90 ಎಸೆತಗಳಲ್ಲಿ ವೃತ್ತಿ ಜೀವನದ ಮೂರನೇ ಶತಕ ಸಿಡಿಸಿದ ಕೌರ್, ಆನಂತರ ಮತ್ತಷ್ಟು ಆಕ್ರಮಣಕಾರಿಯಾದರು. ಕೇವಲ 115 ಎಸೆತಗಳಲ್ಲಿ 171 ರನ್ ಬಾರಿಸಿ ಅಜೇಯರಾಗುಳಿದರು.

ಡರ್ಬಿ(ಜು.20): ಹರ್ಮನ್'ಪ್ರೀತ್ ಕೌರ್ ಸ್ಫೋಟಕ ಅಜೇಯ ಶತಕದ(171*) ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧ ಐಸಿಸಿ ಮಹಿಳಾ ಏಕದಿನ ವಿಶ್ವಕಪ್'ನ 2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಬೃಹತ್ ಮೊತ್ತ ಕಲೆಹಾಕಿದೆ.

ತುಂತುರು ಮಳೆಯಿಂದಾಗಿ ಮೂರು ಗಂಟೆ ತಡವಾಗಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಮಿಥಾಲಿ ರಾಜ್ ಬ್ಯಾಟಿಂಗ್ ಆಯ್ದುಕೊಂಡರು. ಮೊದಲ ಓವರ್'ನಲ್ಲೇ ಸ್ಮೃತಿ ಮಂದಾನ ವಿಕೆಟ್ ಕಳೆದುಕೊಂಡ ವನಿತೆಯರ ಟೀಂ ಇಂಡಿಯಾ, 35 ರನ್'ಗಳಾಗುವಷ್ಟರಲ್ಲಿ ಮತ್ತೋರ್ವ ಆರಂಭಿಕ ಆಟಗಾರ್ತಿ ಪೂನಮ್ ರಾವತ್ ವಿಕೆಟ್ ಕಳೆದುಕೊಂಡು ಆಘಾತವೆದುರಿಸಿತು.

ಮಿಥಾಲಿ-ಕೌರ್ ಜತೆಯಾಟ:

ಆನಂತರ ಮೂರನೇ ವಿಕೆಟ್'ಗೆ ಜತೆಯಾದ ಮಿಥಾಲಿ ರಾಜ್ ಹಾಗೂ ಹರ್ಮನ್ ಪ್ರೀತ್ ಕೌರ್ ತಂಡವನ್ನು ಸಂಕಷ್ಟದಿಂದ ಮೇಲೆತ್ತಿದರು. ಮಂದಗತಿಯಲ್ಲಿ ಈ ಜೋಡಿ ಬ್ಯಾಟ್ ಬೀಸಿದರೂ 100 ಗಳಾಗುವವರೆಗೆ ವಿಕೆಟ್ ಉರುಳದಂತೆ ನೋಡಿಕೊಂಡಿತು. ನಾಯಕಿ ಮಿಥಾಲಿ ರಾಜ್ 61 ಎಸೆತಗಳಲ್ಲಿ 36 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಮಿಂಚು ಹರಿಸಿದ ಹರ್ಮನ್: 27ನೇ ಓವರ್'ನಲ್ಲಿ ಅರ್ಧಶತಕ ಪೂರೈಸಿದ ಹರ್ಮನ್, ಆನಂತರ ಕಾಂಗರು ಪಡೆಯ ಮೇಲೆ ಅಕ್ಷರಶಃ ಪ್ರಾಬಲ್ಯ ಮೆರೆದರು. 90 ಎಸೆತಗಳಲ್ಲಿ ವೃತ್ತಿ ಜೀವನದ ಮೂರನೇ ಶತಕ ಸಿಡಿಸಿದ ಕೌರ್, ಆನಂತರ ಮತ್ತಷ್ಟು ಆಕ್ರಮಣಕಾರಿಯಾದರು. ಕೇವಲ 115 ಎಸೆತಗಳಲ್ಲಿ 171 ರನ್ ಬಾರಿಸಿ ಅಜೇಯರಾಗುಳಿದರು. ಹರ್ಮನ್ ಸ್ಫೋಟಕ ಇನಿಂಗ್ಸ್'ನಲ್ಲಿ 20 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್'ಗಳು ಸೇರಿದ್ದವು. ಹರ್ಮನ್'ಗೆ ಎಡಗೈ ಆಟಗಾರ್ತಿ ದೀಪ್ತಿ ಶರ್ಮಾ ಉತ್ತಮ ಸಾಥ್ ನೀಡಿದರು. ದೀಪ್ತಿ 25 ರನ್ ಬಾರಿಸಿ ಔಟ್ ಆದರು. ಕೊನೆಯಲ್ಲಿ ಕನ್ನಡತಿ ವೇದಾ ಕೃಷ್ಣಮೂರ್ತಿ ಕೇವಲ 10 ಎಸೆತಗಳಲ್ಲಿ 16 ರನ್ ಬಾರಿಸುವ ಮೂಲಕ ತಂಡಕ್ಕೆ ಉಪಯುಕ್ತ ರನ್'ಗಳನ್ನು ಗಳಿಸಿಕೊಟ್ಟರು.

ಸಂಕ್ಷಿಪ್ತ ಸ್ಕೋರ್:

ಭಾರತ: 281/4(42 ಓವರ್)

ಹರ್ಮನ್ ಪ್ರೀತ್ ಕೌರ್ : 171*

ಮಿಥಾಲಿ ರಾಜ್ : 36

ಎಲ್ವೀಸ್ ವಿಲೀನಿ: 19/1

ವಿವರ ಅಪೂರ್ಣ