ಮುಂಬೈ(ಫೆ.20): ಪುಲ್ವಾಮ ದಾಳಿಯಿಂದ ಪಾಕಿಸ್ತಾನ ವಿರುದ್ಧದ ಬಹುತೇಕ ವ್ಯವಹಾರಗಳು ಬಂದ್ ಆಗಿದೆ. ಪಾಕ್ ಜೊತೆಗಿನ ಯಾವುದೇ ಸಂಬಂಧಕ್ಕೂ ಭಾರತ ತಯಾರಿಲ್ಲ. ಇದರ ನಡುವೆ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ದದ ಪಂದ್ಯ ಬಹಿಷ್ಕರಿಸುವಂತೆ ಒತ್ತಾಯ ಕೇಳಿಬಂದಿದೆ. ಈ ಕುರಿತು ಬಿಸಿಸಿಐ ಅಧಿಕಾರಿಗಳು ಮೌನ ಮುರಿದಿದ್ದಾರೆ.

ಇದನ್ನೂ ಓದಿ: ಪುಲ್ವಾಮಾ ದಾಳಿ: ಭಾರತ-ಪಾಕ್ ವಿಶ್ವಕಪ್ ಪಂದ್ಯ - ನಿರ್ಧಾರ ಪ್ರಕಟಿಸಿದ ICC

2019ರ ವಿಶ್ವಕಪ್ ಟೂರ್ನಿ ವೇಳಾಪಟ್ಟಿ ಪ್ರಕಾರ ಜೂನ್ 16 ರಂದು ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಲಿದೆ. ಇತ್ತ ಐಸಿಸಿ ಕೂಡ ವೇಳಾಪಟ್ಟಿ ಪ್ರಕಾರ ಇಂಡೋ-ಪಾಕ್ ಪಂದ್ಯ ನಡೆಯಲಿದೆ ಎಂದು ಐಸಿಸಿ ಸ್ಪಷ್ಟಪಡಿಸಿದೆ. ಆದರೆ ಪಾಕಿಸ್ತಾನ ವಿರುದ್ಧದ  ವಿಶ್ವಕಪ್ ಪಂದ್ಯ ಆಡೋ ಕುರಿತು  ಕೇಂದ್ರ ಸರ್ಕಾರ ನಿರ್ಧಾರವೇ ಅಂತಿಮ ಎಂದು ಬಿಸಿಸಿಐ ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: ಪುಲ್ವಾಮಾ ದಾಳಿ: ಕಂಗಾಲಾದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ಹತಾಶೆ ಮಾತು!

ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯ  ಬಹಿಷ್ಕರಿಸಿದರೆ ಪಾಕ್ ತಂಡಕ್ಕೆ 2 ಅಂಕಗಳು ಲಭ್ಯವಾಗಲಿದೆ. ಇನ್ನು ಫೈನಲ್ ಪಂದ್ಯದಲ್ಲಿ ಮತ್ತೆ ಭಾರತ ಹಾಗೂ ಪಾಕಿಸ್ತಾನ  ಮುಖಾಮುಖಿಯಾದರೆ ಪಾಕ್ ಪಂದ್ಯ ಆಡದೇ ವಿಶ್ವಕಪ್ ಗೆಲ್ಲಲಿದೆ. ಹೀಗಾಗಿ ಬಹಿಷ್ಕರಿಸುವುದು ಸೂಕ್ತವಲ್ಲ. ಆದರೆ ಇಂಡೋ-ಪಾಕ್ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ವಿರುದ್ಧವಾಗಿ ಬಿಸಿಸಿಐ ನಡೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಫೆ.27 ರಂದು ಐಸಿಸಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಇಂಡೋ-ಪಾಕ್ ವಿಶ್ವಕಪ್ ಪಂದ್ಯ ಪ್ರಸ್ತಾಪವಾಗಲಿದೆ ಎಂದಿದ್ದಾರೆ.