ಪೋರ್ಟ್‌ ಆಫ್‌ ಸ್ಪೇನ್‌[ಆ.14]: ವೆಸ್ಟ್‌ಇಂಡೀಸ್‌ ವಿರುದ್ಧ ಟಿ20 ಸರಣಿ ಗೆದ್ದು ಬೀಗಿದ್ದ ಭಾರತ ತಂಡ ಇದೀಗ ಏಕದಿನ ಸರಣಿಯನ್ನೂ ವಶಪಡಿಸಿಕೊಳ್ಳುವ ಉತ್ಸಾಹದಲ್ಲಿದೆ. 

ಇಲ್ಲಿ ನಡೆಯಲಿರುವ 3ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿ ಟ್ರೋಫಿ ಎತ್ತಿಹಿಡಿಯಲು ವಿರಾಟ್‌ ಕೊಹ್ಲಿ ಪಡೆ ಕಾತರಿಸುತ್ತಿದೆ. ಮೊದಲ ಪಂದ್ಯ ಮಳೆಗೆ ಬಲಿಯಾದ ಬಳಿಕ, 2ನೇ ಪಂದ್ಯದಲ್ಲಿ ನಾಯಕ ಕೊಹ್ಲಿ ಹಾಗೂ ಭುವನೇಶ್ವರ್‌ರ ಆಕರ್ಷಕ ಪ್ರದರ್ಶನದ ನೆರವಿನಿಂದ 59 ರನ್‌ ಗೆಲುವು ಸಾಧಿಸಿದ್ದ ಭಾರತ 1-0 ಮುನ್ನಡೆ ಪಡೆದಿತ್ತು.

ಭಾರತ ವಿರುದ್ಧದ ಸರಣಿಗೆ ಸೌತ್ ಆಫ್ರಿಕಾ ತಂಡ ಪ್ರಕಟ!

ಧವನ್‌ಗೆ ಇನ್ನೆಷ್ಟು ಅವಕಾಶ?: ಭಾರತ ತಂಡ ಗೆಲುವಿನ ಲಯ ಮುಂದುವರಿಸಿದೆಯಾದರೂ, ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಮಾತ್ರ ಪಂದ್ಯದಿಂದ ಪಂದ್ಯಕ್ಕೆ ಕಳಪೆಯಾಗುತ್ತಿದ್ದಾರೆ. ಈ ಸರಣಿಯಲ್ಲಿ ಸತತ 4 ಪಂದ್ಯಗಳಲ್ಲಿ ಕಳಪೆ ಆಟವಾಡಿದ್ದಾರೆ. ಟಿ20 ಸರಣಿಯಲ್ಲಿ 1, 23, 3 ರನ್‌ ಗಳಿಸಿದ್ದ ಡೆಲ್ಲಿ ಆಟಗಾರ, 2ನೇ ಏಕದಿನದಲ್ಲಿ ಕೇವಲ 2 ರನ್‌ಗೆ ಔಟಾಗಿದ್ದರು. ಈ ಪಂದ್ಯದಲ್ಲೂ ಲಯ ಕಂಡುಕೊಳ್ಳದಿದ್ದರೆ ಮುಂಬರುವ ದ.ಆಫ್ರಿಕಾ ಹಾಗೂ ಆಸ್ಪ್ರೇಲಿಯಾ ವಿರುದ್ಧದ ಸರಣಿಗಳಿಗೆ ಅವರನ್ನು ಕೈಬಿಡುವ ಸಾಧ್ಯತೆ ಇದೆ. ವಿಂಡೀಸ್‌ ವಿರುದ್ಧ ಟೆಸ್ಟ್‌ ಸರಣಿಗೆ ಧವನ್‌ ಆಯ್ಕೆಯಾಗದ ಕಾರಣ, ಪ್ರವಾಸವನ್ನು ಸಕಾರಾತ್ಮಕವಾಗಿ ಮುಗಿಸುವ ಒತ್ತಡದಲ್ಲಿದ್ದಾರೆ.

ಮತ್ತೊಂದೆಡೆ 4ನೇ ಕ್ರಮಾಂಕಕ್ಕೂ ಪೈಪೋಟಿ ಶುರುವಾಗಿದೆ. ಶ್ರೇಯಸ್‌ ಅಯ್ಯರ್‌ ಆಕರ್ಷಕ ಆಟದ ಮೂಲಕ ರಿಷಭ್‌ ಪಂತ್‌ ಮೇಲೆ ಒತ್ತಡ ಹೇರುತ್ತಿದ್ದಾರೆ. ಪಂತ್‌, ಧೋನಿಯ ಉತ್ತರಾಧಿಕಾರಿಯಾಗಿ ಸ್ಥಾನ ಭದ್ರಪಡಿಸಿಕೊಳ್ಳಬೇಕಿದ್ದರೆ ಜವಾಬ್ದಾರಿಯುತ ಆಟವಾಡಬೇಕಿದೆ.

IPL 2020: ಹೊಸ ತಂಡದತ್ತ ಮುಖಮಾಡಿದ ರಹಾನೆ..?

ಕೊಹ್ಲಿ ಮತ್ತೊಂದು ಶತಕ ಸಿಡಿಸುವ ವಿಶ್ವಾಸದಲ್ಲಿದ್ದು, ಉಪನಾಯಕ ರೋಹಿತ್‌ ಶರ್ಮಾ ಸಹ ಭರ್ಜರಿ ಪ್ರದರ್ಶನದೊಂದಿಗೆ ಟೆಸ್ಟ್‌ ಸರಣಿಗೆ ಕಾಲಿಡಲು ಕಾಯುತ್ತಿದ್ದಾರೆ. ಭುವನೇಶ್ವರ್‌ ಮತ್ತೊಮ್ಮೆ ತಂಡದ ಬೌಲಿಂಗ್‌ ವಿಭಾಗವನ್ನು ಮುನ್ನಡೆಸಲಿದ್ದು, ಮೊಹಮದ್‌ ಶಮಿಗೆ ವಿಶ್ರಾಂತಿ ನೀಡಿ ನವ್‌ದೀಪ್‌ ಸೈನಿಯನ್ನು ಆಡಿಸುವ ಸಾಧ್ಯತೆ ಇದೆ.

ಗೊಂದಲದಲ್ಲಿ ವಿಂಡೀಸ್‌: ವೆಸ್ಟ್‌ಇಂಡೀಸ್‌ ಸರಣಿ ಉಳಿಸಿಕೊಳ್ಳುವ ಒತ್ತಡದಲ್ಲಿದ್ದು, ತಂಡದ ಆಯ್ಕೆಯಲ್ಲಿ ಗೊಂದಲ ಎದುರಿಸುತ್ತಿದೆ. ದಿಗ್ಗಜ ಕ್ರಿಸ್‌ ಗೇಲ್‌ ಪಾಲಿಗೆ ಇದು ಕೊನೆ ಏಕದಿನ ಪಂದ್ಯ ಎನ್ನಲಾಗಿದೆ. ಭಾರತ ವಿರುದ್ಧ ಸರಣಿ ಬಳಿಕ ಅವರು ನಿವೃತ್ತಿ ಪ್ರಕಟಿಸುವುದಾಗಿ ಹೇಳಿದ್ದರು. ಗೇಲ್‌ಗೆ ಗೆಲುವಿನ ವಿದಾಯ ಸಿಗಬೇಕಿದ್ದರೆ, ಶಾಯ್‌ ಹೋಪ್‌, ಶಿಮ್ರೊನ್‌ ಹೆಟ್ಮೇಯರ್‌, ನಿಕೋಲಸ್‌ ಪೂರನ್‌ರಂತಹ ಯುವ ಪ್ರತಿಭೆಗಳು ಮಿಂಚಬೇಕಿದೆ.

ಪಿಚ್‌ ರಿಪೋರ್ಟ್‌

ಕ್ವೀನ್ಸ್‌ ಪಾರ್ಕ್ ಓವಲ್‌ ಕ್ರೀಡಾಂಗಣ ಬ್ಯಾಟಿಂಗ್‌ ಸ್ನೇಹಿಯಾಗಿದೆ. ಆದರೆ ಮಳೆ ವಾತಾವರಣವಿರುವ ಸಾಧ್ಯತೆ ಇದ್ದು, ಮೊದಲು ಬ್ಯಾಟ್‌ ಮಾಡುವ ತಂಡ 270-280 ರನ್‌ ಕಲೆಹಾಕಿದರೆ ರಕ್ಷಿಸಿಕೊಳ್ಳಲು ಸುಲಭವಾಗಲಿದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ, ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ (ನಾಯಕ), ರಿಷಭ್‌ ಪಂತ್‌, ಶ್ರೇಯಸ್‌ ಅಯ್ಯರ್‌, ಕೇದಾರ್‌ ಜಾಧವ್‌, ರವೀಂದ್ರ ಜಡೇಜಾ, ಭುವನೇಶ್ವರ್‌ ಕುಮಾರ್‌, ಮೊಹಮದ್‌ ಶಮಿ, ಕುಲ್ದೀಪ್‌ ಯಾದವ್‌, ಖಲೀಲ್‌ ಅಹ್ಮದ್‌.

ವಿಂಡೀಸ್‌: ಕ್ರಿಸ್‌ ಗೇಲ್‌, ಎವಿನ್‌ ಲೆವಿಸ್‌, ಶಾಯ್‌ ಹೋಪ್‌, ಶಿಮ್ರೊನ್‌ ಹೆಟ್ಮೇಯರ್‌, ನಿಕೋಲಸ್‌ ಪೂರನ್‌, ರೊಸ್ಟನ್‌ ಚೇಸ್‌, ಜೇಸನ್‌ ಹೋಲ್ಡರ್‌ (ನಾಯಕ), ಕ್ರೇಗ್‌ ಬ್ರಾಥ್‌ವೇಟ್‌, ಕೀಮಾರ್‌ ರೋಚ್‌, ಶೆಲ್ಡನ್‌ ಕಾಟ್ರೆಲ್‌, ಒಶೇನ್‌ ಥಾಮಸ್‌.

ಪಂದ್ಯ ಆರಂಭ: ಸಂಜೆ 7ಕ್ಕೆ, 
ನೇರ ಪ್ರಸಾರ: ಸೋನಿ ಟೆನ್‌ 1