ಆಕ್ಲೆಂಡ್(ಫೆ.08): ನ್ಯೂಜಿಲೆಂಡ್ ನೆಲದಲ್ಲಿ ಭಾರತ ಇದೇ ಮೊದಲ ಬಾರಿಗೆ ಟಿ20 ಪಂದ್ಯದಲ್ಲಿ ಗೆಲುವು ಸಾಧಿಸಿದೆ.  ಆಕ್ಲೆಂಡ್‌ನಲ್ಲಿ ನಡೆದ 2ನೇ ಚುಟುಕು ಪಂದ್ಯದಲ್ಲಿ ಭಾರತ 7 ವಿಕೆಟ್ ಗೆಲುವು ಸಾಧಿಸೋ ಮೂಲಕ ಈ ಸಾಧನೆ ಮಾಡಿದೆ. ಇಷ್ಟೇ ಅಲ್ಲ, ಮೊದಲ ಸೋಲಿಗೆ ಸೇಡು ತೀರಿಸಿಕೊಂಡಿರುವ ಭಾರತ, 3 ಪಂದ್ಯದ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. 

159 ರನ್ ಗುರಿ ಚೇಸ್ ಮಾಡಿದ ಟೀಂ ಇಂಡಿಯಾಗೆ ನಾಯಕ ರೋಹಿತ್ ಶರ್ಮಾಹಾಗೂ ಶಿಖರ್ ಧವನ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 79 ರನ್ ಜೊತೆಯಾಟ ನೀಡಿದರು. ಅಬ್ಬರಿಸಿದ ರೋಹಿತ್ 29 ಎಸೆತದಲ್ಲಿ 4 ಸಿಕ್ಸರ್ ಹಾಗೂ 3 ಬೌಂಡರ್ ಮೂಲಕ 50 ರನ್ ಸಿಡಿಸಿದರು.

ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಭಾರತೀಯ ಅನ್ನೋ ಹೆಗ್ಗಳಿಕೆಗೂ ಪಾತ್ರರಾದರು. ರೋಹಿತ್ ಟೆಸ್ಟ್, ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ರೋಹಿತ್ ಒಟ್ಟು 349 ಸಿಕ್ಸರ್ ಸಿಡಿಸಿದ್ದಾರೆ. ಇನ್ನು ಉತ್ತಮ ಸಾಥ್ ನೀಡಿದ ಶಿಖರ್ ಧವನಿ 30 ರನ್ ಕಾಣಿಕೆ ನೀಡಿದರು.

ಇದನ್ನೂ ಓದಿ: ಮಾಜಿ ಕ್ರಿಕೆಟಿಗನ ಚಿಕಿತ್ಸೆಗೆ ನೆರವಾದ ಕೆ.ಎಲ್.ರಾಹುಲ್!

ರಿಷಬ್ ಪಂತ್ ಹಾಗೂ ವಿಜಯ್ ಶಂಕರ್ ಜೊತೆಯಾಟ ಹೆಚ್ಚು ಹೊತ್ತು ಉಳಿಯಲಿಲ್ಲ. ವಿಜಯ್ ಶಂಕರ್ 14 ರನ್ ಸಿಡಿಸಿ ಔಟಾದರು. ಆದರೆ ರಿಷಬ್ ಪಂತ್ ಹಾಗೂ ಎಂ.ಎಸ್.ಧೋನಿ ಜೊತೆಯಾಟ ಟೀಂ ಇಂಡಿಯಾ ಗೆಲುವು ಖಚಿತಪಡಿಸಿತು. ಪಂತ್ ಅಜೇಯ 40 ರನ್ ಹಾಗೂ ಧೋನಿ ಅಜೇಯ19 ರನ್ ಸಿಡಿಸಿದರು. ಈ ಮೂಲಕ ಭಾರತ 18.5 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಇದೀಗ ಅಂತಿಮ ಪಂದ್ಯದತ್ತ ಎಲ್ಲರ ಚಿತ್ತ ನೆಟ್ಟಿದೆ. 

ಇದನ್ನೂ ಓದಿ: ಅಂತಾರಾಷ್ಟ್ರೀಯ ಟಿ20 - ಸಿಕ್ಸರ್‌ನಲ್ಲಿ ಶತಕ ಸಿಡಿಸಿದ ರೋಹಿತ್ ಶರ್ಮಾ

ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 8 ವಿಕೆಟ್ ನಷ್ಟಕ್ಕೆ 158 ರನ್ ಸಿಡಿಸಿತ್ತು. ಕಾಲಿನ್ ಡೇ ಗ್ರ್ಯಾಂಡ್‌ಹೊಮ್ಮೆ 50, ರಾಸ್ ಟೇಲರ್ 42 ರನ್ ಕಾಣಿಕೆ ನೀಡಿದ್ದರು. ಭಾರತದ ಪರ ಕ್ರುನಾಲ್ ಪಾಂಡ್ಯ 3 ವಿಕೆಟ್ ಕಬಳಿಸಿ ಮಿಂಚಿದರು.