ಮುಂಬೈ[ಮೇ.22]: ಬಹು ನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್‌ಗೆ ಕೆಲವೇ ದಿನಗಳು ಬಾಕಿ ಇದ್ದು, ಬುಧವಾರ ಭಾರತ ಕ್ರಿಕೆಟ್‌ ತಂಡ ಇಂಗ್ಲೆಂಡ್‌ಗೆ ಪ್ರಯಾಣಿಸಲಿದೆ. ಮಂಗಳವಾರ ಇಲ್ಲಿನ ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ನಾಯಕ ವಿರಾಟ್‌ ಕೊಹ್ಲಿ ಹಾಗೂ ಕೋಚ್‌ ರವಿಶಾಸ್ತ್ರಿ ಸುದ್ದಿಗೋಷ್ಠಿ ನಡೆಸಿ, ವಿಶ್ವಕಪ್‌ ಸಿದ್ಧತೆ ಬಗ್ಗೆ ಮಾತನಾಡಿದರು.

ಭಾರತೀಯ ಸೇನೆಯಿಂದ ತಂಡ ಹೇಗೆ ಸ್ಫೂರ್ತಿಗೊಂಡಿದೆ ಎನ್ನುವ ಬಗ್ಗೆ ವಿವರಿಸಿದ ವಿರಾಟ್‌, ‘ಹಲವು ಮೂಲಗಳಿಂದ ಸ್ಫೂರ್ತಿ ದೊರೆಯುತ್ತದೆ. ಆದರೆ ಭಾರತೀಯ ಸೇನೆಯಿಂದ ಸಿಗುವಷ್ಟು ದೊಡ್ಡ ಸ್ಫೂರ್ತಿ ಬೇರೆಡೆಯಿಂದ ಸಿಗುವುದಿಲ್ಲ. ದೇಶಕ್ಕಾಗಿ ಸೈನಿಕರು ದುಡಿಯವುದರ ಜತೆ ಬೇರಾರ‍ಯವುದನ್ನೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ಸೇನೆಗಾಗಿ ಏನಾದರೂ ಮಾಡಬೇಕು ಎನ್ನುವ ಮನಸ್ಥಿತಿಯಿಂದ ಹೋದರೆ ನಮ್ಮ ಪ್ರದರ್ಶನ ಗುಣಮಟ್ಟದಲ್ಲಿ ಸುಧಾರಣೆ ಕಾಣಲಿದೆ. ಪ್ರತಿಯೊಬ್ಬರಿಗೂ ವಿಶ್ವಕಪ್‌ನಲ್ಲಿ ಆಡಲು ಹಲವು ರೀತಿಯಲ್ಲಿ ಸ್ಫೂರ್ತಿಗೊಂಡಿರುತ್ತಾರೆ. ಆದರೆ ಸೇನೆಯನ್ನು ಗಮನದಲ್ಲಿಟ್ಟುಕೊಂಡು ಆಡುವಾಗ ಉತ್ಸಾಹ ಮತ್ತಷ್ಟುಹೆಚ್ಚಲಿದೆ’ ಎಂದರು.

ಇದು ಕಠಿಣ ವಿಶ್ವಕಪ್‌: ರೌಂಡ್‌ ರಾಬಿನ್‌ ಮಾದರಿಯಲ್ಲಿ ಟೂರ್ನಿ ನಡೆಯಲಿರುವ ಕಾರಣ, ಇದು ಅತ್ಯಂತ ಕಠಿಣ ಟೂರ್ನಿ ಎನಿಸಿದೆ ಎಂದು ವಿರಾಟ್‌ ಹೇಳಿದರು. ‘ವಿಶ್ವಕಪ್‌ನಲ್ಲಿ ಆಡಲಿರುವ ಎಲ್ಲಾ 10 ತಂಡಗಳು ಬಲಿಷ್ಠವಾಗಿವೆ. ಕಳೆದ ಕೆಲ ವರ್ಷಗಳಲ್ಲಿ ಆಷ್ಘಾನಿಸ್ತಾನ ತೋರಿರುವ ಪ್ರದರ್ಶನವನ್ನು ಯಾರೂ ಕಡೆಗಣಿಸಲು ಸಾಧ್ಯವಿಲ್ಲ. ತಂಡಕ್ಕೆ ಹಾಗೂ ವೈಯಕ್ತಿಕವಾಗಿ ನನಗೂ ಇದು ಕಠಿಣ ಟೂರ್ನಿ’ ಎಂದು ಕೊಹ್ಲಿ ಹೇಳಿದರು.

ವಿಶ್ವಕಪ್‌ಗೂ ಮುನ್ನ ಐಪಿಎಲ್‌ನಲ್ಲಿ ಆಡಿದ್ದರಿಂದ ಆಟಗಾರರು ದಣಿದಿದ್ದಾರೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, ‘ವಿಶ್ವದ ಅಗ್ರ ಫುಟ್ಬಾಲ್‌ ತಂಡಗಳು ಸತತವಾಗಿ ಮೂರ್ನಾಲ್ಕು ತಿಂಗಳುಗಳ ಕಾಲ ಟೂರ್ನಿಗಳಲ್ಲಿ ಆಡುತ್ತವೆ. ಅವರಂತೆಯೇ ನಾವೂ ಸಹ ವೃತ್ತಿಪರ ಕ್ರೀಡಾಪಟುಗಳು. ವಿಶ್ವಕಪ್‌ಗೂ ಮುನ್ನ ಐಪಿಎಲ್‌ ನಡೆದಿದ್ದು ಅಗತ್ಯ ಸಿದ್ಧತೆ ನಡೆಸಲು ಅನುಕೂಲವೇ ಆಗಿದೆ’ ಎಂದರು.

ಧೋನಿ ಪಾತ್ರ ನಿರ್ಣಾಯಕ: ವಿಶ್ವಕಪ್‌ಗೆ ನಡೆಸಿರುವ ಸಿದ್ಧತೆ, ಹಾಕಿಕೊಂಡಿರುವ ಯೋಜನೆಗಳ ಬಗ್ಗೆ ಕೋಚ್‌ ರವಿಶಾಸ್ತ್ರಿ ವಿವರಿಸಿದರು. ‘ಕೊನೆ 10 ಓವರ್‌ಗಳಲ್ಲಿ ಯಾರು ಹೇಗೆ ಆಡುತ್ತಾರೆ ಎನ್ನುವುದರ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ. ಹೀಗಾಗಿ ಅದಕ್ಕೆ ಬೇಕಿರುವ ಅಗತ್ಯ ತಯಾರಿ ಮಾಡಿಕೊಂಡಿದ್ದೇವೆ. ಎಂ.ಎಸ್‌.ಧೋನಿಯ ಪಾತ್ರ ನಿರ್ಣಾಯಕವಾಗಲಿದೆ. ಐಪಿಎಲ್‌ನಲ್ಲಿ ಅವರು ಉತ್ತಮ ಲಯ ಪ್ರದರ್ಶಿಸಿದರು. ಅದೇ ಲಯ ಕಾಯ್ದುಕೊಂಡು ವಿಶ್ವಕಪ್‌ನಲ್ಲೂ ಆಡುವ ವಿಶ್ವಾಸದಲ್ಲಿದ್ದಾರೆ’ ಎಂದು ಶಾಸ್ತ್ರಿ ಹೇಳಿದರು.
 

ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ...