Asianet Suvarna News Asianet Suvarna News

ಸೌದಿಗೆ ಸೋತ ಬಳಿಕ ಭಾರತಕ್ಕೆ ಯೆಮೆನ್ ಸವಾಲು; ಕೋಚ್ ಏನ್ ಹೇಳ್ತಾರೆ?

ಭಾರತ ಎಎಫ್'ಸಿ ಚಾಂಪಿಯನ್'ಶಿಪ್'ಗೆ ಅರ್ಹತೆ ಪಡೆಯಬೇಕಾದರೆ, ತನ್ನ ಮುಂದಿನ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಸೌದಿ ವಿರುದ್ಧ 5 ಗೋಲುಗಳ ಅಂತರದಿಂದ ಸೋಲುಂಡಿರುವ ಭಾರತ ಈಗ ತನ್ನ ಮುಂದಿನ ಪಂದ್ಯಗಳನ್ನು ಗೆಲ್ಲುವುದಷ್ಟೇ ಅಲ್ಲ, ಹೆಚ್ಚೆಚ್ಚು ಗೋಲುಗಳ ಅಂತರದ ಗೆಲುವು ದಕ್ಕಿಸಿಕೊಳ್ಳಬೇಕಿದೆ.

india to face yemen in its second match of u 19 championship qualifiers

ದಮ್ಮಮ್, ಸೌದಿ ಅರೇಬಿಯಾ(ನ. 05): ಎಎಫ್'ಸಿ ಅಂಡರ್-19 ಚಾಂಪಿಯನ್'ಶಿಪ್'ನ ಅರ್ಹತಾ ಟೂರ್ನಿಯಲ್ಲಿ ಹೀನಾಯ ಆರಂಭ ಕಂಡ ಭಾರತ ಫುಟ್ಬಾಲ್ ತಂಡವು ನಾಳೆ ಸೋಮವಾರ ಯೆಮೆನ್ ತಂಡವನ್ನು ಎದುರಿಸಲಿದೆ. ತನ್ನ ಎರಡನೇ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸವನ್ನು ಭಾರತೀಯ ತಂಡದ ಕೋಚ್ ಲೂಯಿಸ್ ನಾರ್ಟಾನ್ ಡೀ ಮ್ಯಾಟೋಸ್ ವ್ಯಕ್ತಪಡಿಸಿದ್ದಾರೆ.

ನಿನ್ನೆ ನಡೆದ ಡಿ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಭಾರತದ ಕಿರಿಯರು 0-5 ಗೋಲುಗಳಿಂದ ಸೌದಿ ಅರೇಬಿಯಾಗೆ ಶರಣಾಗಿದ್ದರು. ಈ ಪಂದ್ಯದ ಯಾವ ಹಂತದಲ್ಲೂ ಸೌದಿ ಹುಡುಗರಿಗೆ ಭಾರತೀಯರು ಸಾಟಿಯಾಗಲಿಲ್ಲ. ಸೌದಿ ಫಾರ್ವರ್ಡ್'ಗಳ ದಾಳಿಗೆ ಭಾರತದ ಪ್ರಬಲ ರಕ್ಷಣಾ ಪಡೆ ಛಿದ್ರಛಿದ್ರವಾಯಿತು. ಮೊದಲಾರ್ಧದಲ್ಲಿ ಸೌದಿ ಒಂದು ಗೋಲು ಮಾತ್ರ ಗಳಿಸಲು ಶಕ್ಯವಾದರೂ ದ್ವಿತೀಯಾರ್ಧದಲ್ಲಿ ಗೋಲುಗಳ ಸುರಿಮಳೆಗೈದಿತು.

ಸೌದಿ ಅರೇಬಿಯಾ ಭಾರತಕ್ಕಿಂತ ತೀರಾ ಮೇಲ್ಮಟ್ಟದಲ್ಲಿ ಆಡಿತು. ಎಲ್ಲಾ ವಿಭಾಗದಲ್ಲೂ ಭಾರತವನ್ನು ಹಿಂದಿಕ್ಕಿತು. ದೈಹಿಕವಾಗಿ ಸದೃಢರಾಗಿದ್ದ ಸೌದಿ ಹುಡುಗರ ಮುಂದೆ ಭಾರತೀಯರ ಆಟ ಸಾಗಲಿಲ್ಲ ಎಂದು ಭಾರತದ ಕೋಚ್ ಅಭಿಪ್ರಾಯಪಟ್ಟಿದ್ದಾರೆ. ಆದರೆ, ಭಾರತದ ತಂಡದಲ್ಲಿ ಪ್ರತಿಭೆ ಇದ್ದು, ಈಗ ಬೆಳೆಯುತ್ತಿರುವ ಪಡೆ ಇದಾಗಿದೆ. ಸೌದಿ ಎದುರು ಭಾರತ ಗೆಲ್ಲುವ ಸಾಧ್ಯತೆ ಇರಲೇ ಇಲ್ಲ. ಇಂಥ ಎದುರಾಳಿಗಳೊಂದಿಗೆ ಪಂದ್ಯಗಳನ್ನಾಡಿದಾಗ ಸಿಗುವ ಅನುಭವವು ಆಟಗಾರರಿಗೆ ಅಮೂಲ್ಯ ಎಂದು ಕೋಚ್ ಹೇಳಿದ್ದಾರೆ.

ಭಾರತದ ಮುಂದಿನ ಎದುರಾಳಿ ಯೆಮೆನ್ ತಂಡದ ಬಗ್ಗೆ ಮಾತನಾಡಿದ ಕೋಚ್ ಲೂಯಿಸ್ ಡೀ ಮ್ಯಾಟೋಸ್, ಯೆಮೆನ್ ತಂಡದ ಆಟಗಾರರು ಕ್ಷಿಪ್ರ ಪ್ರತಿದಾಳಿ ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ, ಯೆಮೆನ್ ಮತ್ತು ಭಾರತ ಒಂದೇ ಮಟ್ಟದಲ್ಲಿರುವ ಹಿನ್ನೆಲೆಯಲ್ಲಿ ತಂಡಕ್ಕೆ ಗೆಲ್ಲುವ ಚಾನ್ಸ್ ಇದೆ ಎಂದು ಆಶಿಸಿದ್ದಾರೆ. ಭಾರತವಿರುವ ಡಿ ಗುಂಪಿನಲ್ಲಿ ಸೌದಿ ಅರೇಬಿಯಾ, ಯೆಮೆನ್ ಮತ್ತು ತುರ್ಕ್'ಮೆನಿಸ್ತಾನ್ ತಂಡಗಳೂ ಇವೆ. ಗ್ರೂಪ್'ನ ಅಗ್ರಸ್ಥಾನಿಗಳು 2018ರ ಚಾಂಪಿಯನ್'ಶಿಪ್'ಗೆ ನೇರವಾಗಿ ಅರ್ಹತೆ ಪಡೆಯಲಿದ್ದಾರೆ. ಎರಡನೇ ಸ್ಥಾನ ಪಡೆದ 6 ತಂಡಗಳು ಪೈಕಿ 5 ತಂಡಗಳು ಕ್ವಾಲಿಫೈ ಆಗಲಿವೆ.

ಈ ಹಿನ್ನೆಲೆಯಲ್ಲಿ ಭಾರತ ಎಎಫ್'ಸಿ ಚಾಂಪಿಯನ್'ಶಿಪ್'ಗೆ ಅರ್ಹತೆ ಪಡೆಯಬೇಕಾದರೆ, ತನ್ನ ಮುಂದಿನ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಸೌದಿ ವಿರುದ್ಧ 5 ಗೋಲುಗಳ ಅಂತರದಿಂದ ಸೋಲುಂಡಿರುವ ಭಾರತ ಈಗ ತನ್ನ ಮುಂದಿನ ಪಂದ್ಯಗಳನ್ನು ಗೆಲ್ಲುವುದಷ್ಟೇ ಅಲ್ಲ, ಹೆಚ್ಚೆಚ್ಚು ಗೋಲುಗಳ ಅಂತರದ ಗೆಲುವು ದಕ್ಕಿಸಿಕೊಳ್ಳಬೇಕಿದೆ.

ಅರ್ಹತಾ ಟೂರ್ನಿಯ ಡಿ ಗುಂಪಿನ ಎಲ್ಲಾ ಪಂದ್ಯಗಳೂ ಸೌದಿ ಅರೇಬಿಯಾದ ದಮ್ಮಮ್ ನಗರದಲ್ಲೇ ನಡೆಯುತ್ತಿವೆ. ನ. 6 ಮತ್ತು ನ. 8ರಂದು ಭಾರತವು ಯೆಮೆನ್ ಮತ್ತು ತುರ್ಕ್'ಮೆನಿಸ್ತಾನ್ ತಂಡಗಳನ್ನು ಎದುರುಗೊಳ್ಳಲಿದೆ.

Follow Us:
Download App:
  • android
  • ios