Asianet Suvarna News Asianet Suvarna News

ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತಕ್ಕೆ ಭರ್ಜರಿ ಜಯ

ವಿಶ್ವದ ನಂ.1 ತಂಡ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ಪ್ರಾಬಲ್ಯ ಮುಂದುವರಿಸಿದೆ. ಬುಧವಾರ ಇಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ 124 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ಭಾರತ, 6 ಪಂದ್ಯಗಳ ಸರಣಿಯಲ್ಲಿ 3-0 ಅಜೇಯ ಮುನ್ನಡೆ ಸಾಧಿಸಿದೆ. ಇದರೊಂದಿಗೆ ದ. ಆಫ್ರಿಕಾದಲ್ಲಿ ಚೊಚ್ಚಲ ಸರಣಿ ಗೆಲುವಿಗೆ ಭಾರತಕ್ಕೆ ಇನ್ನೊಂದೇ ಮೆಟ್ಟಿಲು ಬಾಕಿ ಇದೆ.

Indian Cricket Team Win

ನವದೆಹಲಿ : ವಿಶ್ವದ ನಂ.1 ತಂಡ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ಪ್ರಾಬಲ್ಯ ಮುಂದುವರಿಸಿದೆ. ಬುಧವಾರ ಇಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ 124 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ಭಾರತ, 6 ಪಂದ್ಯಗಳ ಸರಣಿಯಲ್ಲಿ 3-0 ಅಜೇಯ ಮುನ್ನಡೆ ಸಾಧಿಸಿದೆ. ಇದರೊಂದಿಗೆ ದ. ಆಫ್ರಿಕಾದಲ್ಲಿ ಚೊಚ್ಚಲ ಸರಣಿ ಗೆಲುವಿಗೆ ಭಾರತಕ್ಕೆ ಇನ್ನೊಂದೇ ಮೆಟ್ಟಿಲು ಬಾಕಿ ಇದೆ.

ವಿರಾಟ್ ಕೊಹ್ಲಿ(160)ಯ ದಾಖಲೆಯ 34ನೇ ಶತಕ, ಸ್ಪಿನ್ನರ್‌ಗಳಾದ ಯಜುವೇಂದ್ರ ಚಹಲ್ ಹಾಗೂ ಕುಲ್ದೀಪ್ ಯಾದವ್‌ರ ಸ್ಪಿನ್ ಮೋಡಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಮೊದಲು ಬ್ಯಾಟಿಂಗ್ ಮಾಡಿ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 303 ರನ್ ಗಳಿಸಿದ್ದ ಭಾರತ, ಆಫ್ರಿಕಾವನ್ನು 40 ಓವರ್‌ಗಳಲ್ಲಿ 179 ರನ್‌ಗಳಿಗೆ ಕಟ್ಟಿಹಾಕಿತು.

ಮತ್ತೆ ಸ್ಪಿನ್‌ಗೆ ಬಿದ್ದ ಆಫ್ರಿಕಾ: 304 ರನ್‌ಗಳ ಬೃಹತ್ ಗುರಿ ಬೆನ್ನಟ್ಟಲು ಇಳಿದ ಹರಿಣ ಪಡೆ, ಆರಂಭಿಕ ಆಘಾತ ಅನುಭವಿಸಿತು. ಹಾಶೀಂ ಆಮ್ಲಾ (1) ಬೇಗನೆ ನಿರ್ಗಮಿಸಿದರು.  2ನೇ ವಿಕೆಟ್‌ಗೆ ನಾಯಕ ಏಡನ್ ಮಾರ್ಕ್‌ರಮ್(32) ಹಾಗೂ ಜೆ.ಪಿ.ಡುಮಿನಿ(51) 78 ರನ್‌ಗಳ ಜೊತೆಯಾಟವಾಡಿ ತಂಡಕ್ಕೆ ನೆರವಾದರೂ, ಇವರಿಬ್ಬರ ವಿಕೆಟ್ ಪತನಗೊಳ್ಳುತ್ತಿದ್ದಂತೆ ಆಫ್ರಿಕಾ ಬ್ಯಾಟ್ಸ್‌ಮನ್‌ಗಳ ಪೆವಿಲಿಯನ್ ಪರೇಡ್ ಆರಂಭಗೊಂಡಿತು.

ಭಾರತದ ಸ್ಪಿನ್ ಜೋಡಿಯಾದ ಚಾಹಲ್ ಹಾಗೂ ಕುಲ್ದೀಪ್‌ಗೆ ಉತ್ತರಿಸಲು ಆತಿಥೇಯರು ಮತ್ತೊಮ್ಮೆ ಪರದಾಡಿದರು. ಚಹಲ್ ಹಾಗೂ ಕುಲ್ದೀಪ್ ತಲಾ 4 ವಿಕೆಟ್ ಕಬಳಿಸಿ ಮಿಂಚಿದರು. 

ಭಾರತ ಬೃಹತ್ ಮೊತ್ತ: ಇದಕ್ಕೂ ಮುನ್ನ ಟಾಸ್ ಗೆದ್ದ ಆಫ್ರಿಕಾ, ಭಾರತವನ್ನು ಮೊದಲು ಬ್ಯಾಟ್ ಮಾಡುವಂತೆ ಅಹ್ವಾನಿಸಿತು. ಭಾರತ ಮೊದಲ ಓವರ್‌ನಲ್ಲೇ ರೋಹಿತ್ ಶರ್ಮಾ (0) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಆದರೆ 2ನೇ ವಿಕೆಟ್‌ಗೆ ಶಿಖರ್ ಧವನ್ (76) ಹಾಗೂ ಕೊಹ್ಲಿ 140 ರನ್‌ಗಳ ಜೊತೆಯಾಟವಾಡಿ ತಂಡಕ್ಕೆ ಆಸರೆ ಯಾದರು. ಖಾತೆ ತೆರೆಯುವ ಮೊದಲೇ ಕೊಹ್ಲಿಗೆ ಜೀವದಾನ ದೊರೆಯಿತು. ಡಿಆರ್‌ಎಸ್ ಸಹಾಯದಿಂದ ಕೊಹ್ಲಿ ಕ್ರೀಸ್‌ನಲ್ಲಿ ಉಳಿದರು.

ಧವನ್ ಔಟಾದ ಬಳಿಕ ಕೊಹ್ಲಿ ಏಕಾಂಗಿ ಹೋರಾಟ ಪ್ರದರ್ಶಿಸಿದರು. ರಹಾನೆ ಸೇರಿ ಮಧ್ಯಮ ಕ್ರಮಾಂಕ ವೈಫಲ್ಯ ಅನುಭವಿಸಿತು. 7ನೇ ವಿಕೆಟ್‌ಗೆ ಭುವನೇಶ್ವರ್  ಜತೆ ಕೊಹ್ಲಿ 67 ರನ್ ಜೊತೆಯಾಟವಾಡಿ ತಂಡವನ್ನು 300ರ ಗಡಿ ದಾಟಿಸಿದರು.

ಕೊಹ್ಲಿ 34ನೇ ಶತಕ: 159 ಎಸೆತಗಳಲ್ಲಿ ಅಮೋಘ 160 ರನ್  12 ಬೌಂಡರಿ, 2 ಸಿಕ್ಸರ್ ಸಿಡಿಸಿದ ಕೊಹ್ಲಿ ಏಕದಿನದಲ್ಲಿ 34ನೇ ಶತಕ ದಾಖಲಿಸಿದರು. ಜತೆಗೆ ಭಾರತೀಯ ನಾಯಕನಾಗಿ ಅತಿಹೆಚ್ಚು ಶತಕಗಳ ದಾಖಲೆ ಬರೆದರು.ಏಕದಿನದಲ್ಲಿ ಕೊಹ್ಲಿಗಿದು 12ನೇ ಶತಕ. ಇದರೊಂದಿಗೆ ಸೌರವ್ ಗಂಗೂಲಿಯ 11 ಶತಕಗಳ ದಾಖಲೆ ಮುರಿದರು. 

400 ಬಲಿ: ಧೋನಿ ದಾಖಲೆ ಏಕದಿನದಲ್ಲಿ 400 ಬಲಿ ಪಡೆದ ಭಾರತದ ಮೊದಲ ಹಾಗೂ ವಿಶ್ವದ 4ನೇ ವಿಕೆಟ್ ಕೀಪರ್ ಎನ್ನುವ ದಾಖಲೆಯನ್ನು ಎಂ.ಎಸ್.ಧೋನಿ ಬರೆದಿದ್ದಾರೆ. ಬೂಮ್ರಾ ಬೌಲಿಂಗ್‌ನಲ್ಲಿ ಮಿಲ್ಲರ್‌ರ ಕ್ಯಾಚ್ ಹಿಡಿದು ಧೋನಿ, ಈ ಮೈಲಿಗಲ್ಲು ತಲುಪಿದರು. ಧೋನಿಗೂ ಮುನ್ನ ಸಂಗಕ್ಕರ (482), ಗಿಲ್‌ಕ್ರಿಸ್ಟ್  (472), ಬೌಷರ್ (೪೨೪) ಈ ಸಾಧನೆ ಮಾಡಿದ್ದರು.

ಕೊನೆ 6 ಪಂದ್ಯದಲ್ಲಿ ೪ ಶತಕ!

ವಿರಾಟ್ ಪ್ರಚಂಡ ಲಯದಲ್ಲಿದ್ದು, ತಾವಾಡಿರುವ ಕೊನೆ 6 ಏಕದಿನ ಪಂದ್ಯಗಳಲ್ಲಿ 4  ಶತಕ ಬಾರಿಸಿದ್ದಾರೆ. 2017 ರ ಅಂತ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 2 ಶತಕ ಬಾರಿಸಿದ್ದ ವಿರಾಟ್, ಈ ಸರಣಿಯ ಮೊದಲ ಪಂದ್ಯದಲ್ಲಿ ೧೧೨ ರನ್ ಗಳಿಸಿದ್ದರು. 2ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ 46 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಏಕದಿನದಲ್ಲಿ ಕೊಹ್ಲಿ 100 ಸಿಕ್ಸರ್ 160 ರನ್‌ಗಳ ಇನ್ನಿಂಗ್ಸ್‌ನಲ್ಲಿ 2 ಸಿಕ್ಸರ್ ಸಿಡಿಸುವ ಮೂಲಕ ವಿರಾಟ್, ಏಕದಿನ ಕ್ರಿಕೆಟ್‌ನಲ್ಲಿ 100 ಸಿಕ್ಸರ್‌ಗಳನ್ನು ಪೂರೈಸಿದರು. ಈ ಸಾಧನೆ ಮಾಡಿದ ಭಾರತದ ೮ನೇ ಬ್ಯಾಟ್ಸ್‌ಮನ್ ಎನ್ನುವ ಕೀರ್ತಿಗೆ ಕೊಹ್ಲಿ ಪಾತ್ರರಾದರು.

ಸರಣಿಯಲ್ಲಿ ಕೊಹ್ಲಿ 300+ ರನ್ 3 ಪಂದ್ಯಗಳಲ್ಲಿ 2 ಶತಕಗಳೊಂದಿಗೆ 318 ರನ್ ಕಲೆಹಾಕಿರುವ ಕೊಹ್ಲಿ, ದ್ವಿಪಕ್ಷೀಯ ಏಕದಿನ ಸರಣಿಗಳಲ್ಲಿ 6ನೇ ಬಾರಿಗೆ 300 ಕ್ಕೂ ಹೆಚ್ಚು ರನ್ ಬಾರಿಸಿದ ದಾಖಲೆ ಬರೆದರು. ಈ ಸಾಧನೆ ಮಾಡಿರುವ ವಿಶ್ವದ ಏಕೈಕ ಕ್ರಿಕೆಟಿಗ ಕೊಹ್ಲಿ. ದ್ರಾವಿಡ್, ಡಿ ಕಾಕ್ ಹಾಗೂ ರೋಹಿತ್ ತಲಾ 4 ಬಾರಿ 300ಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ.

Latest Videos
Follow Us:
Download App:
  • android
  • ios