ನವದೆಹಲಿ[ಸೆ.12]: ತವರಿನಲ್ಲಿ ಮುಂದಿನ ತಿಂಗಳಿಂದ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಸೆ.12 (ಗುರುವಾರ) ಆಯ್ಕೆ ಮಾಡಲಾಗುವುದು ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಆರಂಭ ಪಡೆದಿರುವ ಟೀಂ ಇಂಡಿಯಾ, ಆಫ್ರಿಕಾ ವಿರುದ್ಧದ ಸರಣಿ ಯಲ್ಲಿ ಭರ್ಜರಿ ಪ್ರದರ್ಶನದ ವಿಶ್ವಾಸದಲ್ಲಿದೆ. ಅ.2 ರಿಂದ ದ.ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಆರಂಭವಾಗಲಿದೆ. ಎಂಎಸ್‌ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಗುರುವಾರ ಸಭೆ ಸೇರಲಿದ್ದು, ಇದೇ ವೇಳೆ ಭಾರತ ತಂಡದಲ್ಲಿನ ನ್ಯೂನ್ಯತೆಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಯಿದೆ. ಹಾಗೆ ದ.ಆಫ್ರಿಕಾ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡದ ಆಯ್ಕೆಯೂ ನಡೆಯಲಿದೆ. 

ತಂಡ ಪ್ರಕಟಿಸುವ ಮುನ್ನ ಅಗ್ರ ಕ್ರಮಾಂಕದಲ್ಲಿ ಸತತ ವೈಫಲ್ಯ ಕಾಣುತ್ತಿರುವ ಬಗ್ಗೆ ಆಯ್ಕೆ ಸಮಿತಿ ಪರಿಹಾರ ಕಂಡುಕೊಳ್ಳುವುದರ ಬಗ್ಗೆ ಚಿಂತಿಸುವ ಸಾಧ್ಯತೆಯಿದೆ. ಅಲ್ಲದೇ ಅಚ್ಚರಿ ಎಂಬಂತೆ ದೇಸಿ ಆಟಗಾರರಿಗೆ ಮಣೆ ಹಾಕುವ ಸಾಧ್ಯತೆ ಕೂಡಾ ಇದೆ. ಕರ್ನಾಟಕದ ಕೆ.ಎಲ್. ರಾಹುಲ್ ಮಾತ್ರ ಒತ್ತಡದಲ್ಲಿರುವುದಂತು ಸತ್ಯ. ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಬ್ಯಾಟಿಂಗ್ ಲಯದ ಬಗ್ಗೆ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಈಗಾಗಲೇ ಕಳವಳ ವ್ಯಕ್ತಪಡಿಸಿದ್ದಾರೆ.

ರೋಹಿತ್‌ ಓಪನರ್ ಆಗೋದು ಪಕ್ಕಾ..! ಯಾಕಂದ್ರೆ..?

ಒಂದು ಮೂಲದ ಪ್ರಕಾರ ರಾಹುಲ್ ಬದ ಲಿಗೆ ರೋಹಿತ್ ಶರ್ಮಾ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಆರಂಭಿಕನಾಗಿ ರಾಹುಲ್ ನಿರಂತರ ವೈಫಲ್ಯ ಕಂಡಿದ್ದಾರೆ. ವಿಂಡೀಸ್ ಸರಣಿಯಲ್ಲಿ ರಾಹುಲ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಹೀಗಾಗಿ ಮತ್ತೊಬ್ಬ ಆರಂಭಿಕ ಕರ್ನಾಟಕದ ಮಯಾಂಕ್ ಅಗರ್‌ವಾಲ್ ಜೊತೆ ಯಲ್ಲಿ ರೋಹಿತ್ ಆರಂಭಿಕನಾಗಿ ಕಣಕ್ಕಿಳಿಸುವ ಯೋಚನೆಯಲ್ಲಿ ಆಯ್ಕೆ ಸಮಿತಿ ಇದೆ ಎಂದು ಹೇಳಲಾಗುತ್ತಿದೆ. ಕೆಲ ಮಾಜಿ ಕ್ರಿಕೆಟಿಗರು ಮಯಾಂಕ್ ಜೊತೆಯಲ್ಲಿ ರೋಹಿತ್‌ಗೆ ಅವಕಾಶ ಸಿಗಲಿ ಎಂಬ ವಾದ ಮಂಡಿಸುತ್ತಿದ್ದಾರೆ ಎಂದು ವರದಿ ಮಾಡಲಾಗಿದೆ. ಕೆ.ಎಲ್. ರಾಹುಲ್ ಕೂಡ ನಿಜಕ್ಕೂ ಅದ್ಭುತ ಬ್ಯಾಟ್ಸ್‌ಮನ್, ಪ್ರತಿಭಾವಂತ ಆಟಗಾರರಾಗಿದ್ದಾರೆ. ಈಗ ರಾಹುಲ್‌ಗೆ ಕಷ್ಟದ ದಿನ ಎದುರಾಗಿದೆ. ರಾಹುಲ್ ಸದ್ಯ ಫಾರ್ಮ್ ಕಳೆದುಕೊಂಡಿದ್ದಾರೆ. ರೋಹಿತ್ ಶರ್ಮಾ ಅವರನ್ನು ಒಂದು ಆಯ್ಕೆಯಾಗಿ ಪರಿಗಣಿಸಲಾಗುವುದು ಎಂದು ಎಂಎಸ್‌ಕೆ ಹೇಳಿದ್ದಾರೆ. 

ಸೀಮಿತ ಓವರ್‌ಗಳ ಸರಣಿಯಲ್ಲಿ ರೋಹಿತ್ ಪ್ರಭಾವಿ ಬ್ಯಾಟ್ಸ್‌ಮನ್, ಆದರೆ ಟೆಸ್ಟ್‌ನಲ್ಲಿ ಅವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಹೊರಬಂದಿಲ್ಲ. ಮುಂಬೈನ ಪೃಥ್ವಿ ಶಾ ಸದ್ಯ ನಿಷೇಧ ಎದುರಿಸುತ್ತಿದ್ದಾರೆ. ಉಳಿದಂತೆ ದುಲೀಪ್ ಟ್ರೋಫಿ ಸೇರಿ ದಂತೆ ಕೆಲ ವರ್ಷಗಳಲ್ಲಿ ದೇಸಿ ಕ್ರಿಕೆಟ್‌ನಲ್ಲಿ ಆರಂಭಿಕ ರಾಗಿ ಮಿಂಚಿರುವ ಪ್ರಿಯಾಂಕ್ ಪಾಂಚಾಲ್, ಅಭಿಮನ್ಯು ಈಶ್ವರನ್, ಶುಭ್‌ಮನ್ ಗಿಲ್ ಅವರತ್ತ ಕೂಡ ಆಯ್ಕೆ ಸಮಿತಿ ಕಣ್ಣು ನೆಟ್ಟಿದೆ. ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಲ್ಲಿ ಆರಂಭಿಕರಾಗಿ ಆಡಿದ ಅನುಭವ ಹೊಂದಿಲ್ಲ. ಆದರೂ ರೋಹಿತ್‌ರನ್ನು ದ.ಆಫ್ರಿಕಾ ಟೆಸ್ಟ್ ಸರಣಿಗೆ ಆರಂಭಿಕರಾಗಿ ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಎಂಎಸ್‌ಕೆ ಹೇಳಿದ್ದಾರೆ. 

ಆ್ಯಷಸ್ ಟೆಸ್ಟ್: ಅಂತಿಮ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡ ಪ್ರಕಟ!

ಆರಂಭಿಕರ ರೇಸ್‌ನಲ್ಲಿ ರೋಹಿತ್ ರೊಂದಿಗೆ ಪ್ರಿಯಾಂಕ್, ಅಭಿಮನ್ಯು ಈಶ್ವರನ್ ಕೂಡಾ ಇದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ವಿಂಡೀಸ್ ವಿರು ದ್ಧದ ಟೆಸ್ಟ್ ಸರಣಿಯಲ್ಲಿ ಆಡಿದ್ದ ಬಹುತೇಕ ಆಟಗಾ ರರನ್ನು ಉಳಿಸಿಕೊಳ್ಳುವ ಇಚ್ಛೆ ಆಯ್ಕೆ ಸಮಿತಿಯದ್ದಾಗಿದೆ. 6ನೇ ಕ್ರಮಾಂಕದಲ್ಲಿ ಹನುಮ ವಿಹಾರಿ, ಅಜಿಂಕ್ಯ ರಹಾನೆ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ. ಇನ್ನೂ ಬೌಲರ್‌ಗಳ ಅದ್ಭುತ ಪ್ರದರ್ಶನದಿಂದಲೇ ಭಾರತ, ವಿಂಡೀಸ್ ಸರಣಿಯಲ್ಲಿ 2-0 ಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು.

ರಾಹುಲ್‌ಗೆ ಸಿಗುತ್ತಾ ಚಾನ್ಸ್? 
ಕರ್ನಾಟಕದ ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್‌ಗೆ ದ.ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವಕಾಶ ಸಿಗುತ್ತಾ ಎನ್ನುವುದನ್ನು ಕಾದು ನೋಡಬೇಕಾದ ಪರಿಸ್ಥಿತಿ ಬಂದಿದೆ. ಸಿಕ್ಕ ಅವಕಾಶಗಳನ್ನು ರಾಹುಲ್ ಸರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಈ ಕಾರಣದಿಂದ ರಾಹುಲ್ ಬದಲು ಆರಂಭಿಕನ ರೇಸ್‌ನಲ್ಲಿ ರೋಹಿತ್ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಆದರೆ ರಾಹುಲ್‌ಗೆ ಮತ್ತಷ್ಟು ಅವಕಾಶ ನೀಡುವ ಯೋಚನೆಯಲ್ಲಿ ಆಯ್ಕೆ ಸಮಿತಿ ಇದ್ದರೆ ಭಾರತ ಟೆಸ್ಟ್ ತಂಡ ದಲ್ಲಿ ಸ್ಥಾನ ಗಿಟ್ಟಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ