"

ಬೆಂಗಳೂರು[ಸೆ.11]: ಟೀಂ ಇಂಡಿಯಾ ಸೀಮಿತ ಓವರ್ ತಂಡದ ಉಪನಾಯಕ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್’ನಲ್ಲಿ ಆರಂಭಿಕನಾಗಿ ಭಡ್ತಿ ಪಡೆಯುವುದು ಬಹುತೇಕ ಪಕ್ಕಾ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಕೆ.ಎಲ್ ರಾಹುಲ್ ಅವರನ್ನು ಕೈಬಿಟ್ಟು, ರೋಹಿತ್ ಶರ್ಮಾ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.

ಕೊಹ್ಲಿ-ರೋಹಿತ್ ನಡುವೆ ಭಿನ್ನಾಭಿಪ್ರಾಯವಿರಬಹುದು, ಆದ್ರೆ...?

ರೋಹಿತ್ ಶರ್ಮಾ ಆರಂಭಿಕನನ್ನಾಗಿ ಪರಿಗಣಿಸಲು ಕಾರಣವೇನಿರಬಹುದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

ಏಕ​ದಿನ ಹಾಗೂ ಟಿ20 ಮಾದ​ರಿಯಲ್ಲಿ ಅದ್ಭುತ ಲಯ​ದ​ಲ್ಲಿ​ರುವ ರೋಹಿತ್‌ ಶರ್ಮಾ, ಟೆಸ್ಟ್‌ ಕ್ರಿಕೆಟ್‌ನಲ್ಲಿ ನಿರೀ​ಕ್ಷಿತ ಯಶಸ್ಸು ಸಾಧಿ​ಸಿಲ್ಲ. ರೋಹಿತ್‌ ಈ ವರೆಗೂ 27 ಟೆಸ್ಟ್‌ಗಳನ್ನು ಆಡಿದ್ದು ಒಮ್ಮೆಯೂ ಆರಂಭಿ​ಕ​ನಾಗಿ ಕಣ​ಕ್ಕಿ​ಳಿ​ದಿಲ್ಲ. ಆದರೆ ಪ್ರಥಮ ದರ್ಜೆ ಪಂದ್ಯ​ಗ​ಳಲ್ಲಿ ಮುಂಬೈ ಪರ ಆರಂಭಿ​ಕ​ನಾಗಿ ಆಡಿದ ಅನು​ಭವ ಹೊಂದಿ​ದ್ದಾರೆ. 

ರಾಹುಲ್‌ ಬದಲು ರೋಹಿತ್‌ ಟೆಸ್ಟ್‌ ಓಪ​ನರ್‌?

2007ರಲ್ಲೇ ಭಾರತ ತಂಡಕ್ಕೆ ಪದಾ​ರ್ಪಣೆ ಮಾಡಿ​ದ​ರೂ, ರೋಹಿತ್‌ ಶರ್ಮಾ ಯಶಸ್ಸು ಕಂಡಿದ್ದು 2013ರ ಚಾಂಪಿ​ಯನ್ಸ್‌ ಟ್ರೋಫಿಯಲ್ಲಿ ಆರಂಭಿ​ಕ​ನಾಗಿ ಆಡಿದ ಬಳಿಕ. ವೀರೇಂದ್ರ ಸೆಹ್ವಾಗ್‌ ನಿವೃತ್ತಿ ಬಳಿಕ ಟೆಸ್ಟ್‌ನಲ್ಲಿ ಭಾರ​ತಕ್ಕೆ ಸ್ಫೋಟಕ ಆರಂಭಿ​ಕ ಬ್ಯಾಟ್ಸ್‌ಮನ್‌ ಸಿಕ್ಕಿಲ್ಲ. ರೋಹಿತ್‌, ಏಕ​ದಿನ ಹಾಗೂ ಟಿ20ಯಲ್ಲಿ ಸ್ಫೋಟಕ ಬ್ಯಾಟಿಂಗ್‌ಗೆ ಹೆಸ​ರು​ವಾ​ಸಿ​ಯಾ​ಗಿ​ದ್ದಾರೆ. ಟೆಸ್ಟ್‌ನಲ್ಲೂ ಅವ​ರನ್ನು ಆರಂಭಿ​ಕ​ನ​ನ್ನಾಗಿ ಆಡಿ​ಸುವ ಪ್ರಯೋಗ ಕೈಹಿ​ಡಿ​ಯ​ಬ​ಹುದು ಎನ್ನು​ವುದು ಬಿಸಿ​ಸಿಐ ಲೆಕ್ಕಾ​ಚಾರ.

ಬಿಸಿ​ಸಿಐ ಮುಂದಿರುವ ಆಯ್ಕೆಗಳು?

ಮುರಳಿ ವಿಜಯ್‌, ಶಿಖರ್‌ ಧವನ್‌ರನ್ನು ಟೆಸ್ಟ್‌ ತಂಡ​ದಿಂದ ಹೊರ​ಗಿಟ್ಟಿರುವ ಬಿಸಿ​ಸಿಐ, ವಿವಿಧ ಆಯ್ಕೆಗಳನ್ನು ಪ್ರಯ​ತ್ನಿ​ಸು​ತ್ತಿದೆ. ಕರ್ನಾ​ಟ​ಕದ ಮಯಾಂಕ್‌ ಅಗರ್‌ವಾಲ್‌ ಸದ್ಯ ತಂಡದ ಆರಂಭಿ​ಕ​ನಾಗಿದ್ದಾರೆ. ಅ.2ರಿಂದ ಆರಂಭ​ಗೊ​ಳ್ಳ​ಲಿ​ರುವ ದಕ್ಷಿಣ ಆಫ್ರಿಕಾ ವಿರು​ದ್ಧದ ಟೆಸ್ಟ್‌ ಸರ​ಣಿ​ಯಲ್ಲಿ ಮಯಾಂಕ್‌ ಜತೆ ರೋಹಿತ್‌ ಇನ್ನಿಂಗ್ಸ್‌ ಆರಂಭಿ​ಸುವ ನಿರೀಕ್ಷೆ ಇದೆ. ಇದ​ಲ್ಲದೆ ಬಿಸಿ​ಸಿಐ ಮುಂದೆ ಮತ್ತೆ ಕೆಲ ಆಯ್ಕೆಗಳಿವೆ. 

ಇತ್ತೀ​ಚಿನ ದುಲೀಪ್‌ ಟ್ರೋಫಿ ಸೇರಿ​ದಂತೆ ದೇಸಿ ಕ್ರಿಕೆಟ್‌ನಲ್ಲಿ ಕಳೆದ ಕೆಲ ವರ್ಷಗಳಿಂದ ಗುಜ​ರಾತ್‌ನ ಪ್ರಿಯಾಂಕ್‌ ಪಾಂಚಾಲ್‌, ಬಂಗಾ​ಳದ ಅಭಿ​ಮ​ನ್ಯು ಈಶ್ವ​ರನ್‌, ಪಂಜಾಬ್‌ನ ಶುಭ್‌ಮನ್‌ ಗಿಲ್‌ ಅತ್ಯು​ತ್ತಮ ಪ್ರದ​ರ್ಶನ ನೀಡುತ್ತಿ​ದ್ದಾರೆ. ಮುಂಬೈನ ಪೃಥ್ವಿ ಶಾ ನಿಷೇಧ ಎದು​ರಿ​ಸು​ತ್ತಿದ್ದು, ನ.15ರ ಬಳಿಕ ಆಯ್ಕೆಗೆ ಲಭ್ಯ​ರಾ​ಗ​ಲಿ​ದ್ದಾರೆ.

‘ರಾಹುಲ್‌ ಪ್ರತಿ​ಭಾ​ನ್ವಿತ ಆಟ​ಗಾರ. ಅದ​ರಲ್ಲಿ ಯಾವುದೇ ಅನು​ಮಾ​ನ​ವಿಲ್ಲ. ಆದರೆ ಅವರ ಸದ್ಯದ ಬ್ಯಾಟಿಂಗ್‌ ಲಯದ ಬಗ್ಗೆ ಕಳ​ವಳ ಶುರು​ವಾ​ಗಿದೆ. ಹೀಗಾಗಿ ರೋಹಿತ್‌ ಶರ್ಮಾರನ್ನು ಆರಂಭಿ​ಕ​ನ​ನ್ನಾಗಿ ಪರಿ​ಗ​ಣಿ​ಸಲು ಚಿಂತಿ​ಸಿ​ದ್ದೇವೆ‘

- ಎಂ.ಎಸ್‌.ಕೆ.ಪ್ರ​ಸಾದ್‌, ಪ್ರಧಾನ ಆಯ್ಕೆಗಾರ