ನವದೆಹಲಿ(ಅ.06): ಇದೇ ತಿಂಗಳು 16ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಐದು ಏಕದಿನ ಪಂದ್ಯ ಸರಣಿಯ ಮೊದಲ ಮೂರು ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ರಾಜ್ಯದ ಪ್ರತಿಭಾನ್ವಿತ ಬ್ಯಾಟ್ಸ್‌ಮನ್ ಮನೀಶ್ ಪಾಂಡೆ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಂಬಾಬ್ವೆ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದ ಮನೀಶ್ ಪಾಂಡೆಯನ್ನು ಹೊರತುಪಡಿಸಿದರೆ, ಕಿವೀಸ್ ವಿರುದ್ಧದ ಈ ಸರಣಿಗೆ ರಾಜ್ಯದ ಮಿಕ್ಕ ಯಾವ ಆಟಗಾರರೂ ಅವಕಾಶ ಪಡೆದಿಲ್ಲ.
ಎಂ.ಎಸ್.ಕೆ. ಪ್ರಸಾದ್ ನೇತೃತ್ವದ ಆಯ್ಕೆಸಮಿತಿ ಮೊಟ್ಟಮೊದಲ ಬಾರಿಗೆ ಪ್ರಕಟಿಸಿದ ಹದಿನೈದು ಮಂದಿ ಆಟಗಾರರ ಪೈಕಿ ಹರ್ಯಾಣ ಮೂಲದ ಆಫ್‌ಸ್ಪಿನ್ನರ್ ಜಯಂತ್ ಯಾದವ್ ಮಾತ್ರ ಹೊಸಮುಖವಾಗಿದ್ದರೆ, ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದಿದ್ದ ಸುರೇಶ್ ರೈನಾ ತಂಡಕ್ಕೆ ವಾಪಸಾಗಿದ್ದಾರೆ.
ಇನ್ನುಳಿದಂತೆ ಮಧ್ಯಮ ವೇಗಿ ಜಸ್ಟ್ರೀತ್ ಬುಮ್ರಾ, ಮನ್‌ದೀಪ್ ಸಿಂಗ್ ಮತ್ತು ಕೇದಾರ್ ಜಾಧವ್ ತಂಡಕ್ಕೆ ಸೇರ್ಪಡೆಗೊಂಡಿದ್ದರೆ, ಎಡಗೈ ಆಟಗಾರ ಗೌತಮ್ ಗಂಭೀರ್‌ಗೆ ಆಯ್ಕೆಸಮಿತಿ ಅವಕಾಶ ಕಲ್ಪಿಸಿಲ್ಲ.
‘‘ಆಯ್ಕೆ ಪ್ರಕ್ರಿಯೆ ನಡೆಯುವಾಗ ಗಂಭೀರ್ ಹೆಸರು ಪ್ರಸ್ತಾಪವಾಯಿತು. ಆಸ್ಪ್ರೇಲಿಯಾ ವಿರುದ್ಧದ ಸರಣಿಯಲ್ಲಿ ಆರಂಭಿಕನಾಗಿ ಭವ್ಯ ಪ್ರದರ್ಶನ ನೀಡಿದ್ದ ಮನ್‌ದೀಪ್ ಸಿಂಗ್ ಇದೇ ಹಾದಿಯಲ್ಲಿ ಇನ್ನಷ್ಟು ಅನುಭವ ಪಡೆಯಲು ಅವರಿಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಯಿತು. ಇನ್ನು ತವರಿನಲ್ಲಿ ನಡೆಯಲಿರುವ 13 ಟೆಸ್ಟ್‌ಗಳ ಹಿನ್ನೆಲೆಯಲ್ಲಿ ಅಶ್ವಿನ್, ಜಡೇಜಾ ಹಾಗೂ ಮೊಹಮದ್ ಶಮಿಗೆ ವಿಶ್ರಾಂತಿ ನೀಡಲು ನಿರ್ಧರಿಸಲಾಯಿತು’’ ಎಂದು ಪತ್ರಿಕಾಗೋಷ್ಠಿಯಲ್ಲಿ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ. ಪ್ರಸಾದ್ ತಿಳಿಸಿದರು.
ಕಿವೀಸ್ ವಿರುದ್ಧದ ಐದು ಏಕದಿನ ಪಂದ್ಯ ಸರಣಿ ಅ. 16ರಂದು ಧರ್ಮಶಾಲಾದಲ್ಲಿ ಆರಂಭವಾಗಿ, ಅ.20ರಂದು ದೆಹಲಿ, 23ರಂದು ಮೊಹಾಲಿ, 26ರಂದು ರಾಂಚಿ ಹಾಗೂ ವಿಶಾಖಪಟ್ಟಣದಲ್ಲಿ 29ರಂದು ನಡೆಯಲಿರುವ ಕೊನೆಯ ಪಂದ್ಯದೊಂದಿಗೆ ಮುಕ್ತಾಯ ಕಾಣಲಿದೆ.
ತಂಡ ಇಂತಿದೆ
ಎಂ.ಎಸ್. ಧೋನಿ (ನಾಯಕ), ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ, ಮನೀಶ್ ಪಾಂಡೆ, ಸುರೇಶ್ ರೈನಾ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಜಯಂತ್ ಯಾದವ್, ಅಮಿತ್ ಮಿಶ್ರಾ, ಜಸ್ಟ್ರೀತ್ ಬುಮ್ರಾ, ಧವಳ್ ಕುಲಕರ್ಣಿ, ಉಮೇಶ್ ಯಾದವ್, ಮನ್‌ದೀಪ್ ಸಿಂಗ್ ಮತ್ತು ಕೇದಾರ್ ಜಾಧವ್.
