ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯ ಭಾರಿ ಕುತೂಹಲ ಮೂಡಿಸಿದೆ. 3ನೇ ಪಂದ್ಯ ಗೆದ್ದು ಸರಣಿಯಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಿರುವ ಟೀಂ ಇಂಡಿಯಾ ಇದೀಗ ಸರಣಿ ಸಮಬಲ ಮಾಡಲು ಹಾತೊರೆಯುತ್ತಿದೆ.
ಸೌತಾಂಪ್ಟನ್(ಆ.30): ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯ ಇಂದಿನಿಂದ(ಆ.30) ಆರಂಭಗೊಳ್ಳಲಿದ್ದು, ಭಾರತದ ಪಾಲಿಗಿದು ಅತ್ಯಂತ ಮಹತ್ವದಾಗಿದೆ. ಸರಣಿ ಸಮಬಲಕ್ಕಾಗಿ ಈ ಪಂದ್ಯದಲ್ಲಿ ಗೆಲುವು ಸಾಧಿಸಬೇಕಾದ ಅನಿವಾರ್ಯತೆ ಕೊಹ್ಲಿ ಪಡೆಗಿದೆ. ಮೊದಲ ಟೆಸ್ಟ್‌ನಲ್ಲಿ 31 ರನ್‌ಗಳ ಸೋಲುಂಡಿದ್ದ ಭಾರತ, 2ನೇ ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಹಾಗೂ 159 ರನ್‌ಗಳಿಂದ ಮಣಿದಿತ್ತು. ಇದಾದ ಬಳಿಕ ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ 3ನೇ ಟೆಸ್ಟ್‌ನಲ್ಲಿ ಪುಟಿದೆದ್ದ ಭಾರತ 203 ರನ್‌ಗಳ ಭರ್ಜರಿ ಜಯ ಸಾಧಿಸಿತ್ತು.
ಇದರೊಂದಿಗೆ 5 ಪಂದ್ಯಗಳ ಸರಣಿಯನ್ನು 2-1 ರಿಂದ ಜೀವಂತವಾಗಿರಿಸಿಕೊಂಡಿದ್ದು, ಆಟಗಾರರು ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದ್ದಾರೆ. 1936 ರಲ್ಲಿ ಡಾನ್ ಬ್ರಾಡ್ಮನ್ ನೇತೃತ್ವದ ಆಸ್ಟ್ರೇಲಿಯಾ ಸಹ 5 ಪಂದ್ಯಗಳ ಸರಣಿಯಲ್ಲಿ 0-2 ಹಿನ್ನಡೆ ಸಾಧಿಸಿತ್ತು. ಇದಾದ ಬಳಿಕ ಸತತ 3 ಟೆಸ್ಟ್‌ಗಳನ್ನು ಗೆದ್ದು, ಸರಣಿಯನ್ನು ವಶಪಡಿಸಿ ಕೊಂಡಿತ್ತು. ಇದಾದ ಬಳಿಕ ಇದುವರೆಗೂ ಯಾರು ಸಹ ಈ ರೀತಿ ಇಂಗ್ಲೆಂಡ್ ವಿರುದ್ಧ ಸರಣಿ ಜಯಿಸಿಲ್ಲ. ಇದೀಗ ವಿರಾಟ್ ಪಡೆಗೆ ಈ ಅವಕಾಶ ಲಭ್ಯವಾಗಿದೆ. ಈ ಅವಕಾಶವನ್ನ ಸದುಪಯೋಗಪಡಿಸಿಕೊಳ್ಳಲು ಇಂದಿನಿಂದ ಪಂದ್ಯ ಗೆಲ್ಲಲೇಬೇಕಿದೆ.
ಬೂಮ್ರಾ ಬದಲಿಗೆ ಯಾದವ್?: ವೇಗಿ ಬೂಮ್ರಾ ಬದಲಿಗೆ ಉಮೇಶ್ ಯಾದವ್ ಕಣಕ್ಕಿಳಿಸುವ ಸಾಧ್ಯತೆಯಿದ. 3ನೇ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಂಡದಲ್ಲಿ ಸ್ಥಾನ ಖಚಿತ ಪಡಿಸಿಕೊಂಡಿದ್ದಾರೆ. ಇಶಾಂತ್ ಶರ್ಮಾ ಹಾಗೂ ಮೊಹಮ್ಮದ್ ಶಮಿ ಜತೆ ಯಾದವ್ ಚೆಂಡು ಹಂಚಿಕೊಳ್ಳುವುದು ಬಹುತೇಕ ನಿಶ್ಚಿತವಾಗಿದೆ.
ಅಶ್ವಿನ್ ಅಲಭ್ಯ?: ತಂಡದ ಪ್ರಮುಖ ಸ್ಪಿನ್ ಅಸ್ತ್ರ ರವಿಚಂದ್ರನ್ ಅಶ್ವಿನ್ ಗಾಯದ ಸಮಸ್ಯೆಗೆ ತುತ್ತಾಗಿದ್ದು, 4ನೇ ಪಂದ್ಯಕ್ಕೆ ಲಭ್ಯರಾಗುವುದು ಅಸಾಧ್ಯವಾಗಿದೆ. ತಂಡ ಸಹ ಅಶ್ವಿನ್ ಲಭ್ಯತೆ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಒಂದೊಮ್ಮೆ ಅಶ್ವಿನ್ ಅಲಭ್ಯರಾದರೆ, ಜಡೇಜಾ ತಂಡವನ್ನು ಕೂಡಿಕೊಳ್ಳಲಿದ್ದಾರೆ.
ಆಂಗ್ಲನ್ನರಿಗೆ ತಲೆನೋವಾಗಿರುವ ಕೊಹ್ಲಿ: ಆತಿಥೇಯ ಇಂಗ್ಲೆಂಡ್ ವೇಗದ ಪಡೆ ಅತ್ಯಂತ ಬಲಿಷ್ಠವಾಗಿದ್ದು, ಕಳೆದ ಮೂರೂ ಪಂದ್ಯಗಳಲ್ಲೂ ಇದು ಸಾಬೀತಾಗಿದೆ. ಆದರೆ, ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್‌ನಲ್ಲಿದ್ದು ಆಂಗ್ಲನ್ನರ ಪಾಲಿಗೆ ಬಿಸಿತುಪ್ಪವಾಗಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲೂಕೊಹ್ಲಿ ಭಾರೀ ಬದಲಾವಣೆ ಮಾಡುವ ಸಾದ್ಯತೆಗಳಿದ್ದು, ಕರುಣ್ ನಾಯರ್ ಅಥವಾ ಪೃಥ್ವಿ ಶಾಗೆ ಅವಕಾಶ ಸಿಕ್ಕರೂ ಅಚ್ಚರಿಯಿಲ್ಲ.
ಅತ್ತ 3ನೇ ಟೆಸ್ಟ್‌ನಲ್ಲಿ ಉಂಟಾದ ಆಘಾತದಿಂದ ಹೊರಬರಲು ಇಂಗ್ಲೆಂಡ್ ಕಸರತ್ತು, ನಡೆಸುತ್ತಿದ್ದು ಈ ಪಂದ್ಯದೊಂದಿಗೆ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಜಯಿಸುವ ಲೆಕ್ಕಾಚಾರದಲ್ಲಿದೆ. ಇನ್ನು ಇಂಗ್ಲೆಂಡ್ ಜಾನಿ ಬೇರ್ ಸ್ಟೋವ್‌ರನ್ನು ಉಳಿಸಿಕೊಂಡಿದ್ದು, ವೋಕ್ಸ್ ಅಲಭ್ಯರಾಗಿದ್ದಾರೆ. ವೋಕ್ಸ್ ಬದಲಿಗೆ ಸ್ಯಾಮ್ ಕುರ್ರನ್‌ಗೆ ಸ್ಥಾನ ಲಭಿಸಿದೆ. ಜೊತೆಗೆ ಇಬ್ಬರು ಸ್ಪಿನ್ನರ್‌ಗಳಾದ ಆದಿಲ್ ರಶೀದ್ ಹಾಗೂ ಮೊಯಿನ್ ಆಲಿಗೆ ಸ್ಥಾನ ನೀಡಲಾಗಿದೆ.
