ಭಾರತ ಹಾಗೂ ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳು ದಿಟ್ಟ ಹೋರಾಟ ನೀಡುತ್ತಿದೆ. ಮೊದಲ ದಿನ ಭಾರತ ಮೇಲುಗೈ ಸಾಧಿಸಿದರೆ, ದ್ವಿತೀಯ ದಿನ ಇಂಗ್ಲೆಂಡ್ ಯಶಸ್ಸಿನ ನಗೆ ಬೀರಿದೆ. ಇಲ್ಲಿದೆ 2ನೇ ದಿನದಾಟದ ಹೈಲೈಟ್ಸ್.
ಓವಲ್(ಸೆ.08): ಇಂಗ್ಲೆಂಡ್ ವಿರುದ್ಧ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ 2ನೇ ದಿನ ಭಾರತ ದಿಟ್ಟ ಹೋರಾಟ ನೀಡುವಲ್ಲಿ ಹಿನ್ನಡೆ ಅನುಭವಿಸಿದೆ. ಇಂಗ್ಲೆಂಡ್ ತಂಡವನ್ನ 332 ರನ್‌ಗಳಿಗೆ ಆಲೌಟ್ ಮಾಡಿದ ಭಾರತ 2ನೇ ದಿನದಲ್ಲಿ ಮೊದಲ ಇನ್ನಿಂಗ್ಸ್ ಆರಂಭಿಸಿತು.
ಓವಲ್ ಟೆಸ್ಟ್ ಪಂದ್ಯದಲ್ಲೂ ಆರಂಭಿಕರಿಂದ ಉತ್ತಮ ಪ್ರದರ್ಶನ ಮೂಡಿ ಬರಲಿಲ್ಲ. ಶಿಖರ್ ಧವನ್ 3 ರನ್ ಸಿಡಿಸಿ ಔಟಾದರು. ಆದರೆ ಕೆಎಲ್ ರಾಹುಲ್ 37 ರನ್‌ಗಳ ಕಾಣಿಕೆ ನೀಡಿದರು.
2 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾಗೆ ಚೇತೇಶ್ವರ್ ಪೂಜಾರ ಹಾಗೂ ನಾಯಕ ವಿರಾಟ್ ಕೊಹ್ಲಿ ಆಸರೆಯಾದರು. ತಂಡಕ್ಕೆ ಆಧಾರವಾದ ಪೂಜಾರ 37 ರನ್ ಸಿಡಿಸಿ ಔಟಾದರು. ಈ ಮೂಲಕ ಭಾರತ 3ನೇ ವಿಕೆಟ್ ಕಳೆದುಕೊಂಡಿತು.
ಅಜಿಂಕ್ಯ ರಹಾನೆ ಶೂನ್ಯ ಸುತ್ತಿದರೆ, ನಾಯಕ ವಿರಾಟ್ ಕೊಹ್ಲಿ 49 ರನ್ ಸಿಡಿಸಿ ಔಟಾದರು. ಈ ಮೂಲಕ ಕೇವಲ 1 ರನ್‌ನಿಂದ ಅರ್ಧಶತಕ ವಂಚಿತರಾದರು. ಇನ್ನು ರಿಷಬ್ ಪಂತ್ 5ನೇ ಪಂದ್ಯದಲ್ಲೂ ಎಚ್ಚೆತ್ತುಕೊಳ್ಳಲಿಲ್ಲ. ಪಂತ್ 5 ರನ್ ಸಿಡಿಸಿ ಔಟಾದರು.
ದಿನದಾಟದ ಅಂತ್ಯದಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 174 ರನ್ ಸಿಡಿಸಿದೆ. ಹನುಮಾ ವಿಹಾರಿ ಅಜೇಯ 25 ಹಾಗೂ ರವೀಂದ್ರ ಜಡೇಜಾ ಅಜೇಯ 8 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 158 ರನ್‌ಗಳ ಹಿನ್ನಡೆಯಲ್ಲಿದೆ.
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 332ರನ್‌ಗಳಿಗೆ ಆಲೌಟ್ ಆಯಿತು. ಅಲಿಸ್ಟೈರ್ ಕುಕ್ 71, ಮೊಯಿನ್ ಆಲಿ 50, ಜೋಸ್ ಬಟ್ಲರ್ 89 ಹಾಗೂ ಸ್ಟುವರ್ಟ್ ಬ್ರಾಡ್ 39 ರನ್ ಕಾಣಿಕೆ ನೀಡಿದ್ದರು.
