ಭಾರತ ಹಾಗೂ ವೆಸ್ಟ್ಇಂಡೀಸ್ ನಡುವಿನ 5 ಏಕದಿನ ಪಂದ್ಯಗಳ ಸರಣಿ ಇಂದಿನಿಂದ ಆರಂಭಗೊಳ್ಳಲಿದೆ. ಗುವಾಹಟಿಯಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ಬಲಿಷ್ಠ ತಂಡವನ್ನೇ ಕಣಕ್ಕಿಳಿಸಿದೆ. ಇಲ್ಲಿದೆ ಇಂದಿನ ಪಂದ್ಯದ ವಿಶೇಷತೆ. 

ಗುವಾಹಟಿ(ಅ.21): ಏಷ್ಯನ್‌ ಚಾಂಪಿಯನ್‌ ಭಾರತ, ಭಾನುವಾರದಿಂದ ವಿಂಡೀಸ್‌ ವಿರುದ್ಧ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲಿದೆ. ಸರಣಿಯ ಮೊದಲ ಪಂದ್ಯ ಭಾನುವಾರ ಇಲ್ಲಿನ ಬರ್ಸಾಪರ ಕ್ರೀಡಾಂಗಣದಲ್ಲಿ ನಡೆಯಲಿದ್ದು, 2019ರ ಐಸಿಸಿ ಏಕದಿನ ವಿಶ್ವಕಪ್‌ಗೆ 2ನೇ ಸುತ್ತಿನ ಅಭ್ಯಾಸವನ್ನು ತಂಡ ಆರಂಭಿಸಲಿದೆ.

ವಿಶ್ವಕಪ್‌ಗೆ ಕೇವಲ 8 ತಿಂಗಳು ಬಾಕಿ ಇದ್ದು, ಮಹಾಸಮರಕ್ಕೆ ಸಜ್ಜಾಗಲು ಭಾರತಕ್ಕೆ ಕೇವಲ 18 ಪಂದ್ಯಗಳು ಸಿಗಲಿದೆ. ತಂಡದ ಮಧ್ಯಮ ಕ್ರಮಾಂಕದ ಸಮಸ್ಯೆಗೆ ಇನ್ನೂ ಪರಿಹಾರ ಸಿಗದೆ ಇರುವುದು ನಾಯಕ ಕೊಹ್ಲಿ ಹಾಗೂ ಕೋಚ್‌ ರವಿಶಾಸ್ತ್ರಿ ತಲೆನೋವು ಹೆಚ್ಚಿಸಿದ್ದು, ಈ ಸರಣಿಯಲ್ಲಿ ಉತ್ತರ ಕಂಡುಕೊಳ್ಳಲು ಟೀಂ ಇಂಡಿಯಾ ಎದುರು ನೋಡುತ್ತಿದೆ.

ಏಷ್ಯಾಕಪ್‌ಗೆ ವಿಶ್ರಾಂತಿ ಪಡೆದಿದ್ದ ನಾಯಕ ಕೊಹ್ಲಿ, ಏಕದಿನ ಕ್ರಿಕೆಟ್‌ಗೆ ವಾಪಸಾಗುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಭಾರತ ಹೊಸ ಸಂಯೋಜನೆ ಪ್ರಯೋಗಿಸಲಿದ್ದು, ರಿಶಭ್‌ ಪಂತ್‌ಗೆ ಏಕದಿನ ಕ್ಯಾಪ್‌ ದೊರೆಯಲಿದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಸ್ಫೋಟಕ ಆಟವಾಡಿ ಮೊದಲ ಬಾರಿಗೆ ಏಕದಿನ ತಂಡದಲ್ಲಿ ಸ್ಥಾನ ಪಡೆದಿರುವ ಪಂತ್‌, ಅಂತಿಮ 12 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಚೊಚ್ಚಲ ಸರಣಿಯಲ್ಲೇ ಪಂತ್‌ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.

ಒತ್ತಡದಲ್ಲಿ ಧೋನಿ: ಸರಣಿಯಲ್ಲಿ ಎಲ್ಲರ ಕಣ್ಣು ಎಂ.ಎಸ್‌.ಧೋನಿ ಮೇಲೆ ಇರಲಿದೆ. 2018ರಲ್ಲಿ 10 ಪಂದ್ಯಗಳಲ್ಲಿ ಧೋನಿ ಬ್ಯಾಟ್‌ ಮಾಡಿದ್ದು 28.12ರ ಸರಾಸರಿ ಹೊಂದಿದ್ದಾರೆ. 67.36ರ ಸ್ಟೆ್ರೖಕ್‌ರೇಟ್‌ ತಂಡವನ್ನು ಚಿಂತೆಗೀಡು ಮಾಡಿದೆ. ರೋಹಿತ್‌, ಧವನ್‌ ಆರಂಭಿಕರಾಗಿ ಆಡಲಿದ್ದು 3ನೇ ಕ್ರಮಾಂಕದಲ್ಲಿ ಕೊಹ್ಲಿ ಬ್ಯಾಟ್‌ ಮಾಡಲಿದ್ದಾರೆ. 4ನೇ ಕ್ರಮಾಂಕದಲ್ಲಿ ಆಡಲಿರುವ ಅಂಬಟಿ ರಾಯುಡು ಮೇಲೆ ಭಾರೀ ಒತ್ತಡವಿದೆ. ಭಾರತ ತಂಡ ಹಲವು ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಗೆ ರಾಯುಡು ಪರಿಹಾರವಾಗಬಲ್ಲರಾ? ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ಕೊಹ್ಲಿ, ‘4ನೇ ಕ್ರಮಾಂಕ ಇಷ್ಟುದಿನ ನಮಗೆ ಸಮಸ್ಯೆಯಾಗಿತ್ತು. ಆದರೆ ಆ ಸ್ಥಾನಕ್ಕೆ ರಾಯುಡು ಸೂಕ್ತ ಎಂದು ನಮಗನಿಸಿದೆ. ವಿಶ್ವಕಪ್‌ ಹತ್ತಿರವಿದ್ದು, ನಾವು ತಂಡದ ಸಂಯೋಜನೆ ಸರಿಪಡಿಸಿಕೊಳ್ಳಬೇಕಿದೆ’ ಎಂದರು.

ಹಾರ್ದಿಕ್‌ ಪಾಂಡ್ಯ ಅನುಪಸ್ಥಿತಿಯಲ್ಲಿ ರವೀಂದ್ರ ಜಡೇಜಾ ಆಲ್ರೌಂಡರ್‌ ಸ್ಥಾನದಲ್ಲಿ ಆಡಲಿದ್ದು, ಕುಲ್ದೀಪ್‌ ಯಾದವ್‌ ಹಾಗೂ ಯಜುವೇಂದ್ರ ಚಹಲ್‌ ಸ್ಪಿನ್ನರ್‌ಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಉಮೇಶ್‌ ಯಾದವ್‌, ಮೊಹಮದ್‌ ಶಮಿ ಹಾಗೂ ಖಲೀಲ್‌ ಅಹ್ಮದ್‌ ಪೈಕಿ ಇಬ್ಬರಿಗೆ ಸ್ಥಾನ ದೊರೆಯಲಿದೆ.

ವಿಂಡೀಸ್‌ಗೆ ತಾರೆಯರ ಕೊರತೆ: ಸ್ಫೋಟಕ ಆಟಗಾರ ಎವಿನ್‌ ಲೆವೀಸ್‌ ಸರಣಿಯಿಂದ ಹಿಂದೆ ಸರಿದಿದ್ದು ವಿಂಡೀಸ್‌ ಸಮಸ್ಯೆ ಹೆಚ್ಚಿಸಿದೆ. ಕ್ರಿಸ್‌ ಗೇಲ್‌, ಆ್ಯಂಡ್ರೆ ರಸೆಲ್‌, ಸುನಿಲ್‌ ನರೈನ್‌ ಸಹ ಸರಣಿಯಲ್ಲಿ ಆಡುತ್ತಿಲ್ಲ. ಹಿರಿಯ ಆಟಗಾರ ಮರ್ಲಾನ್‌ ಸ್ಯಾಮುಯಲ್ಸ್‌, ನಾಯಕ ಜೇಸನ್‌ ಹೋಲ್ಡರ್‌, ವೇಗಿ ಕೀಮಾರ್‌ ರೋಚ್‌ ವಿಂಡೀಸ್‌ ಸವಾಲು ಮುನ್ನಡೆಸಲಿದ್ದಾರೆ.

ಬರ್ಸಾಪರದಲ್ಲಿ ಚೊಚ್ಚಲ ಏಕದಿನ:
ಗುವಾಹಟಿಯ ಬರ್ಸಾಪರ ಕ್ರೀಡಾಂಗಣ ಇದೇ ಮೊದಲ ಬಾರಿಗೆ ಏಕದಿನ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. 2014ರಲ್ಲಿ ಇಲ್ಲಿ ಭಾರತ-ಆಸ್ಪ್ರೇಲಿಯಾ ನಡುವೆ ಟಿ20 ಪಂದ್ಯ ನಡೆದಿತ್ತು. ಪಂದ್ಯದ ಬಳಿಕ ಆಸ್ಪ್ರೇಲಿಯಾ ತಂಡದ ಬಸ್‌ ಮೇಲೆ ಅಭಿಮಾನಿಗಳು ಕಲ್ಲು ತೂರಾಟ ನಡೆಸಿದ್ದರು.

ತಂಡಗಳು
ಭಾರತ (ಅಂತಿಮ 12): ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ, ಶಿಖರ್‌ ಧವನ್‌, ಅಂಬಟಿ ರಾಯುಡು, ರಿಶಭ್‌ ಪಂತ್‌, ಎಂ.ಎಸ್‌.ಧೋನಿ, ರವೀಂದ್ರ ಜಡೇಜಾ, ಕುಲ್ದೀಪ್‌ ಯಾದವ್‌, ಯಜುವೇಂದ್ರ ಚಹಲ್‌, ಉಮೇಶ್‌ ಯಾದವ್‌, ಮೊಹಮದ್‌ ಶಮಿ, ಖಲೀಲ್‌ ಅಹ್ಮದ್‌.

ವಿಂಡೀಸ್‌: ಜೇಸನ್‌ ಹೋಲ್ಡರ್‌ (ನಾಯಕ), ಫ್ಯಾಬಿಯನ್‌ ಅಲೆನ್‌, ಆ್ಯಂಬ್ರಿಸ್‌, ಸ್ಯಾಮುಯಲ್ಸ್‌, ಬಿಶೂ, ಹೇಮ್‌ರಾಜ್‌, ಹೆಟ್ಮೇಯರ್‌, ಶಾಯ್‌ ಹೋಪ್‌, ಅಲ್ಜಾರಿ ಜೋಸೆಫ್‌, ಪೋವೆಲ್‌, ನರ್ಸ್‌, ಕೀಮೌ ಪೌಲ್‌, ರೋವ್ಮನ್‌, ರೋಚ್‌, ಒಶಾನೆ ಥಾಮಸ್‌, ಒಬೆಡ್‌ ಮೆಕೊಯ್‌

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1
ಒಟ್ಟು ಮುಖಾಮುಖಿ: 121
ಭಾರತ: 56
ವಿಂಡೀಸ್‌: 61