ಪುಲ್ವಾಮಾ ದಾಳಿ: ಭಾರತ-ಪಾಕ್ ವಿಶ್ವಕಪ್ ಪಂದ್ಯ - ನಿರ್ಧಾರ ಪ್ರಕಟಿಸಿದ ICC
ಪುಲ್ವಾಮ ದಾಳಿಯಿಂದ ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸುವಂತೆ ಒತ್ತಾಯ ಕೇಳಿಬರುತ್ತಿದೆ. ಈ ಮೂಲಕ ಪಾಕ್ ವಿರುದ್ದಧ ಯಾವುದೇ ಕ್ರೀಡೆ ಅಥವಾ ವ್ಯವಹಾರ ಕಡಿತಗೊಳಿಸುವಂತೆ ಕ್ರಿಕೆಟಿಗರು ಆಗ್ರಹಿಸಿದ್ದಾರೆ. ಇದೀಗ ಇಂಡೋ-ಪಾಕ್ ವಿಶ್ವಕಪ್ ಪಂದ್ಯ ಆಯೋಜನೆ ಕುರಿತು ಐಸಿಸಿ ನಿರ್ಧಾರ ಪ್ರಕಟಿಸಿದೆ.
ನವದೆಹಲಿ(ಫೆ.20): ಪುಲ್ವಾಮಾ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಮತ್ತಷ್ಟು ಹಳಸಿದೆ. ಪಾಕಿಸ್ತಾನ ಜೊತೆ ಯಾವುದೇ ವ್ಯವಹಾರ ನಡೆಸದಂತೆ ಭಾರತ ನಿರ್ಧರಿಸಿದೆ. ಹೀಗಾಗಿ 2019ರ ವಿಶ್ವಕಪ್ ಟೂರ್ನಿಯಲ್ಲಿ ಇಂಡೋ-ಪಾಕ್ ಪಂದ್ಯದ ಕುರಿತು ಅನುಮಾನಗಳು ಮೂಡಿತ್ತು. ಇಷ್ಟೇ ಅಲ್ಲ ಟೀಂ ಇಂಡಿಯಾದ ಹಲವು ಕ್ರಿಕೆಟಿಗರು ಪಾಕ್ ವಿರುದ್ದ ವಿಶ್ವಕಪ್ ಪಂದ್ಯ ಬಹಿಷ್ಕರಿಸುವಂತೆ ಸೂಚಿಸಿದ್ದರು. ಇಂಡೋ-ಪಾಕ್ ವಿಶ್ವಕಪ್ ಪಂದ್ಯ ಆಯೋಜನೆ ಕುರಿತು ಐಸಿಸಿ ಸಿಇಒ ಮಾತನಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಚಿನ್ನಸ್ವಾಮಿಯಲ್ಲೂ ಪಾಕ್ ಕ್ರಿಕೆಟಿಗರ ಫೋಟೋ ತೆರವು!
ಭಾರತ-ಪಾಕಿಸ್ತಾನ ನಡುವಿನ ಏಕದಿನ ವಿಶ್ವಕಪ್ ಪಂದ್ಯ ರದ್ದುಗೊಳ್ಳುವ ಯಾವುದೇ ಸೂಚನೆ ಇಲ್ಲ. ಪಂದ್ಯ ನಿಗದಿಯಾಗಿರುವ ದಿನದಂದೇ ನಡೆಯಲಿದೆ ಎಂದು ಐಸಿಸಿ ಸಿಇಒ ಡೇವಿಡ್ ರಿಚರ್ಡ್‌ಸನ್ ಸ್ಪಷ್ಟಪಡಿಸಿದ್ದಾರೆ. ಪುಲ್ವಾಮಾ ಆತ್ಮಾಹುತಿ ದಾಳಿ ಬಳಿಕ ಭಾರತದ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಸೇರಿ ಇನ್ನೂ ಅನೇಕರು ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸುವಂತೆ ಆಗ್ರಹಿಸಿದ್ದರು.
ಇದನ್ನೂ ಓದಿ: ಪುಲ್ವಾಮ ದಾಳಿ: ಪಾಕಿಸ್ತಾನ ಬಿಗ್ ಶಾಕ್ ನೀಡಿದ IMG ರಿಲಯನ್ಸ್!
ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಿಚರ್ಡ್‌ಸನ್, ‘ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ. ನಮ್ಮ ಸದಸ್ಯ ಕ್ರಿಕೆಟ್ ಸಂಸ್ಥೆಗಳಲ್ಲಿ ಆಗುತ್ತಿರುವ ಬೆಳವಣಿಗಳನ್ನು ಗಮನಿಸುತ್ತಿದ್ದೇವೆ. ಭಾರತ-ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯಕ್ಕೆ ಯಾವುದೇ ಅಡ್ಡಿಯಾಗುವ ಲಕ್ಷಣಗಳು ತೋರುತ್ತಿಲ್ಲ’ ಎಂದರು. ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಬಿಸಿಸಿಐ ಅಧಿಕಾರಿಯೊಬ್ಬರು, ‘ಸೆಮೀಸ್ ಇಲ್ಲವೇ ಫೈನಲ್‌ನಲ್ಲಿ ಪಾಕ್ ಎದುರಾದರೆ ಭಾರತ ಆಡದಿರಲು ಸಾಧ್ಯವೇ’ ಎಂದಿದ್ದಾರೆ.