Asianet Suvarna News Asianet Suvarna News

ಇಂಗ್ಲೆಂಡ್ ವೀರೋಚಿತ ಹೋರಾಟ; ಭಾರತಕ್ಕೆ 15 ರನ್ ರೋಚಕ ಜಯ; ಸರಣಿ ವಶ

ಮೂರು ಪಂದ್ಯಗಳ ಸರಣಿಯ ಕೊನೆಯ ಪಂದ್ಯ ಜ.22ರಂದು ಕೋಲ್ಕತಾದಲ್ಲಿ ನಡೆಯಲಿದೆ. ಈಗಾಗಲೇ ಭಾರತಕ್ಕೆ ಸರಣಿ ದಕ್ಕಿರುವುದರಿಂದ ಕೊನೆಯ ಪಂದ್ಯ ನಾಮಕಾವಸ್ತೆಯಾಗಿದೆ.

india registers series win against england

ಕಟಕ್(ಜ. 19): ಗೆಲುವಿಗೆ ಭಾರತ ಒಡ್ಡಿದ 382 ರನ್'ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತುತ್ತಿದ್ದ ಇಂಗ್ಲೆಂಡ್ ತಂಡ ಕೊನೆ ಗಳಿಗೆಯಲ್ಲಿ ಹಳಿತಪ್ಪಿ ಸೋಲೊಪ್ಪಿಕೊಂಡಿತು. ಮೂರು ಏಕದಿನ ಪಂದ್ಯಗಳ ಎರಡನೇ ಪಂದ್ಯದಲ್ಲಿ ಭಾರತ 15 ರನ್'ಗಳ ರೋಚಕ ಜಯ ಪಡೆಯಿತು. ಇಂಗ್ಲೆಂಡ್'ನ ಇಯಾನ್ ಮಾರ್ಗನ್ ಅವರ ಅಮೋಘ ಶತಕ ವ್ಯರ್ಥವಾಯಿತು. ಸತತ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯನ್ನು ಭಾರತ ತನ್ನದಾಗಿಸಿಕೊಂಡಿತು.

ಮಾರ್ಗನ್ ಶತಕದ ಜೊತೆಗೆ ಜೇಸಾನ್ ರಾಯ್, ಜೋ ರೂಟ್ ಮತ್ತು ಮೊಯೀನ್ ಅಲಿ ಅರ್ಧಶತಕ ಭಾರಿಸಿ ಭಾರತದ ಪಾಳೆಯದಲ್ಲಿ ಆತಂಕ ಮೂಡಿಸಿದ್ದರು. ಆದರೆ, 49ನೇ ಓವರ್'ನಲ್ಲಿ ಇಯಾನ್ ಮಾರ್ಗನ್ ಆತುರ ಮಾಡಿಕೊಂಡು ರನ್ ಔಟ್ ಆಗದಿದ್ದರೆ ಇಂಗ್ಲೆಂಡ್ ತಂಡವೇ ಗೆಲುವಿನ ಸಂಭ್ರಮ ಪಡೆಯುವ ಸಾಧ್ಯತೆ ಇತ್ತು.

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿತು. 25 ರನ್ ಆಗುವಷ್ಟರಲ್ಲಿ ಕೆಎಲ್ ರಾಹುಲ್, ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಪೆವಿಲಿಯನ್'ಗೆ ಮರಳಿದರು. ಆನಂತರ ಜೊತೆಯಾದ ಯುವರಾಜ್ ಸಿಂಗ್ ಮತ್ತು ಎಂಎಸ್ ಧೋನಿ ತಮ್ಮ ಅಪಾರ ಅನುಭವವನ್ನು ಧಾರೆಗೆ ಎಳೆದು ಇನ್ನಿಂಗ್ಸ್ ಕಟ್ಟಿದರು. ಅವರಿಬ್ಬರ ನಡುವಿನ ನಾಲ್ಕನೇ ವಿಕೆಟ್'ಗೆ ಜೊತೆಯಾಟದಲ್ಲಿ 256 ರನ್ ಹರಿದುಬಂತು. ಆರು ವರ್ಷಗಳ ಬಳಿಕ ಯುವಿ ಮೊದಲ ಶತಕ ಗಳಿಸಿದರು. ಯುವಿ ಗಳಿಸಿದ 150 ರನ್'ಗಳು ಅವರ ವೈಯಕ್ತಿಕ ಗರಿಷ್ಠ ಸ್ಕೋರಾಗಿದೆ. ಇನ್ನು, ಧೋನಿ ಕೂಡ ಬಹಳ ಕಾಲದ ಬಳಿಕ ಶತಕದ ಸವಿ ಉಂಡರು. ಕೊನೆಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಕೂಡ ಬಿಡುಬೀಸಾಗಿ ಬ್ಯಾಟ್ ಬೀಸಿ ತಂಡದ ಸ್ಕೋರನ್ನು 381 ರನ್'ಗೆ ಉಬ್ಬಿಸಿದರು.

ಮೂರು ಪಂದ್ಯಗಳ ಸರಣಿಯ ಕೊನೆಯ ಪಂದ್ಯ ಜ.22ರಂದು ಕೋಲ್ಕತಾದಲ್ಲಿ ನಡೆಯಲಿದೆ. ಈಗಾಗಲೇ ಭಾರತಕ್ಕೆ ಸರಣಿ ದಕ್ಕಿರುವುದರಿಂದ ಕೊನೆಯ ಪಂದ್ಯ ನಾಮಕಾವಸ್ತೆಯಾಗಿದೆ.

ಸ್ಕೋರು ವಿವರ:

ಭಾರತ 50 ಓವರ್ 381/6
(ಯುವರಾಜ್ ಸಿಂಗ್ 150, ಎಂಎಸ್ ಧೋನಿ 134 ರನ್ - ಕ್ರಿಸ್ ವೋಕ್ಸ್ 60/4, ಲಿಯಾಮ್ ಪ್ಲುಂಕೆಟ್ 91/2

ಇಂಗ್ಲೆಂಡ್ 50 ಓವರ್ 366/8
(ಇಯಾನ್ ಮಾರ್ಗನ್ 102, ಜೇಸಾನ್ ರಾಯ್ 82, ಮೊಯೀನ್ ಅಲಿ 55, ಜೋ ರೂಟ್ 54, ಪ್ಲುಂಕೆಟ್ ಅಜೇಯ 26 ರನ್ - ಆರ್.ಅಶ್ವಿನ್ 65/3, ಜಸ್'ಪ್ರೀತ್ ಬುಮ್ರಾ 81/2)

Follow Us:
Download App:
  • android
  • ios