ಲೀಡ್ಸ್(ಜು.17): ಇಂಗ್ಲೆಂಡ್ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಿಗಧಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 256 ರನ್ ಸಿಡಿಸಿದೆ. ಈ ಮೂಲಕ ಇಂಗ್ಲೆಂಡ್ ತಂಡಕ್ಕೆ 257 ರನ್ ಟಾರ್ಗೆಟ್ ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಆರಂಭದಲ್ಲೇ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ರೋಹಿತ್ ನಿರ್ಗಮನದ ಬಳಿಕ ಶಿಖರ್ ಧವನ್ ಹಾಗೂ ನಾಯಕ ವಿರಾಟ್ ಕೊಹ್ಲಿ 71 ರನ್‌ಗಳ ಜೊತೆಯಾಟ ನೀಡಿದರು.
 
ಅರ್ಧಶತಕದ ಸನಿಹದಲ್ಲಿ ಶಿಖರ್ ಧವನ್ ಎಡವಿದರು.  44 ರನ್ ಸಿಡಿಸಿದ ಧವನ್ ರನೌಟ್‌ಗೆ ಬಲಿಯಾದರು. ಈ ಮೂಲಕ ಭಾರತ 84ರನ್‌ಗೆ 2ನೇ ವಿಕೆಟ್ ಕಳೆದುಕೊಂಡಿತು. ಕೆಎಲ್ ರಾಹುಲ್ ಬದಲು ತಂಡದಲ್ಲಿ ಸ್ಥಾನ ಪಡೆದ ದಿನೇಶ್ ಕಾರ್ತಿಕ್ ಆಟ 21 ರನ್‌ಗಳಿಗೆ ಅಂತ್ಯವಾಯಿತು.

ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದ ವಿರಾಟ್ ಕೊಹ್ಲಿ ಆದಿಲ್ ರಶೀದ್ ಮೋಡಿಗೆ ಬಲಿಯಾದರು. ಕೊಹ್ಲಿ 71 ರನ್ ಗಳಿಸಿ ಔಟಾದರು. ಇನ್ನು ಸುರೇಶ್ ರೈನಾ ಕೇವಲ 1 ರನ್ ಸಿಡಿಸಿ ನಿರ್ಗಮಿಸಿದರು.

ಎಂ ಎಸ್ ಧೋನಿ ಹಾಗೂ ಹಾರ್ದಿಕ್ ಪಾಂಡ್ಯ ಚೇತರಿಕೆ ನೀಡೋ ಸೂಚನೆ ನೀಡಿದರು. ಆದರೆ ಪಾಂಡ್ಯ 21 ರನ್‌ಗಳಿಸಿ ಪೆವಿಲಿಯನ್ ಸೇರಿಕೊಂಡರು. ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ ಎಂ ಎಸ್ ಧೋನಿ 42 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು. ಈ ಮೂಲಕ ಟೀಂ ಇಂಡಿಯಾ 200ರ ಗಡಿ ದಾಟಿತು.

ಭುವನೇಶ್ವರ್ ಕುಮಾರ್ ಹಾಗೂ ಶಾರ್ದೂಲ್ ಠಾಕೂರ್ 35 ರನ್‌ಗಳ ಜೊತೆಯಾಟ ನೀಡಿದರು. ಭುವಿ 21 ರನ್ ಸಿಡಿಸಿ ಔಟಾದರು. ಶಾರ್ದೂಲ್ ಠಾಕೂರ್ 13 ಎಸೆತದಲ್ಲಿ ಅಜೇಯ 22 ರನ್ ಸಿಡಿಸಿದರು. ಈ ಮೂಲಕ ಭಾರತ 8 ವಿಕೆಟ್ ನಷ್ಟಕ್ಕೆ 256 ರನ್ ಸಿಡಿಸಿತು. ಇಂಗ್ಲೆಂಡ್ ಪರ ಆದಿಲ್ ರಶೀದ್ ಹಾಗೂ ಡೇವಿಡ್ ವಿಲೆ ತಲಾ 3 ವಿಕೆಟ್ ಪಡೆದರು.