ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡದ ಆಯ್ಕೆ ಶನಿವಾರ ನಡೆಯಲಿದ್ದು, ಹೊಸ ನಾಯಕ ಯಾರಾಗುತ್ತಾರೆ ಎಂಬ ಕುತೂಹಲ ಮನೆಮಾಡಿದೆ. ಶುಭಮನ್ ಗಿಲ್ ನಾಯಕರಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ರಿಷಭ್ ಪಂತ್ ಉಪನಾಯಕರಾಗಬಹುದು. 

ಮುಂಬೈ: ಜೂನ್ 20ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ದ 5 ಪಂದ್ಯಗಳ ಟೆಸ್ಟ್‌ ಸರಣಿಗೆ ಶನಿವಾರ ಭಾರತ ತಂಡ ಪ್ರಕಟಗೊಳ್ಳುವ ನಿರೀಕ್ಷೆಯಿದೆ. ರೋಹಿತ್ ನಿವೃತ್ತಿ ಬಳಿಕ ತಂಡದ ನಾಯಕತ್ವ ಹೊಣೆ ಯಾರಿಗೆ ನೀಡಲಾಗುತ್ತದೆ ಎಂಬ ಕುತೂಹಲವಿದ್ದು, ಇದಕ್ಕೆ ಶನಿವಾರ ಮಧ್ಯಾಹ್ನ ತೆರೆ ಬೀಳಲಿದೆ.

ನಾಯಕತ್ವ ರೇಸ್‌ನಲ್ಲಿ ಅನುಭವಿಗಳಾದ ಜಸ್ಪ್ರೀತ್‌ ಬುಮ್ರಾ, ಕೆ.ಎಲ್.ರಾಹುಲ್ ಇದ್ದರೂ, ಭವಿಷ್ಯದ ದೃಷ್ಟಿಯಿಂದ ಶುಭಮನ್ ಗಿಲ್ ರನ್ನು ನಾಯಕನನ್ನಾಗಿ ನೇಮಿಸಲು ಆಯ್ಕೆ ಸಮಿತಿ ಉತ್ಸುಕವಾಗಿದೆ ಎಂದು ವರದಿಯಾಗಿದೆ.

ಇದೇ ವೇಳೆ, ಐಪಿಎಲ್‌ನಲ್ಲಿ ಕಳಪೆ ಆಟವಾಡುತ್ತಿದ್ದರೂ ರಿಷಭ್ ಪಂತ್‌ರನ್ನು ಉಪನಾಯಕನ್ನಾಗಿ ನೇಮಿಸುವ ಸಾಧ್ಯತೆ ಯಿದೆ ಎಂದು ತಿಳಿದುಬಂದಿದೆ. ಇನ್ನು, ಕರುಣ್ ನಾಯರ್, ಶ್ರೇಯಸ್ ಅಯ್ಯರ್ ಕಮ್‌ಬ್ಯಾಕ್ ನಿರೀಕ್ಷೆಯಲ್ಲಿದ್ದು, ಸರ್ಫರಾಜ್ ಖಾನ್ ಕೂಡಾ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಹೆಚ್ಚುವರಿ ಆರಂಭಿಕವಾಗಿ ಸಾಯಿ ಸುದರ್ಶನ್ ಆಯ್ಕೆಯಾಗಬಹುದು.

4ನೇ ಕ್ರಮಾಂಕದಲ್ಲಿ ಇನ್ನು ಗಿಲ್ ಕಣಕ್ಕೆ?

ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ ಸುಮಾರು 33 ವರ್ಷಗಳ ಕಾಲ ಭಾರತದ ಪರ 4ನೇ ಕ್ರಮಾಂಕದಲ್ಲಿ ಆಡಿದ್ದರು. ವಿರಾಟ್ ಕೊಹ್ಲಿ ನಿವೃತ್ತಿಯಿಂದಾಗಿ 4ನೇ ಕ್ರಮಾಂಕ ಖಾಲಿ ಉಳಿದಿದೆ. ಈ ಸ್ಥಾನವನ್ನು ಇನ್ನು ಶುಭ್‌ಮನ್ ಗಿಲ್ ತುಂಬಲಿದ್ದಾರೆ ಎನ್ನಲಾಗುತ್ತಿದೆ. ಹೀಗಾದರೆ ಆರಂಭಿಕರಾಗಿ ರಾಹುಲ್ -ಜೈಸ್ವಾಲ್ ಆಡಬೇಕಾಗುತ್ತದೆ.

ಕಾಡುತ್ತಾ ಅನುಭವಿಗಳ ಕೊರತೆ: ಭಾರತ ಕ್ರಿಕೆಟ್ ತಂಡವು ಇದೇ ಮೊದಲ ಬಾರಿಗೆ ರೋಹಿತ್ ಶರ್ಮಾ, ರವಿಚಂದ್ರನ್ ಅಶ್ವಿನ್ ಹಾಗೂ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದೆ. ಮುಂಬರುವ ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಟೂರ್ನಿಯ ನಿಟ್ಟಿನಲ್ಲಿ ಈ ಇಂಗ್ಲೆಂಡ್ ಪ್ರವಾಸ ಭಾರತ ಕ್ರಿಕೆಟ್ ತಂಡಕ್ಕೆ ಸಾಕಷ್ಟು ಮಹತ್ವದ್ದೆನಿಸಿಕೊಂಡಿದೆ. ಹೀಗಾಗಿ ಕೊಹ್ಲಿ, ಅಶ್ವಿನ್ ಹಾಗೂ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಯಾವ ರೀತಿಯ ಪ್ರದರ್ಶನ ನೀಡಲಿದೆ ಎನ್ನುವ ಕುತೂಹಲ ಜೋರಾಗಿದೆ.

ಭಾರತ ತಂಡವು ತವರಿನಲ್ಲಿ ನ್ಯೂಜಿಲೆಂಡ್ ಎದುರಿ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಬಾರಿಗೆ ವೈಟ್‌ವಾಷ್ ಅನುಭವಿಸಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು.ಇದಾದ ಬಳಿಕ ಆಸ್ಟ್ರೇಲಿಯಾ ಪ್ರವಾಸದಲ್ಲಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಸೋಲುವ ಮೂಲಕ ಸತತ ಮೂರನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರುವ ಅವಕಾಶವನ್ನು ಕೊನೆಯ ಕ್ಷಣದಲ್ಲಿ ಕೈಚೆಲ್ಲಿತ್ತು. ಹೀಗಾಗಿ ಇದೀಗ ಟೀಂ ಇಂಡಿಯಾ ಹೆಡ್‌ಕೋಚ್ ಗೌತಮ್ ಗಂಭೀರ್, ಮುಂಬರುವ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿ ಗಮನದಲ್ಲಿಟ್ಟುಕೊಂಡು ಹೊಸ ತಂಡ ಕಟ್ಟಲು ರೆಡಿಯಾಗಿದ್ದಾರೆ.

ವೇಗಿ ಮೊಹಮ್ಮದ್ ಶಮಿಗೆ ತಂಡದಲ್ಲಿಲ್ಲ ಸ್ಥಾನ?

2023ರ ಏಕದಿನ ವಿಶ್ವಕಪ್ ಬಳಿಕ ಒಂದು ವರ್ಷಕ್ಕೂ ಹೆಚ್ಚು ಸಮಯ ಗಾಯದಿಂದಾಗಿ ಭಾರತ ತಂಡದಿಂದ ಹೊರಗುಳಿದಿದ್ದ ಪ್ರಮುಖ ವೇಗಿ ಮೊಹಮ್ಮದ್ ಶಮಿ ಇಂಗ್ಲೆಂಡ್ ಸರಣಿಗೆ ಆಯ್ಕೆಯಾಗುವ ಸಾಧ್ಯತೆ ಕಡಿಮೆ ಎಂದು ವರದಿಯಾಗಿದೆ. ಗಾಯದಿಂದ ಚೇತರಿಸಿಕೊಂಡರೂ ಅವರಿಂದ ದೀರ್ಘ ಸ್ಟೈಲ್ ಅಸಾಧ್ಯ ಎಂದ ಬಿಸಿಸಿಐ ವೈದ್ಯಕೀಯ ತಂಡ ವರದಿ ನೀಡಿದೆ ಎನ್ನಲಾಗಿದೆ. 18ನೇ ಆವೃತ್ತಿಯ ಐಪಿಎಲ್‌ನಲ್ಲೂ ಶಮಿ ಪರಿಣಾಮಕಾರಿ ದಾಳಿ ನಡೆಸಲು ವಿಫಲವಾಗಿದ್ದರು. ಹೀಗಾಗಿ ಸರಣಿಗೆ ಅವರ ಬದಲು ಆಕಾಶ್ ದೀಪ್, ಪ್ರಸಿದ್ ಕೃಷ್ಣ, ಅರ್ಶ್‌ದೀಪ್ ಸಿಂಗ್ ಅವಕಾಶ ನಿರೀಕ್ಷೆಯಲ್ಲಿದ್ದಾರೆ.

ಈಗಾಗಲೇ ಅನುಭವಿ ಕ್ರಿಕೆಟಿಗರಾದ ಕೊಹ್ಲಿ, ರೋಹಿತ್ ಹಾಗೂ ಅಶ್ವಿನ್ ಟೆಸ್ಟ್‌ ಮಾದರಿಗೆ ವಿದಾಯ ಘೋಷಿಸಿದ್ದು, ಇದೀಗ ಒಂದು ವೇಳೆ ಮೊಹಮ್ಮದ್ ಶಮಿ ಕೂಡಾ ಟೆಸ್ಟ್ ಸರಣಿಗೆ ಅಲಭ್ಯರಾದರೇ, ಭಾರತ ತಂಡವು ಇಂಗ್ಲೆಂಡ್ ಪ್ರವಾಸದಲ್ಲಿ ಅಗ್ನಿಪರೀಕ್ಷೆಎದುರಿಸುವ ಸಾಧ್ಯತೆ ದಟ್ಟವಾಗಿದೆ.