ವಿಶಾಖಪಟ್ಟಣಂ[ಅ.02]: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಬಹು ನಿರೀಕ್ಷಿತ 3 ಪಂದ್ಯಗಳ ಟೆಸ್ಟ್‌ ಸರಣಿ ಬುಧವಾರ (ಅ.2) ರಿಂದ ಆರಂಭವಾಗಲಿದೆ. ಮೊದಲ ಟೆಸ್ಟ್‌ ಪಂದ್ಯವು ವಿಶಾಖಪಟ್ಟಣಂನ ಡಾ. ವೈಎಸ್‌ ರಾಜಶೇಖರ ರೆಡ್ಡಿ (ಎಸಿಎ ವಿಡಿಸಿಎ) ಕ್ರಿಕೆಟ್‌ ಮೈದಾನದಲ್ಲಿ ನಡೆಯಲಿದೆ. ಕೆಲ ಸಮಯದ ಹಿಂದಿನಿಂದ ಭಾರತ ಕ್ರಿಕೆಟ್‌ ತಂಡ ಸರಣಿ ಆರಂಭದ ಹಿಂದಿನ ದಿನವೇ ಅಂತಿಮ 11ರ ಪಟ್ಟಿಯನ್ನು ಪ್ರಕಟಿಸುವ ವಾಡಿಕೆಯನ್ನು ಅನುಸರಿಸುತ್ತಿದೆ. ಈ ನಡುವೆ ಮೊದಲ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ.

ಈ ಸರಣಿ ಹಲವು ವಿಚಾರಗಳಿಂದಾಗಿ ಮಹತ್ವ ಪಡೆದುಕೊಂಡಿದೆ. ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ 120 ಅಂಕಗಳಿಂದ ಅಗ್ರಸ್ಥಾನದಲ್ಲಿರುವ ಭಾರತ, ಆಫ್ರಿಕಾ ವಿರುದ್ಧದ ಸರಣಿ ಕ್ಲೀನ್‌ ಸ್ವೀಪ್‌ ಮಾಡುವ ಮೂಲಕ ಮತ್ತೆ ಅಗ್ರಸ್ಥಾನದಲ್ಲಿಯೇ ಉಳಿಯುವ ವಿಶ್ವಾಸದಲ್ಲಿದೆ. ಟೆಸ್ಟ್‌ ರ‍್ಯಾಂಕಿಂಗ್‌ನಲ್ಲೂ ಭಾರತ ಮೊದಲ ಸ್ಥಾನದಲ್ಲಿದೆ.

ಆರಂಭಿಕನಾಗಿ ರೋಹಿತ್‌:

ಸೀಮಿತ ಓವರ್‌ಗಳಲ್ಲಿ ಖಾಯಂ ಆರಂಭಿಕನಾಗಿ ಕಣಕ್ಕಿಳಿಯುವ ರೋಹಿತ್‌ ಶರ್ಮಾ, ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ತಂಡದಲ್ಲಿರುವ ಏಕೈಕ ಕನ್ನಡಿಗ ಮಯಾಂಕ್‌ ಅಗರ್‌ವಾಲ್‌ ಅವರೊಂದಿಗೆ ರೋಹಿತ್‌ ಓಪನರ್‌ ಆಗಿ ಆಡಲಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ವೈಫಲ್ಯ ಅನುಭವಿಸಿರುವ ರೋಹಿತ್‌, ಕೆಂಪು ಚೆಂಡಿನಲ್ಲಿ ಎಷ್ಟರ ಮಟ್ಟಿಗೆ ಯಶಸ್ಸು ಸಾಧಿಸಲಿದ್ದಾರೆ ಎನ್ನುವುದು ಕಾದು ನೋಡಬೇಕಿದೆ.

INDvSA ಟೆಸ್ಟ್ ಸರಣಿ; 3 ಭಾರತೀಯರಿಗೆ ದಾಖಲೆ ಮೇಲೆ ಕಣ್ಣು!

ಈ ನಡುವೆ ಮಧ್ಯಮ ಕ್ರಮಾಂಕದಲ್ಲಿ ನಾಯಕ ವಿರಾಟ್‌ ಕೊಹ್ಲಿ, ಚೇತೇಶ್ವರ್‌ ಪೂಜಾರ, ಅಜಿಂಕ್ಯ ರಹಾನೆ ಹಾಗೂ ಹನುಮ ವಿಹಾರಿ ತಂಡಕ್ಕೆ ಬಲ ತುಂಬಲಿದ್ದಾರೆ. ವಿಂಡೀಸ್‌ ಸರಣಿಯಲ್ಲಿ ಪೂಜಾರ ಬ್ಯಾಟಿಂಗ್‌ನಲ್ಲಿ ಮಿಂಚಲು ವಿಫಲರಾಗಿದ್ದರು. ಆದರೂ ಪೂಜಾರ ಮೇಲೆ ಟೀಂ ಇಂಡಿಯಾ ಹೆಚ್ಚಿನ ಭರವಸೆ ಇಟ್ಟುಕೊಂಡಿದೆ. ರಹಾನೆ ಎಂದಿನಂತೆ ಸ್ಥಿರ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ. ವಿಹಾರಿ ಕೆಳ ಕ್ರಮಾಂಕದಲ್ಲಿ ತಂಡಕ್ಕೆ ನೆರವಾಗಲಿದ್ದಾರೆ.

ಅಶ್ವಿನ್‌ ಕಮ್‌ಬ್ಯಾಕ್‌:

ಬಹಳ ದಿನಗಳ ಬಳಿಕ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಭಾರತ ತಂಡದ ಅಂತಿಮ 11ರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ. ತವರಿನ ಅಂಗಳದ ಸ್ಪಿನ್‌ ಸ್ನೇಹಿ ಪಿಚ್‌ನಲ್ಲಿ ಅಶ್ವಿನ್‌ ಕೊಹ್ಲಿ ಪಡೆಯ ಪ್ರಮುಖ ಅಸ್ತ್ರವಾಗಿದ್ದಾರೆ. ಅಶ್ವಿನ್‌ ಜೊತೆಯಾಗಿ ರವೀಂದ್ರ ಜಡೇಜಾ ಅದ್ಭುತ ಫಾರ್ಮ್ ನಲ್ಲಿದ್ದು, ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಕಂಟಕವಾಗಲಿದ್ದಾರೆ.

ಪಂತ್‌ಗೆ ಕೊಕ್‌ ಸಾಹ ಇನ್‌:

ಗಾಯದ ಸಮಸ್ಯೆಯಿಂದಾಗಿ ಕ್ರಿಕೆಟ್‌ನಿಂದ ದೂರ ಉಳಿದಿದ್ದ ವಿಕೆಟ್‌ ಕೀಪರ್‌ ವೃದ್ಧಿಮಾನ್‌ ಸಾಹ 22 ತಿಂಗಳ ಬಳಿಕ ಮತ್ತೆ ಅಂ.ರಾ. ಕ್ರಿಕೆಟ್‌ಗೆ ಮರಳಿದ್ದಾರೆ. ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್‌ ಸರಣಿಗೆ ರಿಷಭ್‌ ಪಂತ್‌ಗೆ ವಿಶ್ರಾಂತಿ ನೀಡಿರುವ ಟೀಂ ಇಂಡಿಯಾ, ಸಾಹರಿಗೆ ಅವಕಾಶ ಕಲ್ಪಿಸಿದೆ. ವಿಂಡೀಸ್‌ ಪ್ರವಾಸದಲ್ಲಿ ಸಾಹ ತಂದಲ್ಲಿದ್ದರೂ 11ರ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಪಂತ್‌ ವಿಂಡೀಸ್‌ ಸರಣಿಯಲ್ಲಿ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದರು.

INDvSA 1ನೇ ಟೆಸ್ಟ್: ಟೀಂ ಇಂಡಿಯಾ XI ಪ್ರಕಟ, ರಿಷಭ್ ಪಂತ್ ಔಟ್!

ತವರು ನೆಲದಲ್ಲಿ ಟೀಂ ಇಂಡಿಯಾ ಇಬ್ಬರು ವೇಗಿಗಳೊಂದಿಗೆ ಕಣಕ್ಕಿಳಿಯುತ್ತಿದೆ. ತಾರಾ ವೇಗಿ ಜಸ್‌ಪ್ರೀತ್‌ ಬುಮ್ರಾ ಗಾಯಗೊಂಡು ಸರಣಿಗೆ ಅಲಭ್ಯರಾಗಿರುವ ಹಿನ್ನೆಲೆಯಲ್ಲಿ ಇಶಾಂತ್‌ ಶರ್ಮಾ ಹಾಗೂ ಮೊಹಮದ್‌ ಶಮಿ ತಂಡದ ವೇಗದ ನೊಗ ಹೊರಲಿದ್ದಾರೆ. ಈ ಇಬ್ಬರೂ ವೇಗಿಗಳು ಅನುಭವಿಗಳಾಗಿದ್ದು ವಿಕೆಟ್‌ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಉಮೇಶ್‌ ಯಾದವ್‌ ತಂಡದಲ್ಲಿದ್ದರೂ ಹೊರಗುಳಿಯುವಂತಾಗಿದೆ.

ಆಫ್ರಿಕಾಕ್ಕೆ ಡುಪ್ಲೆಸಿ ಬಲ:

ಇತ್ತ ದಕ್ಷಿಣ ಆಫ್ರಿಕಾಕ್ಕೆ ನಾಯಕ ಫಾಫ್‌ ಡುಪ್ಲೆಸಿ ಬಲವಿದೆ. ಟಿ20 ಸರಣಿಯಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಕ್ವಿಂಟನ್‌ ಡಿಕಾಕ್‌ ಕೂಡ ಟೆಸ್ಟ್‌ ತಂಡದಲ್ಲಿದ್ದಾರೆ. ಅನುಭವಿ ಹಾಗೂ ಯುವ ಆಟಗಾರರನ್ನು ಹೊಂದಿರುವ ಆಫ್ರಿಕಾ ಭಾರತ ತಂಡಕ್ಕೆ ಪ್ರಬಲ ಪೈಪೋಟಿಯ ನಿರೀಕ್ಷೆಯಲ್ಲಿ ಕಣಕ್ಕಿಳಿಯುತ್ತಿದೆ.

ಪಿಚ್‌ ರಿಪೋರ್ಟ್‌:
ವಿಶಾಖಪಟ್ಟಣಂ ಪಿಚ್‌ ಸ್ಪಿನ್‌ ಸ್ನೇಹಿಯಾಗಿರಲಿದೆ. ಹವಮಾನ ಇಲಾಖೆಯ ಪ್ರಕಾರ ಪಂದ್ಯದ ಮೊದಲ ದಿನವೇ ಶೇ. 80ರಷ್ಟು ಮಳೆಯಾಗುವ ಸಂಭವವಿದೆ. ದಿನಕಳೆದಂತೆ ಪಿಚ್‌ನಲ್ಲಿ ತಿರುವು ಹೆಚ್ಚಾಗಲಿದೆ. ತವರಿನ ಅಭಿಮಾನಿಗಳ ಎದುರು ಭಾರತ ಇದರ ಸಂಪೂರ್ಣ ಲಾಭ ಎತ್ತುವ ಲೆಕ್ಕಚಾರದಲ್ಲಿ ಕಣಕ್ಕಿಳಿಯುತ್ತಿದೆ.

ತಂಡಗಳು

ಭಾರತ: ವಿರಾಟ್‌ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರೋಹಿತ್‌ ಶರ್ಮಾ, ಮಯಾಂಕ್‌ ಅಗರ್‌ವಾಲ್‌, ಚೇತೇಶ್ವರ್‌ ಪೂಜಾರ, ಹನುಮ, ಸಾಹ, ಅಶ್ವಿನ್‌, ಜಡೇಜಾ, ಶಮಿ, ಇಶಾಂತ್‌ ಶರ್ಮಾ.

ದ.ಆಫ್ರಿಕಾ: ಡು ಪ್ಲೆಸಿ (ನಾಯಕ), ಬವುಮಾ, ಬ್ಯುರನ್‌, ಡಿಕಾಕ್‌, ಎಲ್ಗರ್‌, ಹಮ್ಜಾ, ಕೇಶವ್‌, ಮಾರ್ಕ್ರಮ್‌, ಮುತ್ತುಸ್ವಾಮಿ, ಎನ್‌ಗಿಡಿ, ನೋರ್ಟೆ, ಫಿಲಾಂಡರ್‌, ಪೆಡಿಟ್‌, ರಬಾಡ, ರುದಿ ಸೆಕೆಂಡ್‌.

ಮುಖಾಮುಖಿ:

ಒಟ್ಟು - 36

ಭಾರತ - 11

ದ.ಆಫ್ರಿಕಾ-15

ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ