"

ಗಯಾನ[ಆ.09): ಭಾರತ ಹಾಗೂ ವೆಸ್ಟ್‌ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯ ಮಳೆಯಿಂದ ರದ್ದಾಯಿತು. ಗುರುವಾರ ಭಾರೀ ಮಳೆಯಿಂದಾಗಿ ಪಂದ್ಯ 2 ಗಂಟೆ ತಡವಾಗಿ ಆರಂಭಗೊಂಡಿತು. ಸಂಜೆ 7ಕ್ಕೆ ಆರಂಭಗೊಳ್ಳಬೇಕಿದ್ದ ಪಂದ್ಯ ರಾತ್ರಿ 9ಕ್ಕೆ ಆರಂಭಗೊಂಡಿತು.

ಪಂದ್ಯವನ್ನು ತಲಾ 43 ಓವರ್‌ಗಳಿಗೆ ಇಳಿಸಲಾಯಿತು. ಟಾಸ್ ಗೆದ್ದ ಟೀಂ ಇಂಡಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ವಿಂಡೀಸ್ ಇನ್ನಿಂಗ್ಸ್‌ನಲ್ಲಿ 5.4 ಓವರ್ ಆಟ ನಡೆದಿದ್ದಾಗ ಮತ್ತೆ ಮಳೆ ಆರಂಭಗೊಂಡ ಕಾರಣ, ಅರ್ಧಗಂಟೆಗೂ ಹೆಚ್ಚು ಕಾಲ ಆಟ ಸ್ಥಗಿತಗೊಂಡಿತು. ಬಳಿಕ ಪಂದ್ಯವನ್ನು ತಲಾ 40 ಓವರ್‌ಗೆ ಕಡಿತಗೊಳಿಸಲಾಯಿತು. ಮೈದಾನ ಒದ್ದೆಯಾಗಿದ್ದ ಕಾರಣ ಆಟ ಆರಂಭವಾಗಲು ತಡವಾಯಿತು. ಬಳಿಕ ಪಂದ್ಯವನ್ನು ತಲಾ 34 ಓವರ್‌ಗಳಿಗೆ ಇಳಿಸಲಾಯಿತು.

ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ; ತಂಡದಲ್ಲಿ 5 ಬದಲಾವಣೆ

ಕ್ರಿಸ್ ಗೇಲ್ ನಿಧಾನ ಗತಿಯಲ್ಲಿ ಬ್ಯಾಟ್ ಮಾಡಿದರೂ, ಎವಿನ್ ಲೆವಿಸ್ ಅಬ್ಬರಿಸಿದರು. 36 ಎಸೆತಗಳಲ್ಲಿ ೨2 ಬೌಂಡರಿ,3 ಸಿಕ್ಸರ್‌ಗಳೊಂದಿಗೆ ಅಜೇಯ 40 ರನ್ ಸಿಡಿಸಿದರು. ಬರೋಬ್ಬರಿ 31 ಎಸೆತಗಳನ್ನು ಎದುರಿಸಿದ ಕ್ರಿಸ್ ಗೇಲ್ ಕೇವಲ 4 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಕುಲ್ದೀಪ್ ಯಾದವ್, ಗೇಲ್ ವಿಕೆಟ್ ಕಿತ್ತು ಸಂಭ್ರಮಿಸಿದರು. ವಿಂಡೀಸ್ 13 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿದ್ದಾಗ ಮತ್ತೆ ಮಳೆ ಆರಂಭವಾಯಿತು. ಬಿಡದೆ ಮಳೆ ಸುರಿದ ಕಾರಣ, ಭಾರತೀಯ ಸಮಯ ಮಧ್ಯರಾತ್ರಿ 12.43ಕ್ಕೆ ಪಂದ್ಯ ಫಲಿತಾಂಶ ಕಾಣದೆ ಮುಕ್ತಾಯಗೊಳ್ಳಲಿದೆ ಎಂದು ಅಂಪೈರ್‌ಗಳು ಘೋಷಿಸಿದರು. ಆ.11ರಂದು 2ನೇ ಏಕದಿನ ಪಂದ್ಯ ನಡೆಯಲಿದೆ.

ಗೇಲ್ ದಾಖಲೆ: 296ನೇ ಏಕದಿನ ಪಂದ್ಯವನ್ನಾಡಿದ ಕ್ರಿಸ್ ಗೇಲ್ ವಿಂಡೀಸ್ ಪರ ಅತಿಹೆಚ್ಚು ಏಕದಿನಗಳನ್ನಾಡಿದ ದಾಖಲೆ ಬರೆದರು. 295 ಪಂದ್ಯಗಳನ್ನಾಡಿ ಮೊದಲ ಸ್ಥಾನದಲ್ಲಿದ್ದ ಬ್ರಿಯಾನ್ ಲಾರಾರನ್ನು ಗೇಲ್ ಹಿಂದಿಕ್ಕಿದರು. ಆದರೆ ವಿಂಡೀಸ್ ಪರ ಏಕದಿನದಲ್ಲಿ ಗರಿಷ್ಠ ರನ್ ಬಾರಿಸಿದ ಸರದಾರನಾಗಲು ಗೇಲ್ ಕಾಯಬೇಕಿದೆ. ಲಾರಾ 30,348 ರನ್ ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು, ಲಾರಾ ಹಿಂದಿಕ್ಕಲು ಗೇಲ್‌ಗೆ ಕೇವಲ 5 ರನ್ ಬೇಕಿದೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ