ಮೆಲ್ಬರ್ನ್‌[ಜ.17]: ಸೀಮಿತ ಓವರ್‌ ಕ್ರಿಕೆಟ್‌ನತ್ತ ಹೆಚ್ಚು ಗಮನ ಹರಿಸುವುದು ತಪ್ಪಲ್ಲ, ಆದರೆ ಟೆಸ್ಟ್‌ ಕ್ರಿಕೆಟ್‌ನತ್ತಲೂ ಒಲವು ನೀಡಿ ಎಂದು ಯುವ ಕ್ರಿಕೆಟಿಗರಿಗೆ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಕಿವಿ ಮಾತು ಹೇಳಿದ್ದಾರೆ. 

‘ಸೀಮಿತ ಓವರ್‌ ಕ್ರಿಕೆಟ್‌ನತ್ತ ಮಾತ್ರ ಗಮನ ಹರಿಸುವ ಆಟಗಾರರಿಗೆ ಟೆಸ್ಟ್‌ ಕ್ರಿಕೆಟ್‌ ಆಡುವ ವೇಳೆ ಮಾನಸಿಕ ಸಮಸ್ಯೆಗಳು ಎದುರಾಗಲಿವೆ. ಟೆಸ್ಟ್‌ ಮಾದರಿ ಅತ್ಯುನ್ನತ. ಅದರಲ್ಲಿ ಯಶಸ್ಸು ಗಳಿಸಿದಾಗ ಸಿಗುವ ಸಂತಸವನ್ನು ಬಣ್ಣಿಸಲು ಸಾಧ್ಯವಿಲ್ಲ’ ಎಂದು ಕೊಹ್ಲಿ ಹೇಳಿದ್ದಾರೆ. 

ಇದೇ ವೇಳೆ ತಂಡದ ಇತ್ತೀಚಿನ ಯಶಸ್ಸಿನ ಬಗ್ಗೆ ಮಾತನಾಡಿರುವ ವಿರಾಟ್‌, ‘ಟೆಸ್ಟ್‌ ಮಾದರಿಯಲ್ಲಿ ಭಾರತ ತಂಡ ವಿಶ್ವದ ಶ್ರೇಷ್ಠವೆನಿಸಬೇಕು ಎನ್ನುವ ಗುರಿ ನಮ್ಮದು. ಮುಂಬರುವ ದಿನಗಳಲ್ಲಿ ಮತ್ತಷ್ಟು ಕಠಿಣ ಪ್ರಯತ್ನ ನಡೆಸಲಿದ್ದೇವೆ. ಪ್ರತಿ ಸರಣಿಯನ್ನು ಗೆಲ್ಲಲು ತಂಡ ಪ್ರಯತ್ನಿಸಲಿದೆ’ ಎಂದು ವಿರಾಟ್‌ ಹೇಳಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು 2-1 ಅಂತರದಲ್ಲಿ ಜಯಿಸಿ ಚಾರಿತ್ರಿಕ ಸಾಧನೆ ಮಾಡಿತ್ತು. ಈ ಮೂಲಕ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಜಯಿಸಿದ ಮೊದಲ ಏಷ್ಯಾದ ತಂಡ ಎನ್ನುವ ಕೀರ್ತಿಗೂ ವಿರಾಟ್ ಪಡೆ ಪಾತ್ರವಾಗಿತ್ತು.