ಚೆಲ್ಮ್ಸ್‌ಫೋರ್ಡ್(ಜು.26): ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಭಾರತ ಆತಿಥೇಯ ಎಸೆಕ್ಸ್ ತಂಡದ 4ನೇ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದೆ.  

ಮೊದಲ ಇನ್ನಿಂಗ್ಸ್ ಆರಂಭಿಸಿದ ಎಸೆಕ್ಸ್ ತಂಡಕ್ಕೆ ಟೀಂ ಇಂಡಿಯಾ ವೇಗಿಗಳು ಶಾಕ್ ನೀಡಿದ್ದಾರೆ. ಆರಂಭದಲ್ಲೇ ಉಮೇಶ್ ಯಾದವ್ ವಿಕೆಟ್ ಕಬಳಿಸಿ ಮಿಂಚಿದರು. ನಿಕ್ ಬ್ರೌನ್ 11ರನ್‌ಗೆ ಔಟಾದರು. ಉಮೇಶ್ ಯಾದವ್ ಬಳಿಕ ಇಶಾಂತ್ ಶರ್ಮಾ ಹಾಗೂ ಶಾರ್ದೂಲ್ ಠಾಕೂರ್ ವಿಕೆಟ್ ಕಬಳಿಸಿದರು.

ವರುಣ್ ಚೋಪ್ರಾ 16 ರನ್ ಸಿಡಿಸಿ ಔಟಾದರೆ, ನಾಯಕ ಟಾಮ್ ವೆಸ್ಟ್ಲೆ 57 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು. 68 ರನ್ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದ ಮಿಚೆಲ್ ಕೈಲ್, ಇಶಾಂತ್ ಶರ್ಮಾಗೆ ವಿಕೆಟ್ ಒಪ್ಪಿಸಿದ್ದಾರೆ. 

ಎಸೆಕ್ಸ್ ಇನ್ನಿಂಗ್ಸ್‌ಗೂ ಮೊದಲು ಮುರಳಿ ವಿಜಯ್ 53, ವಿರಾಟ್ ಕೊಹ್ಲಿ 68, ಕೆಎಲ್ ರಾಹುಲ್ 58, ದಿನೇಶ್ ಕಾರ್ತಿಕ್ 82, ಹಾರ್ದಿಕ್ ಪಾಂಡ್ಯ 51 ಹಾಗೂ ಯುವ ಬ್ಯಾಟ್ಸ್‌ಮನ್ ರಿಷಬ್ ಪಂತ್ ಅಜೇಯ 34 ರನ್ ಸಿಡಿಸಿದರು. ಈ ಮೂಲಕ ಭಾರತ 395 ರನ್‌ಗೆ ಆಲೌಟ್ ಆಯಿತು.ಇಂಗ್ಲೆಂಡ್ ಪರ ಪೌಲ್ ವಾಲ್ಟರ್ 4 ವಿಕೆಟ್ ಕಬಳಿಸಿ ಮಿಂಚಿದರು. ಮ್ಯಾಟ್ ಕೊಲೆಸ್ 2 ವಿಕೆಟ್ ಪಡೆದರು.