 ತಂಡಗಳು ಸೆಣಸಲಿವೆ. ಇಲ್ಲಿನ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ, ಅಟ್ಲೆಟಿಕೋ ಕೋಲ್ಕತಾ ಹಾಗೂ ಕೇರಳ ಬ್ಲಾಸ್ಟರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಲೀಗ್ 6 ತಿಂಗಳುಗಳ ಕಾಲ ನಡೆಯಲಿದ್ದು, 2019ರ ಮಾರ್ಚ್’ನಲ್ಲಿ ಮುಕ್ತಾಯಗೊಳ್ಳಲಿದೆ.
ಪ್ರಾಥಮಿಕವಾಗಿ 59 ಪಂದ್ಯಗಳ ವೇಳಾಪಟ್ಟಿಯನ್ನು ಆಯೋಜಕರು ಬಿಡುಗಡೆ ಮಾಡಿದ್ದಾರೆ. ಟೂರ್ನಿ ವೇಳೆ 3 ವಿರಾಮಗಳು ಇರಲಿವೆ. ಫಿಫಾ ನಿಯಮದಂತೆ ಅ.8-16, ನ.12-20 ಹಾಗೂ 2019ರ ಎಎಫ್‌ಸಿ ಏಷ್ಯನ್ ಕಪ್‌ಗೆ ಭಾರತ ತಂಡ ಅಭ್ಯಾಸ ನಡೆಸುವ ಸಲುವಾಗಿ ಡಿ.17ರಿಂದ ವಿರಾಮ ಸಿಗಲಿದೆ. ಕಳೆದ ಬಾರಿ ವಾರಾಂತ್ಯದಲ್ಲಿ 2 ಪಂದ್ಯಗಳು ನಡೆಯುತ್ತಿದ್ದವು. ಆ ಮಾದರಿಯನ್ನು ಕೈಬಿಡಲಾಗಿದೆ. ದಿನಕ್ಕೆ ಒಂದೇ ಪಂದ್ಯ ನಡೆಯಲಿದ್ದು, ಪ್ರತಿ ದಿನ ಸಂಜೆ 7.30ಕ್ಕೆ ಪಂದ್ಯ ಆರಂಭಗೊಳ್ಳಲಿದೆ.
ಚೆನ್ನೈಯನ್ ಎಫ್‌ಸಿ ಹಾಲಿ ಚಾಂಪಿಯನ್ ಆಗಿದೆ. ಕಳೆದ ವರ್ಷ ಫೈನಲ್‌ನಲ್ಲಿ ಬೆಂಗಳೂರು ಎಫ್‌ಸಿ ತಂಡವನ್ನು ಸೋಲಿಸಿ ತಂಡ ಪ್ರಶಸ್ತಿ ಗೆದ್ದಿತ್ತು. ಚೊಚ್ಚಲ ಪ್ರಯತ್ನದಲ್ಲೇ ರನ್ನರ್-ಅಪ್ ಆಗಿದ್ದ ಬಿಎಫ್‌ಸಿ ಈ ಬಾರಿ ಪ್ರಶಸ್ತಿ ಮೇಲೆ ಕಣ್ಣಿರಿಸಿದೆ.