ಕಾನ್ಪುರ(ಸೆ. 26): ಐತಿಹಾಸಿಕ 500ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ದಾಖಲಿಸಿದೆ. ನ್ಯೂಜಿಲೆಂಡ್ ವಿರುದ್ಧ ಪ್ರಥಮ ಟೆಸ್ಟ್ ನಲ್ಲಿ 197 ರನ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ 500ನೇ ಟೆಸ್ಟ್ ಪಂದ್ಯವನ್ನು ಮತ್ತಷ್ಟು ಸ್ಮರಣಿಯಗೊಳಿಸಿದ ಪ್ರಶಂಸೆಗೆ ಕೊಹ್ಲಿ ಹುಡುಗರು ಪಾತ್ರರಾಗಿದ್ದಾರೆ.
ಪ್ರಥಮ ಟೆಸ್ಟ್ ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಮೊದಲನೇ ಇನ್ನಿಂಗ್ಸ್ ನಲ್ಲಿ 318 ರನ್ ಗಳಿಗೆ ಆಲೌಟ್ ಆಗಿತ್ತು, ಕಿವೀಸ್ ಬೌಲರ್ ಗಳು ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡವನ್ನು ಬಹುವಾಗಿ ಕಾಡಿದ್ದರು. ಇದಕ್ಕೆ ಉತ್ತರವಾಗಿ ಭರ್ಜರಿ ಆರಂಭ ಪಡೆದ ನ್ಯೂಜಿಲೆಂಡ್ ತಂಡ ಕೊನೆಯಲ್ಲಿ ಭಾರತದ ಸ್ಪಿನ್ ದಾಳಿಗೆ ತಲೆ ಭಾಗಿ 262ರನ್ ಗಳಿಗೆ ಸರ್ವಪತನ ಕಂಡಿತ್ತು.
56 ರನ್ ಲೀಡ್ ನೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ 5 ವಿಕೆಟ್ ಕಳೆದುಕೊಂಡು 377 ರನ್ ಕಲೆ ಹಾಕಿ ಡಿಕ್ಲೇರ್ ಮಾಡಿಕೊಂಡು ಕಿವೀಸ್ ಗೆ 434ರನ್ಗಳ ಟಾರ್ಗೆಟ್ ನೀಡಿತು. ಆದರೆ ಈ ಗುರಿಯನ್ನು ಬೆನ್ನತ್ತಿದ ನ್ಯೂಜಿಲೆಂಡ್ 236 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತ್ತು. ಈ ಮೂಲಕ ಟೀಮ್ ಇಂಡಿಯಾ 197 ರನ್ಗಳ ಭರ್ಜರಿ ಜಯ ಸಾಧಿಸಿತು. ಇದರೊಂದಿಗೆ ಭಾರತ 3 ಟೆಸ್ಟ್ಗಳ ಸರಣಿಯಲ್ಲಿ 1 - 0 ರಿಂದ ಮುನ್ನಡೆ ಸಾಧಿಸಿದೆ.
ಐತಿಹಾಸಿಕ 500ನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಸಾಂಘೀಕ ಪ್ರದರ್ಶನ ನೀಡಿದ್ದು, ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ಮೂಡಿ ಬಂದಿದ್ದು, ಮತ್ತೊಮ್ಮೆ ಟೀಮ್ ಇಂಡಿಯಾದ ಸ್ಪಿನ್ ಮೊಡಿ ವರ್ಕ್ ಆಗಿದೆ. ಮೊದಲನೇ ಇನ್ನಿಂಗ್ ನಲ್ಲಿ ರವೀಂದ್ರ ಜಡೇಜಾ 5 ವಿಕೆಟ್ ಪಡೆದರೆ ಅಶ್ವಿನ್ 4 ವಿಕೆಟ್ ಪಡೆದಿದ್ದರು, ಇನ್ನು ಎರಡನೇ ಇನ್ನಿಂಗ್ ನಲ್ಲಿ ಅಶ್ವಿನ್ 6 ವಿಕೆಟ್ ತಮ್ಮದಾಗಿಸಿಕೊಂಡು ಮತ್ತೊಮ್ಮೆ ಟೆಸ್ಟ್ ಪಂದ್ಯವೊಂದರಲ್ಲಿ 10 ವಿಕೆಟ್ ಪಡೆದ ಸಾಧನೆ ಮಾಡಿದರು. ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಮಿಂಚಿದ ಜಡೇಜಾ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.
