ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ ಗೆದ್ದಿರುವ ಟೀಂ ಇಂಡಿಯಾ ಇದೀಗ ಕ್ಲೀನ್ ಸ್ವೀಪ್ ಗೆಲುವಿನತ್ತ ಚಿತ್ತ ಹರಿಸಿದೆ. 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಟಾಸ್ ಗೆದ್ದಿರುವ ವಿಂಡೀಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಟೀಂ ಇಂಡಿಯಾದಲ್ಲಿ ಬದಲಾವಣೆಗಳೇನು? ಇಲ್ಲಿದೆ ವಿವರ.
ಚೆನ್ನೈ(ನ.11): ಭಾರತ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. 3 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿದ್ದಲ್ಲದೇ, ಸರಣಿ ಗೆದ್ದುಕೊಂಡಿದೆ. ಇದೀಗ ಇಂದಿನ ಪಂದ್ಯ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡಲು ಟೀಂ ಇಂಡಿಯಾ ಮುಂದಾಗಿದೆ.
ಅಂತಿಮ ಪಂದ್ಯಕ್ಕಾಗಿ ಟೀಂ ಇಂಡಿಯದಲ್ಲಿ 2 ಬದಲಾವಣೆ ಮಾಡಲಾಗಿದೆ. ವೇಗಿ ಜಸ್‌ಪ್ರೀತ್ ಬುಮ್ರಾ ಹಾಗೂ ಸ್ಪಿನ್ನರ್ ಕುಲ್ದೀಪ್ ಯಾದವ್ ಬದಲಿಗೆ ಯಜುವೇಂದ್ರ ಚಹಾಲ್ ಹಾಗೂ ವಾಶಿಂಗ್ಟನ್ ಸುಂದರ್ ಸ್ಥಾನ ಪಡೆದಿದ್ದಾರೆ.
ವೆಸ್ಟ್ ಇಂಡೀಸ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಎರಡನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿದ ತಂಡವೇ ಇಂದು ಕೂಡ ಕಣಕ್ಕಿಳಿಯಲಿದೆ. ಟೆಸ್ಟ್, ಏಕದಿನ ಹಾಗೂ ಟಿ20 ಸರಣಿ ಸೋತಿರುವ ವೆಸ್ಟ್ ಇಂಡೀಸ್ ಇದೀಗ ಅಂತಿಮ ಪಂದ್ಯ ಗೆದ್ದು ಮಾನ ಉಳಿಸಿಕೊಳ್ಳಲು ಹೋರಾಟ ನಡೆಸಲಿದೆ.
