ವಿದೇಶದಲ್ಲಿ ಭಜರಂಗ್, ವಿನೇಶ್ ಅಭ್ಯಾಸಕ್ಕೆ ಕ್ರೀಡಾ ಸಚಿವಾಲಯದಿಂದ ಓಕೆ
ವಿದೇಶದಲ್ಲಿ ಅಭ್ಯಾಸ ನಡೆಸಲು ಮುಂದಾದ ಭಜರಂಗ್ ಪೂನಿಯಾ, ವಿನೇಶ್ ಫೋಗಟ್
ಏಷ್ಯನ್ ಗೇಮ್ಸ್ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ಗೆ ಸಿದ್ಧತೆ ನಡೆಸಲು ತಾರಾ ಕುಸ್ತಿಪಟುಗಳು ರೆಡಿ
ಜುಲೈ ಮೊದಲ ವಾರದಲ್ಲಿ ವಿದೇಶಕ್ಕೆ ತೆರಳಲಿರುವ ಭಜರಂಗ್, ವಿನೇಶ್
ನವದೆಹಲಿ(ಜೂ.30): ಕುಸ್ತಿಪಟುಗಳಾದ ಭಜರಂಗ್ ಪೂನಿಯಾ ಹಾಗೂ ವಿನೇಶ್ ಫೋಗಟ್ ಕ್ರಮವಾಗಿ ಕಿರ್ಗಿಸ್ತಾನ ಹಾಗೂ ಹಂಗೇರಿಯಲ್ಲಿ ಅಭ್ಯಾಸ ನಡೆಸಲು ಕ್ರೀಡಾ ಸಚಿವಾಲಯ ಅನುಮತಿ ನೀಡಿದೆ. ಏಷ್ಯನ್ ಗೇಮ್ಸ್ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ಗೆ ಸಿದ್ಧತೆ ನಡೆಸಲು ಆಗಸ್ಟ್ 10ರ ವರೆಗೂ ಸಮಯಾವಕಾಶ ಕೇಳಿರುವ ಈ ಇಬ್ಬರು ಜುಲೈ ಮೊದಲ ವಾರದಲ್ಲಿ ವಿದೇಶಕ್ಕೆ ತೆರಳಲಿದ್ದಾರೆ.
ಭಾರತೀಯ ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಇವರಿಬ್ಬರು ವಿದೇಶಕ್ಕೆ ತೆರಳಲಿರುವ ಕಾರಣ ಮತ್ತೆ ಪ್ರತಿಭಟನೆ ಆರಂಭಗೊಳ್ಳುವುದು ಅನುಮಾನವೆನಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಏಷ್ಯನ್ ಕಬಡ್ಡಿ: ಫೈನಲ್‌ಪ್ರವೇಶಿಸಿದ ಭಾರತ
ಬೂಸಾನ್(ಕೊರಿಯಾ): 2023ರ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಫೈನಲ್‌ಗೆ ಭಾರತ ತಂಡ ಪ್ರವೇಶಿಸಿದೆ. ಗುರುವಾರ ನಡೆದ ಬಲಿಷ್ಠ ಇರಾನ್ ವಿರುದ್ಧದ ಪಂದ್ಯದಲ್ಲಿ 33-28 ಅಂಕಗಳ ರೋಚಕ ಗೆಲುವು ಸಾಧಿಸಿದ ಭಾರತ, ಸತತ 4ನೇ ಪಂದ್ಯದಲ್ಲೂ ಯಶಸ್ಸು ಕಂಡಿತು. ಶುಕ್ರವಾರ ಬೆಳಗ್ಗೆ ರೌಂಡ್ ರಾಬಿನ್ ಹಂತದ ಅಂತಿಮ ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ ಸೆಣಸಲಿರುವ ಭಾರತಕ್ಕೆ ಫೈನಲ್‌ನಲ್ಲಿ ಜಪಾನ್ ಅಥವಾ ಇರಾನ್ ಎದುರಾಗಲಿದೆ. ಫೈನಲ್ ಪಂದ್ಯವೂ ಶುಕ್ರವಾರವೇ ನಡೆಯಲಿದೆ.
ಭಾರತ ಹಾಕಿ ತಂಡಕ್ಕೆ ಪ್ಯಾಡಿ ಅಪ್ಟನ್ ನೆರವು
ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾನಸಿಕ ಸದೃಢತೆ ತರಬೇತುದಾರರಾಗಿ ಕೆಲಸ ಮಾಡಿದ್ದ ದಕ್ಷಿಣ ಆಫ್ರಿಕಾದ ಪ್ಯಾಡಿ ಅಪ್ಟನ್ ಏಷ್ಯನ್ ಚಾಂಪಿಯನ್‌ಶಿಪ್, ಏಷ್ಯನ್ ಗೇಮ್ಸ್‌ಗೆ ಸಿದ್ಧತೆ ನಡೆಸುತ್ತಿರುವ ಭಾರತ ಪುರುಷರ ಹಾಕಿ ತಂಡಕ್ಕೆ ನೆರವು ನೀಡಲು ಒಪ್ಪಿದ್ದಾರೆ. ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್) ಕೇಂದ್ರದಲ್ಲಿ ಶನಿವಾರದಿಂದ ಮಾನಸಿಕ ಫಿಟ್ನೆಸ್ ಶಿಬಿರ ಆರಂಭಗೊಳ್ಳಲಿದೆ ಎಂದು ಹಾಕಿ ಇಂಡಿಯಾ ತಿಳಿಸಿದೆ.
ಭಾರತ ತಂಡದ ತೊರೆದ ಮೇಲೆ ಗ್ಯಾರಿ ಕರ್ಸ್ಟನ್‌ಗೆ ಏನನ್ನೂ ಗೆಲ್ಲಲು ಆಗಿಲ್ಲ; ಅಚ್ಚರಿ ಹೇಳಿಕೆ ನೀಡಿದ ಸೆಹ್ವಾಗ್..!
ಭಾರತ ಫುಟ್ಬಾಲ್ ಕೋಚ್‌ಸ್ಟಿಮಾಕ್‌ಗೆ 2 ಪಂದ್ಯ ನಿಷೇಧ?
ಬೆಂಗಳೂರು: ಸ್ಯಾಫ್ ಕಪ್ ಟೂರ್ನಿಯಲ್ಲಿ 2 ಬಾರಿ ರೆಫ್ರಿಗಳ ಕೆಂಗಣ್ಣಿಗೆ ಗುರಿಯಾಗಿ ರೆಡ್ ಕಾರ್ಡ್ ಪಡೆದಿರುವ ಭಾರತದ ಕೋಚ್ ಇಗೊರ್ ಸ್ಟಿಮಾಕ್‌ರನ್ನು ಆಯೋಜಕರು 2 ಪಂದ್ಯಗಳಿಗೆ ನಿಷೇಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಕುವೈತ್ ವಿರುದ್ಧದ ಪಂದ್ಯದಲ್ಲಿ ರೆಡ್ ಕಾರ್ಡ್ ಪಡೆದಿದ್ದಕ್ಕೆ ಸ್ಟಿಮಾಕ್ ಲೆಬನಾನ್ ವಿರುದ್ಧದ ಸೆಮೀಸ್‌ನಲ್ಲಿ ತಂಡದ ಡಗೌಟ್‌ನಲ್ಲಿ ಕೂರುವ ಅವಕಾಶ ಕಳೆದುಕೊಂಡಿದ್ದಾರೆ. ಮತ್ತೊಂದು ಪಂದ್ಯಕ್ಕೆ ನಿಷೇಧಗೊಂಡರೆ ಆಗ ಭಾರತ ಫೈನಲ್ ಪ್ರವೇಶಿಸಿದರೂ ಸ್ಟಿಮಾಕ್ ಮೈದಾನಕ್ಕಿಳಿಯುವಂತಿಲ್ಲ. ಸೆಮಿಫೈನಲ್ ಪಂದ್ಯಗಳು ಜು.1ರಂದು ನಡೆಯಲಿದ್ದು, ಜು.4ರಂದು ಫೈನಲ್ ನಿಗದಿಯಾಗಿದೆ.
ಟೆನಿಸ್‌ಗೆ ವಾಪಸಾಗಲಿರುವ ಕ್ಯಾರೋಲಿನ್ ವೋಜ್ನಿಯಾಕಿ
ನ್ಯೂಯಾರ್ಕ್: 3 ವರ್ಷಗಳ ಹಿಂದೆ ನಿವೃತ್ತಿ ಘೋಷಿಸಿದ್ದ ಮಾಜಿ ವಿಶ್ವ ನಂ.1, ಡೆನ್ಮಾರ್ಕ್‌ನ ಕ್ಯಾರೋಲಿನ್ ವೋಜ್ನಿಯಾಕಿ ವೃತ್ತಿಪರ ಟೆನಿಸ್‌ಗೆ ವಾಪಸಾಗಲು ನಿರ್ಧರಿಸಿದ್ದಾರೆ. ಆ.28ರಿಂದ ಆರಂಭಗೊಳ್ಳಲಿರುವ ಯುಎಸ್ ಓಪನ್ ಗ್ರ್ಯಾನ್‌ಸ್ಲಾಂನಲ್ಲಿ ಅವರಿಗೆ ವೈಲ್ಡ್ ಕಾರ್ಡ್ ಪ್ರವೇಶ ದೊರೆಯಲಿದೆ. 2024ರ ಆಸ್ಟ್ರೇಲಿಯನ್ ಓಪನ್‌ನಲ್ಲೂ ಸ್ಪರ್ಧಿಸಲು ಎದುರು ನೋಡುತ್ತಿರುವ ವೋಜ್ನಿಯಾಕಿ, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಡೆನ್ಮಾರ್ಕ್ ತಂಡವನ್ನು ಪ್ರತಿನಿಧಿಸುವ ಗುರಿ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.
ಇಂದು ಲುಸ್ಸಾನ್ ಡೈಮಂಡ್‌ಲೀಗ್: ನೀರಜ್, ಶ್ರೀಶಂಕರ್ ಸ್ಪರ್ಧೆ
ಲುಸ್ಸಾನ್(ಸ್ವಿಜರ್‌ಲೆಂಡ್): ಭಾರತದ ತಾರಾ ಅಥ್ಲೀಟ್‌ಗಳಾದ ನೀರಜ್ ಚೋಪ್ರಾ ಹಾಗೂ ಶ್ರೀಶಂಕರ್ ಮುರಳಿ ಶುಕ್ರವಾರ ಇಲ್ಲಿ ನಡೆಯಲಿರುವ ಡೈಮಂಡ್ ಲೀಗ್‌ನಲ್ಲಿ ಸ್ಪರ್ಧಿಸಲಿದ್ದಾರೆ. ದೋಹಾ ಡೈಮಂಡ್ ಲೀಗ್‌ನಲ್ಲಿ ಮೊದಲ ಸ್ಥಾನ ಪಡೆದಿದ್ದ ಜಾವೆಲಿನ್ ಥ್ರೋ ಪಟು ನೀರಜ್ ಮತ್ತೊಂದು ಯಶಸ್ಸಿನ ನಿರೀಕ್ಷೆಯಲ್ಲಿದ್ದರೆ, ಕೆಲ ವಾರಗಳ ಹಿಂದಷ್ಟೇ ಪ್ಯಾರಿಸ್ ಡೈಮಂಡ್ ಲೀಗ್‌ನ ಲಾಂಗ್‌ಜಂಪ್‌ನಲ್ಲಿ 3ನೇ ಸ್ಥಾನ ಪಡೆದಿದ್ದ ಶ್ರೀಶಂಕರ್ ಸುಧಾರಿತ ಪ್ರದರ್ಶನ ತೋರಲು ಎದುರು ನೋಡುತ್ತಿದ್ದಾರೆ.