ನವದೆಹಲಿ(ಅ.01): ಭಾರತ ಹಾಗೂ ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿ ಆಯೋಜನೆ ಕುರಿತು ಕಾನೂನು ಹೋರಾಟ ಇದೀಗ ಐಸಿಸಿ ಮೆಟ್ಟಿಲೇರಿದೆ.  ವಿಚಾರಣೆ ಕೈಗೆತ್ತಿಕೊಂಡಿರುವ ಐಸಿಸಿ, ಶೀಘ್ರದಲ್ಲೇ ತೀರ್ಪು ಪ್ರಕಟಿಸಲಿದೆ.

ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಸರಣಿ ಆಯೋಜನೆಗೆ 2013ರಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಗಡಿ ವಿವಾದ ಹಾಗೂ ಇತರ ಕಾರಣಗಳಿಂದ ಪಾಕಿಸ್ತಾನ ಜೊತೆಗಿನ ಭಾರತದ ಸಂಬಂಧ ಹಳಸಿದೆ. ಹೀಗಾಗಿ ಕ್ರಿಕೆಟ್ ಸರಣಿ ಆಯೋಜನೆಯಾಗಲೇ ಇಲ್ಲ. ಇದರಿಂದ ಕುಪಿತಗೊಂಡ ಪಾಕಿಸ್ತಾನ, ಕಾನೂನು ಹೋರಾಟ ನಡೆಸುತ್ತಿದೆ. 

ಕ್ರಿಕೆಟ್ ಆಯೋಜನೆ ರದ್ದಾಗಿರೋ ಕಾರಣ ಬಿಸಿಸಿಐ 512 ಕೋಟಿ ಪರಿಹಾರ ನೀಡಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ಸಂಸ್ಥೆ ಇದೀಗ ಐಸಿಸಿ ಮೆಟ್ಟಿಲೇರಿದೆ. ಇದಕ್ಕೆ ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಪ್ರತಿಕ್ರಿಯೆ ನೀಡಿದ್ದಾರೆ. ಬಿಸಿಸಿಐ ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಒಂದು ಪೈಸೆಯೂ ನೀಡಬೇಕಿಲ್ಲ ಎಂದಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ನಡುವಿನ ಸಮಸ್ಯೆಗೆ ಐಸಿಸಿ ಹೇಗೆ ತೀರ್ಪು ನೀಡಲು ಸಾಧ್ಯ. ಯಾವುದೇ ದೇಶದ ಮೇಲೆ ಐಸಿಸಿ ಸರಣಿ ಆಯೋಜಿಸಿ ಎಂದು ಒತ್ತಡ ಹೇರಲು ಸಾಧ್ಯವಿಲ್ಲ. ಇಂಡೋ-ಪಾಕ್ ಸರಣಿ ಆಯೋಜನೆಗೆ ಹಲವು ಅಡೆತಡೆಗಳಿವೆ ಎಂದು ಠಾಕೂರ್ ಹೇಳಿದ್ದಾರೆ.