ಭಾರತ  ಹಾಗೂ ವೆಸ್ಟ್ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ ಭಾರತ ಭರ್ಜರಿ ಮೇಲುಗೈ ಸಾಧಿಸಿದೆ. ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪ್ರದರ್ಶನ ಹೇಗಿದೆ? ಇಲ್ಲಿದೆ ಅಪ್‌ಡೇಟ್ಸ್.

ರಾಜ್‌ಕೋಟ್(ಅ.04): ವೆಸ್ಟ್ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಟೀಂ ಇಂಡಿಯಾ ಭರ್ಜರಿ ಮೇಲುಗೈ ಸಾದಿಸಿದೆ. ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾ ಭರ್ಜರಿ ಶತಕದ ನೆರವಿನಿಂದ ಭಾರತ ಮೊದಲ ದಿನ 4 ವಿಕೆಟ್ ನಷ್ಟಕ್ಕೆ 364 ರನ್ ಸಿಡಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಭಾರತ ಆರಂಭದಲ್ಲೇ ಕೆಎಲ್ ರಾಹುಲ್ ವಿಕೆಟ್ ಕಳೆದುಕೊಂಡಿತು. ರಾಹುಲ್ ಶೂನ್ಯಕ್ಕೆ ಔಟಾದರು. ಆದರೆ ಪೃಥ್ವಿ ಶಾ ಹಾಗೂ ಚೇತೇಶ್ಪರ್ ಪೂಜಾರ ಜೊತೆಯಾಟದಿಂದ ಟೀಂ ಇಂಡಿಯಾ ಚೇತರಿಸಿಕೊಂಡಿತು. ಪೂಜಾರ 86 ರನ್ ಸಿಡಿಸಿ ಔಟಾದರು.

ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಪೃಥ್ವಿ ಶಾ ದಾಖಲೆ ಬರೆದರು. ಶಾ 134 ರನ್ ಕಾಣಿಕೆ ನೀಡಿದರು. ಅಜಿಂಕ್ಯ ರಹಾನೆ 41 ರನ್ ಸಿಡಿಸಿ ಔಟಾದರು. ಆದರೆ ನಾಯಕ ವಿರಾಟ್ ಕೊಹ್ಲಿ 20ನೇ ಅರ್ಧಶತಕ ದಾಖಲಿಸಿದರು. ವಿರಾಟ್ ಕೊಹ್ಲಿ ಅಜೇಯ 72 ರನ್ ಸಿಡಿಸಿದರೆ, ರಿಷಬ್ ಪಂತ್ ಅಜೇಯ 17 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಹೀಗಾಗಿ ಭಾರತ ಮೊದಲ ದಿನದಾಟದ ಅಂತ್ಯದಲ್ಲಿ 4 ವಿಕೆಟ್ ನಷ್ಟಕ್ಕೆ 364 ರನ್ ಸಿಡಿಸಿದೆ.