ಕೌಲಾಲಂಪುರ (ಮಲೇಷ್ಯಾ): ಭಾರತ ಕಿರಿಯರ ಫುಟ್ಬಾಲ್‌ ತಂಡ, 2019ರಲ್ಲಿ ಪೆರು ದೇಶದಲ್ಲಿ ನಡೆಯಲಿರುವ ಅಂಡರ್‌-17 ಫಿಫಾ ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ ಸ್ವಲ್ಪದರಲ್ಲಿ ವಂಚಿತವಾಗಿದೆ. 

ಇಲ್ಲಿ ನಡೆಯುತ್ತಿರುವ ಅಂಡರ್‌-16 ಎಎಫ್‌ಸಿ ಚಾಂಪಿಯನ್‌ಶಿಪ್‌ನಲ್ಲಿ ಸೋಮವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತ ತಂಡ ದ.ಕೊರಿಯಾ ವಿರುದ್ಧ 0-1 ಗೋಲಿನಿಂದ ಸೋಲುಂಡು ನಿರಾಸೆ ಅನುಭವಿಸಿತು. ಈ ಪಂದ್ಯ ಗೆದ್ದು ಸೆಮೀಸ್‌ಗೇರಿದ್ದರೆ, ಭಾರತ ಮೊದಲ ಬಾರಿಗೆ ವಿಶ್ವಕಪ್‌ಗೆ ಅರ್ಹತೆ ಪಡೆದ ಸಾಧನೆ ಮಾಡುತ್ತಿತ್ತು. 

ಕಳೆದ ವರ್ಷ ಪಂದ್ಯಾವಳಿಗೆ ಆತಿಥ್ಯ ವಹಿಸಿದ್ದರಿಂದ ಅಂಡರ್‌-17 ವಿಶ್ವಕಪ್‌ನಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಭಾರೀ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ, ಆಕರ್ಷಕ ಪ್ರದರ್ಶನ ತೋರಿದ ಭಾರತ 67ನೇ ನಿಮಿಷದಲ್ಲಿ ಗೋಲು ಬಿಟ್ಟುಕೊಟ್ಟು ಸೋಲೊಪ್ಪಿಕೊಳ್ಳಬೇಕಾಯಿತು.