ಮೊದಲ ಏಕದಿನದಲ್ಲಿ ಗೆಲುವಿನ ಸಿಹಿ ಕಂಡಿದ್ದ ಟೀಂ ಇಂಡಿಯಾ ದ್ವಿತೀಯ ಪಂದ್ಯದಲ್ಲಿ ಮುಗ್ಗರಿಸಿದೆ. ಲಾರ್ಡ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟೀಂ ಇಂಡಿಯಾ ಎಡವಿದ್ದೆಲ್ಲಿ?ಸೋಲಿಗೆ ಕಾರಣವಾಯಿತಾ ಸಣ್ಣ ತಪ್ಪು? ಇಲ್ಲಿದೆ ವಿವರ.

ಲಂಡನ್(ಜು.14): ಏಕದಿನದಲ್ಲಿ ಶುಭಾರಂಭ ಮಾಡಿದ್ದ ಟೀಂ ಇಂಡಿಯಾ ಇದೀಗ ದ್ವಿತೀಯ ಪಂದ್ಯದಲ್ಲಿ ಸೋಲಿನ ಕಹಿ ಅನುಭವಿಸಿದೆ. ಲಾರ್ಡ್ಸ್ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ 323ರನ್ ಟಾರ್ಗೆಟ್ ಬೆನ್ನಟ್ಟಿದ ಭಾರತ ರನ್ 236ರನ್‌ಗಳಿಗೆ ಆಲೌಟ್ ಆಗೋ ಮೂಲಕ ಸೋಲೊಪ್ಪಿಕೊಂಡಿತು.

ಡಿಸೆಂಟ್ ಆರಂಭ ಪಡೆದುಕೊಂಡಿದ್ದ ಭಾರತ 49 ರನ್ ಗಳಿಸುವಷ್ಟರಲ್ಲೇ ಮೊದಲ ವಿಕೆಟ್ ಕಳೆದುಕೊಂಡಿತು. ರೋಹಿತ್ ಶರ್ಮಾ 15 ರನ್‌ಗಳಿಸಿ ನಿರ್ಗಮಿಸಿದರು. ಶಿಖರ್ ಧವನ್ 36 ರನ್‌ಗಳ ಕಾಣಿಕೆ ನೀಡಿದರು.

ಭರ್ಜರಿ ಫಾರ್ಮ್‌ನಲ್ಲಿದ್ದ ಕೆಎಲ್ ರಾಹುಲ್ ಶೂನ್ಯಕ್ಕೆ ಔಟಾದರು. ಇದರೊಂದಿಗೆ ಟೀಂ ಇಂಡಿಯಾ 60 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು. ವಿರಾಟ್ ಕೊಹ್ಲಿ ಹಾಗೂ ಸುರೇಶ್ ರೈನಾ ಜೊತೆಯಾಟದಿಂದ ಟೀಂ ಇಂಡಿಯಾ ಚೇತರಿಸಿಕೊಂಡಿತು. ಆದರೆ ಕೊಹ್ಲಿ 45 ರನ್ ಸಿಡಿಸಿ ಔಟಾದರೆ, ರೈನಾ 46 ರನ್ ಗಳಿಸಿ ನಿರ್ಗಮಿಸಿದರು. ಈ ಮೂಲಕ ಟೀಂ ಇಂಡಿಯಾದ ಗೆಲುವಿನ ಹಾದಿ ಮತ್ತಷ್ಟು ಕಠಿಣವಾಗಿದೆ.

ಎಂ ಎಸ್ ಧೋನಿ ಹಾಗೂ ಹಾರ್ದಿಕ್ ಪಾಂಡ್ಯ ಜೊತೆಯಾಟ ಅಭಿಮಾನಿಗಳಲ್ಲಿ ಗೆಲುವಿನ ಆಸೆ ಚಿಗುರೊಡೆಸಿತು. ಆದರೆ ಪಾಂಡ್ಯ 22ರನ್ ಸಿಡಿಸಿ ಔಟಾದರು. ಎಂ ಎಸ್ ಧೋನಿ 37 ರನ್ ಸಿಡಿಸಿ ಔಟಾದರು. ಆದರೆ ಧೋನಿ 33ರನ್ ಪೂರೈಸುತ್ತಿದ್ದಂತೆ, ಏಕದಿನ ಕ್ರಿಕೆಟ್‌ನಲ್ಲಿ 10ಸಾವಿರ ರನ್ ಪೂರೈಸಿದ ಭಾರತದ 4ನೇ ಹಾಗೂ ವಿಶ್ವದ 12ನೇ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾದರು.

ಉಮೇಶ್ ಯಾದಲ್, ಕುಲದೀಪ್ ಯಾದವ್, ಸಿದ್ಧಾರ್ಥ್ ಕೌಲ್, ಯಜುವೇಂದ್ರ ಚೆಹಾಲ್ ಅಬ್ಬರಿಸಲಿಲ್ಲ. ಹೀಗಾಗಿ ಭಾರತ ನಿಗಧಿತ 50 ಓವರ್‌ಗಳಲ್ಲಿ 236 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಇಂಗ್ಲೆಂಡ್ 86ರನ್ ಗೆಲುವು ಸಾಧಿಸಿತು. 2ನೇ ಪಂದ್ಯದ ಗೆಲವಿನೊಂದಿಗೆ ಸರಣಿ 1-1 ಅಂತರದಲ್ಲಿ ಸಮಭಲಗೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 322 ರನ್ ಸಿಡಿಸಿತು. ಜೋ ರೂಟ್ ಭರ್ಜರಿ ಅಜೇಯ 113 ರನ್ ಸಿಡಿಸೋ ಮೂಲಕ ಇಂಗ್ಲೆಂಡ್ ತಂಡ ಬೃಹತ್ ಮೊತ್ತ ಪೇರಿಸುವಲ್ಲಿ ನೆರವಾದರು.