ಭಾರತದ ಪರ ಭುವನೇಶ್ವರ್ ಕುಮಾರ್ 3 ವಿಕೆಟ್ ಪಡೆದರೆ, ಯುಜುವೇಂದ್ರ ಚಾಹಲ್ ಹಾಗೂ ಜಸ್ಪ್ರೀತ್ ಬುಮ್ರಾ ತಲಾ 2 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್ ಹಂಚಿಕೊಂಡರು.

ಪುಣೆ(ಅ.25): ಸಂಘಟಿತ ಬೌಲಿಂಗ್ ಪ್ರದರ್ಶನದ ನೆರವಿನಿಂದ ನ್ಯೂಜಿಲೆಂಡ್ ತಂಡವನ್ನು ಕೇವಲ 230 ರನ್'ಗಳಿಗೆ ಕಟ್ಟಿಹಾಕುವಲ್ಲಿ ಟೀಂ ಇಂಡಿಯಾದ ಬೌಲರ್'ಗಳು ಯಶಸ್ವಿಯಾಗಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕಿವೀಸ್ ಪಡೆಗೆ ಭಾರತದ ವೇಗಿಗಳು ಆರಂಭದಲ್ಲೇ ಶಾಕ್ ನೀಡಿದರು. ಪಂದ್ಯದ ಮೂರನೇ ಓವರ್'ನಲ್ಲಿ ಮಾರ್ಟಿನ್ ಗುಪ್ಟಿಲ್'ಗೆ ಭುವನೇಶ್ವರ್ ಪೆವಿಲಿಯನ್ ಹಾದಿ ತೋರಿಸಿದರು. ಇದರ ಬೆನ್ನಲ್ಲೇ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಬುಮ್ರಾ ಎಲ್'ಬಿ ಬಲೆಗೆ ಸಿಲುಕಿಸುವಲ್ಲಿ ಯಶಸ್ವಿಯಾದರು. ಮತ್ತೋರ್ವ ಆರಂಭಿಕ ಕಾಲಿನ್ ಮನ್ರೋ ಅವರನ್ನು ಭುವಿ ಕ್ಲೀನ್ ಬೌಲ್ಡ್ ಮಾಡಿದಾಗ ನ್ಯೂಜಿಲೆಂಡ್ ತಂಡದ ಮೊತ್ತ 27 ಆಗಿತ್ತು.

ಈ ವೇಳೆ ತಂಡಕ್ಕೆ ಚೇತರಿಕೆ ನೀಡಲು ಕಳೆದ ಪಂದ್ಯದ ಹೀರೋಗಳಾದ ರಾಸ್ ಟೇಲರ್ ಹಾಗೂ ಟಾಮ್ ಲಾಥಮ್ ಯತ್ನಿಸಿದರಾದರೂ ಅವರಿಗೆ ಭದ್ರವಾಗಿ ಬೇರೂರಲು ಪಾಂಡ್ಯ ಹಾಗೂ ಅಕ್ಷರ್ ಪಟೇಲ್ ಅವಕಾಶ ಮಾಡಿಕೊಡಲಿಲ್ಲ. ಟೇಲರ್(21)ಗೆ ಪಾಂಡ್ಯ ಶಾಕ್ ಕೊಟ್ಟರೆ, ಲಾಥಮ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವಲ್ಲಿ ಅಕ್ಷರ್ ಪಟೇಲ್ ಯಶಸ್ವಿಯಾದರು. ಮಧ್ಯಮ ಕ್ರಮಾಂಕದಲ್ಲಿ ಹೆನ್ರಿ ನಿಕೋಲಸ್ ಹಾಗೂ ಕಾಲಿನ್ ಡಿ ಗ್ರಾಂಡ್'ಹೋಂ 47 ರನ್'ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 200ರ ಸಮೀಪ ಕೊಂಡ್ಯೊಯ್ದರು. ಇನ್ನೂ ಕೆಳಕ್ರಮಾಂಕದಲ್ಲಿ ಮೈಕಲ್ ಸ್ಯಾಂಟರ್(29) ಹಾಗೂ ಥೀಮ್ ಸೌಥಿ(25*) ತಂಡವನ್ನು 200ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

ಭಾರತದ ಪರ ಭುವನೇಶ್ವರ್ ಕುಮಾರ್ 3 ವಿಕೆಟ್ ಪಡೆದರೆ, ಯುಜುವೇಂದ್ರ ಚಾಹಲ್ ಹಾಗೂ ಜಸ್ಪ್ರೀತ್ ಬುಮ್ರಾ ತಲಾ 2 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್ ಹಂಚಿಕೊಂಡರು.

ಸಂಕ್ಷಿಪ್ತ ಸ್ಕೋರ್:

ನ್ಯೂಜಿಲೆಂಡ್: 230/9

ಹೆನ್ರಿ ನಿಕೋಲಸ್: 42

ಕಾಲಿನ್ ಡಿ ಗ್ರಾಂಡ್'ಹೋಂ: 41

ಭುವನೇಶ್ವರ್ ಕುಮಾರ್ : 45/3

ವಿವರ ಅಪೂರ್ಣ