25 ಅಂಕಗಳಿಸಿರುವ ದಕ್ಷಿಣ ಕೊರಿಯಾದ ಈ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದ್ದು, ಭಾರತದೊಂದಿಗೆ ಈ ಗುಂಪಿನಿಂದ ಸೆಮಿಫೈನಲ್‌ ಪ್ರವೇಶಿಸಿದ ಮತ್ತೊಂದು ತಂಡವಾಗಿದೆ.
ಅಹ್ಮದಾಬಾದ್: ಪ್ರಮುಖ ಆಟಗಾರರಾದ ಪ್ರದೀಪ್ ನರ್ವಾಲ್ ಅವರ 13 ಅಂಕ ಹಾಗೂ ಅಜಯ್ ಠಾಕೂರ್ ಅವರ 11 ಅಂಕಗಳ ನೆರವಿನಿಂದಾಗಿ, ಮಂಗಳವಾರ ನಡೆದ ವಿಶ್ವ ಕಬಡ್ಡಿ ಪಂದ್ಯಾವಳಿಯ ತನ್ನ ಮಹತ್ವದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 69-18 ಅಂಕಗಳ ಅಂತರದಲ್ಲಿ ಮಣಿಸಿದ ಭಾರತ, ಪಂದ್ಯಾವಳಿಯ ಸೆಮಿಫೈನಲ್'ಗೆ ಕಾಲಿಟ್ಟಿದೆ.
ಅಲ್ಲಿನ ಟ್ರಾನ್ಸ್'ಸ್ಟೇಡಿಯಾದಲ್ಲಿ ನಡೆದ ಪಂದ್ಯದಲ್ಲಿ ನೆರೆದಿದ್ದ ಪ್ರೇಕ್ಷಕರಲ್ಲಿ ಹುರುಪು ತುಂಬಿಸುವಂಥ ಪ್ರದರ್ಶನ ನೀಡಿದ ಭಾರತ, ಈ ಗೆಲವಿನೊಂದಿಗೆ ಟೂರ್ನಿಯ ಅಂಕಪಟ್ಟಿಯಲ್ಲಿ ತಾನಿರುವ ಎ ಗುಂಪಿನಲ್ಲಿ ದ್ವಿತೀಯ ಸ್ಥಾನಕ್ಕೇರಿದೆ. ಈವರೆಗೆ ಐದು ಪಂದ್ಯಗಳನ್ನಾಡಿರುವ ಅದು, 4 ಗೆಲವು, 1 ಸೋಲು ಕಂಡು ಒಟ್ಟಾರೆ 21 ಅಂಕಗಳನ್ನು ಪೇರಿಸಿದೆ. 25 ಅಂಕಗಳಿಸಿರುವ ದಕ್ಷಿಣ ಕೊರಿಯಾದ ಈ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದ್ದು, ಭಾರತದೊಂದಿಗೆ ಈ ಗುಂಪಿನಿಂದ ಸೆಮಿಫೈನಲ್ ಪ್ರವೇಶಿಸಿದ ಮತ್ತೊಂದು ತಂಡವಾಗಿದೆ.
ಪಂದ್ಯದ ಆರಂಭದಲ್ಲೇ ಭಾರತೀಯ ಮೂಲದ ಸೋಮಶೇಖರ್ ಕಾಲಿಯಾ ಅವರು, ಇಂಗ್ಲೆಂಡ್ ತಂಡಕ್ಕೆ 2 ಅಂಕಗಳನ್ನು ತಂದಿತ್ತರು. ಆದರೆ, ಮೂರನೇ ನಿಮಿಷದಲ್ಲಿ ಭಾರತ ಪಾಳಯದ ಸಂದೀಪ್ ನರ್ವಾಲ್ ಒಂದು ಸೂಪರ್ ರೈಡ್ ನಡೆಸಿ ಭಾರತಕ್ಕೆ ಒಮ್ಮೆಲೇ ಐದು ತಂದುಕೊಟ್ಟರು. ಅಂತೆಯೇ, ಆರನೇ ನಿಮಿಷದಲ್ಲಿ ಎದುರಾಳಿಗಳನ್ನು ಆಲೌಟ್ ಮಾಡಿದ ಭಾರತ, ತನ್ನ ಅಂಕಗಳ ಅಂತರವನ್ನು 12-3ಕ್ಕೆ ಹೆಚ್ಚಿಸಿಕೊಂಡಿತು.
ಈ ಹಂತದಲ್ಲಿ ಭಾರತಕ್ಕೆ ನೆರವಾದ ರೈಡರ್ ಪ್ರದೀಪ್ ನರ್ವಾಲ್, ಮತ್ತೆರಡು ಅಂಕಗಳನ್ನು ತರುವ ಮೂಲಕ ಈ ಅಂತರವನ್ನು 14-3ಕ್ಕೆ ಹೆಚ್ಚಿಸಿದರು. ಅಲ್ಲಿ ಮಿಂಚಿದ ಸಂದೀಪ್ ನರ್ವಾಲ್ ಕೇವಲ 13 ನಿಮಿಷಗಳಲ್ಲಿ ಭಾರತಕ್ಕೆ 13 ಅಂಕಗಳನ್ನು ತಂದುಕೊಟ್ಟರು. 16ನೇ ನಿಮಿಷದಲ್ಲಿ ಭಾರತ, ಇಂಗ್ಲೆಂಡ್ ತಂಡವನ್ನು ಮತ್ತೊಮ್ಮೆ ಆಲೌಟ್ ಮಾಡುವ ಮೂಲಕ ತನ್ನ ಅಂಕಗಳ ಅಂತರವನ್ನು 35-5ಕ್ಕೆ ಹೆಚ್ಚಿಸಿಕೊಂಡಿತು. ಇನ್ನು, 20ನೇ ನಿಮಿಷದಲ್ಲಿ ಇಂಗ್ಲೆಂಡ್ ತಂಡವನ್ನು ಮತ್ತೆ ಆಲೌಟ್ ಮಾಡಿದ ಭಾರತ 45-6 ಅಂಕಗಳ ಅಂತರ ಹೆಚ್ಚಿಸಿಕೊಳ್ಳುವ ಮೂಲಕ ಪಂದ್ಯದಲ್ಲಿ ಸಂಪೂರ್ಣ ಪ್ರಭುತ್ವ ಸಾಧಿಸಿತು. ಹೀಗೆ, ಸಾಗಿದ ಭಾರತದ ರೋಚಕ ಪ್ರದರ್ಶನದ ಮುಂದೆ ಮಂಕಾದ ಇಂಗ್ಲೆಂಡ್, ಕೊನೆಗೂ ಸೋಲೊಪ್ಪಿಕೊಂಡಿತು.
ಕೀನ್ಯಾ ಕನಸು ಜೀವಂತ: ದಿನದ ಮತ್ತೊಂದು ಪಂದ್ಯದಲ್ಲಿ ಅಮೆರಿಕ ತಂಡದ ವಿರುದ್ಧ 74-19 ಅಂಕಗಳ ಭಾರೀ ಅಂತರದ ಗೆಲುವು ಸಾಧಿಸಿದ ಕೀನ್ಯಾ, ತನ್ನ ಸೆಮಿಫೈನಲ್ ಕನಸನ್ನು ಜೀವಂತವಾಗಿಟ್ಟಿತು.
(ಕೃಪೆ: ಕನ್ನಡಪ್ರಭ)
