ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಇಂದು ಮಂಗಳವಾರ ಟೀಮ್ ಇಂಡಿಯಾದ ಸಹಾಯಕ ಕೋಚ್ ಸಿಬ್ಬಂದಿಯನ್ನು ಪ್ರಕಟಿಸಿದೆ. ಅದರಲ್ಲಿ ಸಂಜಯ್ ಬಂಗಾರ್ ಅವರನ್ನ ಸಹಾಯಕ ಕೋಚ್ ಆಗಿ ಆಯ್ಕೆ ಮಾಡಿದೆ. ಭರತ್ ಅರುಣ್ ಅವರು ಬೌಲಿಂಗ್ ಕೋಚ್ ಆದರೆ, ಆರ್.ಶ್ರೀಧರ್ ಫೀಲ್ಡಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ.

ನವದೆಹಲಿ(ಜುಲೈ 18): ಟೀಮ್ ಇಂಡಿಯಾ ಬೌಲಿಂಗ್ ಕೋಚ್ ವಿಚಾರದಲ್ಲಿ ಮುಖ್ಯ ಕೋಚ್ ರವಿಶಾಸ್ತ್ರಿಯವರೇ ಗೆದ್ದಿದ್ದಾರೆ. ಭರತ್ ಅರುಣ್ ಅವರನ್ನೇ ತಂಡದ ಬೌಲಿಂಗ್ ಕೋಚ್ ಆಗಿ ಆಯ್ಕೆ ಮಾಡಲಾಗಿದೆ. ಜಹೀರ್ ಖಾನ್ ಅವರನ್ನ ಬೌಲಿಂಗ್ ಕೋಚ್ ಆಗಿ ಮುಂದುವರಿಸುವ ಪ್ರಯತ್ನವನ್ನು ಬಿಸಿಸಿಐ ಕೈಬಿಟ್ಟಿದೆ. ಶಾಸ್ತ್ರಿಯ ಹಠವೇ ಗೆದ್ದಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಇಂದು ಮಂಗಳವಾರ ಟೀಮ್ ಇಂಡಿಯಾದ ಸಹಾಯಕ ಕೋಚ್ ಸಿಬ್ಬಂದಿಯನ್ನು ಪ್ರಕಟಿಸಿದೆ. ಅದರಲ್ಲಿ ಸಂಜಯ್ ಬಂಗಾರ್ ಅವರನ್ನ ಸಹಾಯಕ ಕೋಚ್ ಆಗಿ ಆಯ್ಕೆ ಮಾಡಿದೆ. ಭರತ್ ಅರುಣ್ ಅವರು ಬೌಲಿಂಗ್ ಕೋಚ್ ಆದರೆ, ಆರ್.ಶ್ರೀಧರ್ ಫೀಲ್ಡಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಜಹೀರ್ ಖಾನ್ ಅವರನ್ನು ಕೆಲ ನಿರ್ದಿಷ್ಟ ವಿದೇಶೀ ಕ್ರಿಕೆಟ್ ಪ್ರವಾಸಗಳಿಗೆ ಮಾತ್ರ ಬಳಸಿಕೊಳ್ಳಲು ಬಿಸಿಸಿಐ ನಿರ್ಧರಿಸಿದೆ.

ಆದರೆ, ಬ್ಯಾಟಿಂಗ್ ಕೋಚ್ ರಾಹುಲ್ ದ್ರಾವಿಡ್ ಬಗ್ಗೆ ಯಾವುದೇ ಸ್ಪಷ್ಟನೆ ಬಂದಿಲ್ಲದಿರುವುದು ಗೊಂದಲಕ್ಕೆ ಕಾರಣವಾಗಿದೆ. ಜಹೀರ್ ಖಾನ್ ಮತ್ತು ರಾಹುಲ್ ದ್ರಾವಿಡ್ ಬಗ್ಗೆ ಮುಖ್ಯ ಕೋಚ್ ರವಿಶಾಸ್ತ್ರಿಯವರೇ ಒಂದಷ್ಟು ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ.

"ಅವರುಗಳ ಲಭ್ಯತೆ ಮೇಲೆ ಅವಲಂಬಿತವಾಗಿದೆ. ಅವರ ಅಮೂಲ್ಯ ಸಲಹೆಗಳು ತಂಡಕ್ಕೆ ಅತ್ಯಗತ್ಯ," ಎಂದು ಮಾಜಿ ಕ್ರಿಕೆಟಿಗ ರವಿ ಶಾಸ್ತ್ರಿ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ. ರಾಹುಲ್ ದ್ರಾವಿಡ್ ಕೂಡ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.