ರೋಹಿತ್ ಶರ್ಮಾ ಶತಕ ವ್ಯರ್ಥ -ಏಕದಿನದಲ್ಲಿ ಭಾರತಕ್ಕೆ ಸೋಲಿನ ಶಾಕ್!
ಆಸ್ಟ್ರೇಲಿಯಾ ವಿರುದ್ದದ ಟಿ20 ಸರಣಿ ಸಮಬಲದ ಬಳಿಕ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾ ಇದೀಗ ಏಕದಿನದಲ್ಲಿ ಮುಗ್ಗರಿಸಿದೆ. ಸಿಡ್ನಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿದರೂ ಟೀಂ ಇಂಡಿಯಾ ಗೆಲುವು ಸಾಧಸಲಿಲ್ಲ. ಇಲ್ಲಿದೆ ಪಂದ್ಯದ ಹೈಲೈಟ್ಸ್.
ಸಿಡ್ನಿ(ಜ.12): ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆಲುವಿನಿಂದ ಹಿಗ್ಗಿದ್ದ ಟೀಂ ಇಂಡಿಯಾಗೆ ಇದೀಗ ಸೋಲಿನ ಶಾಕ್ ಎದುರಾಗಿದೆ. 2019ರ ಹೊಸ ವರ್ಷದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಮುಗ್ಗರಿಸಿದೆ. ಆತಿಥೇಯ ಆಸ್ಟ್ರೇಲಿಯಾ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 34 ರನ್‌ಗಳ ಸೋಲು ಅನುಭವಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಆಸ್ಟ್ರೇಲಿಯಾ ನಿರೀಕ್ಷಿತ ಆರಂಭ ಪಡೆಯಲಿಲ್ಲ. ನಾಯಕ ಆ್ಯರೋನ್ ಫಿಂಚ್ 6 ರನ್ ಸಿಡಿಸಿ ಔಟಾದರು. ಆದರೆ ಅಲೆಕ್ಸ್ ಕ್ಯಾರಿ ಹಾಗೂ ಉಸ್ಮಾನ್ ಖವಾಜ ಜೊತೆಯಾಟದಿಂದ ಚೇತರಿಸಿಕೊಂಡಿತು. ಅಲೆಕ್ಸ್ 24 ರನ್ ಸಿಡಿಸಿ ಔಟಾದರು. ಶಾನ್ ಮಾರ್ಶ್ ಹಾಗೂ ಖವಾಜ ದಿಟ್ಟ ಹೋರಾಟ ನೀಡಿದರು.
ಮಾರ್ಶ್ 54 ರನ್ ಸಿಡಿಸಿ ಔಟಾದರೆ, ಖವಾಜ 59 ರನ್ ಕಾಣಿಕೆ ನೀಡಿತು. ಪೀಟರ್ ಹ್ಯಾಂಡ್ಸ್‌ಕಾಂಬ್ ಅಬ್ಬರಿಂದ ಆಸ್ಟ್ರೇಲಿಯಾ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು. 61 ಎಸೆತದದಲ್ಲಿ 73 ರನ್ ಚಚ್ಚಿದರು. ಮಾರ್ಕಸ್ ಸ್ಟೊಯಿನ್ಸ್ ಅಜೇಯ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ 11 ರನ್ ಸಿಡಿಸಿದರು. ಈ ಮೂಲಕ ಆಸ್ಟ್ರೇಲಿಯಾ 5 ವಿಕೆಟ್ ನಷ್ಟಕ್ಕೆ 288 ರನ್ ಸಿಡಿಸಿತು.
289 ರನ್ ಬೃಹತ್ ಟಾರ್ಗೆಟ್ ಪಡೆದ ಟೀಂ ಇಂಡಿಯಾ 4 ರನ್‌ಗಳಿಸುವಷ್ಟರಲ್ಲೇ 3 ವಿಕೆಟ್ ಕಳೆದುಕೊಂಡಿತು. ಶಿಖರ್ ಧವನ್ ಡಕೌಟ್, ನಾಯಕ ವಿರಾಟ್ ಕೊಹ್ಲಿ 3 ಹಾಗೂ ಅಂಬಾಟಿ ರಾಯುಡು ಶೂನ್ಯಕ್ಕೆ ಔಟಾದರು. ರೋಹಿತ್ ಶರ್ಮಾ ಹಾಗೂ ಎಂ.ಎಸ್.ಧೋನಿ 4ನೇ ವಿಕೆಟ್‌ಗೆ ನೀಡಿದ ಜೊತೆಯಾದಿಂದ ಟೀಂ ಇಂಡಿಯಾದ ಗೆಲುವಿನ ಆಸೆ ಚಿಗುರಿತು.
ಧೋನಿ ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ ಧೋನಿ 51 ರನ್ ಸಿಡಿಸಿ ಔಟಾದರು. ಏಕಾಂಗಿ ಹೋರಾಟ ನೀಡಿದ ರೋಹಿತ್ ಆಕರ್ಷಕ ಶತಕ ಸಿಡಿಸಿದರು. ಸೆಂಚುರಿ ಬಳಿಕವೂ ಗೆಲುವಿಗಾಗಿ ರೋಹಿತ್ ಹೋರಾಟ ಮುಂದುವರಿಸಿದರು. ಆದರೆ ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ.
ದಿನೇಶ್ ಕಾರ್ತಿಕ್ 12, ರವೀಂದ್ರ ಜಡೇಜಾ 8 ರನ್ ಸಿಡಿಸಿ ಔಟಾದರು. ಬಿರುಸಿನ ಹೊಡೆತಕ್ಕೆ ಮುಂದಾದ ರೋಹಿತ್ 133 ರನ್ ಸಿಡಿಸಿ ಔಟಾದರು. ಕುಲ್ದೀಪ್ ಯಾದವ್ 3 ಹಾಗೂ ಮೊಹಮ್ಮದ್ ಶಮಿ 1 ರನ್ ಸಿಡಿಸಿ ಔಟಾದರು. ಭುವನೇಶ್ವರ್ ಕುಮಾರ್ ಅಜೇಯ 29 ರನ್ ಸಿಡಿಸಿದರು. ಭಾರತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 254 ರನ್ ಸಿಡಿಸಿತು. ಈ ಮೂಲಕ 34 ರನ್ ಸೋಲು ಕಂಡಿತು. 3 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಮುನ್ನಡೆ ಸಾಧಿಸಿದೆ.