2036ರಲ್ಲಿ ಅಹಮದಾಬಾದ್‌ನಲ್ಲಿ ಒಲಿಂಪಿಕ್ಸ್ ಆಯೋಜಿಸಲು ಭಾರತ ಒಲವು2036ರ ಒಲಿಂಪಿಕ್ಸ್‌ ಆತಿಥ್ಯಕ್ಕೆ ಬಿಡ್‌ ಸಲ್ಲಿಸಲು ಭಾರತ ಸಿದ್ಧವಿದೆ ಎಂದ ಅನುರಾಗ್ ಠಾಕೂರ್ಈಗಾಗಲೇ 2032ರ ಒಲಿಂಪಿಕ್ಸ್‌ವರೆಗೂ ಬಿಡ್‌ ಪೂರ್ಣಗೊಂಡಿದೆ 

ನವದೆಹಲಿ(ಡಿ.29): 2036ರ ಒಲಿಂಪಿಕ್ಸ್‌ ಆತಿಥ್ಯಕ್ಕೆ ಬಿಡ್‌ ಸಲ್ಲಿಸಲು ಭಾರತ ಸಿದ್ಧವಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಹೇಳಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ಭಾರತ 1982ರ ಏಷ್ಯನ್‌ ಗೇಮ್ಸ್‌, 2010ರ ಕಾಮನ್‌ವೇಲ್ತ್‌ ಗೇಮ್ಸ್‌ ಯಶಸ್ವಿಯಾಗಿ ಆಯೋಜಿಸಿದೆ. ಈಗ ನಮ್ಮ ಮುಂದೆ ಒಲಿಂಪಿಕ್ಸ್‌ ಕ್ರೀಡಾಕೂಟ ಆಯೋಜಿಸುವ ದೊಡ್ಡ ಗುರಿ ಇದೆ. ಅಹಮದಾಬಾದ್‌ನಲ್ಲಿ ಒಲಿಂಪಿಕ್ಸ್‌ ಆಯೋಜಿಸಲು ಉದ್ದೇಶಿಸಲಾಗಿದೆ. ಭಾರತ ಜಿ20 ಶೃಂಗಸಭೆಗೆ ನೇತೃತ್ವ ವಹಿಸುವುದಾದರೆ, ಖಂಡಿತಾ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುವ ಸಾಮರ್ಥ್ಯ ಹೊಂದಿದೆ. 2032ರ ಒಲಿಂಪಿಕ್ಸ್‌ವರೆಗೂ ಬಿಡ್‌ ಪೂರ್ಣಗೊಂಡಿದ್ದು, 2036ರಿಂದ ಮುಂದಿನ ಒಲಿಂಪಿಕ್ಸ್‌ಗಳಿಗೆ ಆತಿಥ್ಯ ಹಕ್ಕು ಪಡೆಯಲು ಸ್ಪರ್ಧೆ ನಡೆಸಬೇಕಿದೆ’ ಎಂದಿದ್ದಾರೆ.

‘ಭಾರತ ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ಸು ಕಾಣುತ್ತಿರುವಾಗ ಕ್ರೀಡೆಯಲ್ಲಿ ಮಾತ್ರ ಏಕೆ ಸಾಧ್ಯವಾಗುವುದಿಲ್ಲ? ಒಲಿಂಪಿಕ್ಸ್‌ನಂತಹ ಬೃಹತ್‌ ಕ್ರೀಡಾಕೂಟ ಆಯೋಜನೆಗೆ ಇದು ಸೂಕ್ತ ಸಮಯ. ನಮ್ಮ ದೇಶದಲ್ಲಿ ಅದಕ್ಕೆ ಬೇಕಾದ ಎಲ್ಲಾ ಸಂಪನ್ಮೂಲಗಳಿವೆ. ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ ಜೊತೆ ಈ ಬಗ್ಗೆ ನೀಲನಕ್ಷೆ ತಯಾರಿಸಿ, ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿಗೆ ಸಲ್ಲಿಸಲಿದ್ದೇವೆ’ ಎಂದು ಅನುರಾಗ್‌ ಹೇಳಿದ್ದಾರೆ.

ಸಂತೋಷ್‌ ಟ್ರೋಫಿ: ರಾಜ್ಯಕ್ಕೆ ತ್ರಿಪುರಾ ಸವಾಲು

ನವದೆಹಲಿ: ಸಂತೋಷ್‌ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್‌ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿ ಹುಮ್ಮಸ್ಸಿನಲ್ಲಿರುವ ಕರ್ನಾಟಕ ತಂಡ ಗುರುವಾರ ತ್ರಿಪುರಾ ವಿರುದ್ಧ ಕಾದಾಡಲಿದೆ. ಸತತ 4ನೇ ಜಯದೊಂದಿಗೆ ಗುಂಪು-1ರಲ್ಲಿ ಮೊದಲ ಸ್ಥಾನ ಭದ್ರಪಡಿಸಿಕೊಂಡು ಪ್ರಧಾನ ಸುತ್ತಿನಲ್ಲಿ ಸ್ಥಾನ ಖಚಿತಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

ಪಂದ್ಯ: ಬೆಳಗ್ಗೆ 11ಕ್ಕೆ

ಹಾಕಿ ವಿಶ್ವಕಪ್‌ನಲ್ಲಿ ಚಿನ್ನ ಗೆದ್ದರೆ ಭಾರತೀಯರಿಗೆ ತಲಾ 25 ಲಕ್ಷ ಬಹುಮಾನ!

ನವದೆಹಲಿ: ಭಾರತ ತಂಡವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮುಂಬರುವ ಹಾಕಿ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದರೆ ತಂಡದ ಪ್ರತಿ ಆಟಗಾರನಿಗೆ ತಲಾ 25 ಲಕ್ಷ ರು. ಬಹುಮಾನ ನೀಡುವುದಾಗಿ ಹಾಕಿ ಇಂಡಿಯಾ ಘೋಷಿಸಿದೆ. ಈ ಬಗ್ಗೆ ಬುಧವಾರ ಪ್ರಕಟಣೆ ಹೊರಡಿಸಿದ ಸಂಸ್ಥೆ, ಸಹಾಯಕ ಸಿಬ್ಬಂದಿಗೂ ತಲಾ 5 ಲಕ್ಷ ರು. ನೀಡುವುದಾಗಿ ತಿಳಿಸಿದೆ. ಅಲ್ಲದೇ ಬೆಳ್ಳಿ ಗೆದ್ದರೆ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗೆ ಕ್ರಮವಾಗಿ ತಲಾ 15 ಲಕ್ಷ ರು. ಹಾಗೂ 3 ಲಕ್ಷ ರು., ಕಂಚು ಗೆದ್ದರೆ ತಲಾ 10 ಲಕ್ಷ ಹಾಗೂ 2 ಲಕ್ಷ ರು. ನೀಡುವುದಾಗಿ ತಿಳಿಸಿದೆ. ಭಾರತ ಕೊನೆ ಬಾರಿ 1975ರಲ್ಲಿ ಹಾಕಿ ವಿಶ್ವಕಪ್‌ ಗೆದ್ದಿತ್ತು. ಈ ಬಾರಿ ಟೂರ್ನಿ ಜನವರಿ 13ರಿಂದ 29ರ ವರೆಗೆ ಒಡಿಶಾದಲ್ಲಿ ನಡೆಯಲಿದೆ.

Ranji Trophy: ಮನೀಶ್ ಪಾಂಡೆ ಭರ್ಜರಿ ದ್ವಿಶತಕ, ಗೋವಾ ಮೇಲೆ ರಾಜ್ಯ ಸವಾರಿ..!

ಸವಿತಾಗೆ ವಿಶ್ವ ಚೆಸ್‌ ಕಂಚು

ಆಲ್ಮೆಟಿ(ಕಜಕಸ್ತಾನ): ಭಾರತದ 15ರ ಹರೆಯದ ಸವಿತಾಶ್ರೀ ತಮ್ಮ ಚೊಚ್ಚಲ ಫಿಡೆ ವಿಶ್ವ ರಾರ‍ಯಪಿಡ್‌ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. 36ನೇ ಶ್ರೇಯಾಂಕಿತ ತಮಿಳುನಾಡಿನ ಸವಿತಾ ಮಹಿಳಾ ವಿಭಾಗದಲ್ಲಿ 11 ಸುತ್ತುಗಳಲ್ಲಿ 8 ಅಂಕಗಳೊಂದಿಗೆ 3ನೇ ಸ್ಥಾನಿಯಾದರು. 9ನೇ ಸುತ್ತಿನಲ್ಲಿ ಕಜಕಸ್ತಾನದ ಝಾನ್ಸಯಾ ಅಬ್ದುಮಲಿಕ್‌ ವಿರುದ್ಧದ ಸೋಲು ಸವಿತಾಗೆ ಅಗ್ರ 2 ಸ್ಥಾನ ತಪ್ಪುವಂತೆ ಮಾಡಿತು. ಚೀನಾದ ತಾನ್‌ ಝೊಂಗ್ಯಿ ಚಿನ್ನ, ಕಜಕಸ್ತಾನದ ದಿನಾರ ಬೆಳ್ಳಿ ಜಯಿಸಿದರು.