Ranji Trophy: ಮನೀಶ್ ಪಾಂಡೆ ಭರ್ಜರಿ ದ್ವಿಶತಕ, ಗೋವಾ ಮೇಲೆ ರಾಜ್ಯ ಸವಾರಿ..!
ರಣಜಿ ಟ್ರೋಫಿ ಟೂರ್ನಿಯಲ್ಲಿ ಗೋವಾ ಎದುರು ಬಿಗಿ ಹಿಡಿತ ಸಾಧಿಸಿದ ಕರ್ನಾಟಕ ಕ್ರಿಕೆಟ್ ತಂಡ
ಆಕರ್ಷಕ ದ್ವಿಶತಕ ಸಿಡಿಸಿ ಮಿಂಚಿದ ಮಾಜಿ ನಾಯಕ ಮನೀಶ್ ಪಾಂಡೆ
ಮೊದಲ ಇನಿಂಗ್ಸ್‌ನಲ್ಲಿ ಬೃಹತ್ ಮುನ್ನಡೆ ಸಾಧಿಸಿದ ಕರ್ನಾಟಕ ಕ್ರಿಕೆಟ್ ತಂಡ
ಪಣಜಿ(ಡಿ.29): ಮನೀಶ್ ಪಾಂಡೆ ಭರ್ಜರಿ ದ್ವಿಶತಕದ ನೆರವಿನಿಂದ 2022-23ನೇ ಸಾಲಿನ ರಣಜಿ ಟ್ರೋಫಿಯ 3ನೇ ಪಂದ್ಯದಲ್ಲಿ ಕರ್ನಾಟಕ ತಂಡ ಗೋವಾ ವಿರುದ್ಧ ಬೃಹತ್ ಮೊತ್ತ ಕಲೆ ಹಾಕಿದೆ. ತಂಡ ಮೊದಲ ಇನ್ನಿಂಗ್‌್ಸನಲ್ಲಿ 7 ವಿಕೆಟ್‌ಗೆ 603 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಬಳಿಕ ಗೋವಾ 2ನೇ ದಿನದಂತ್ಯಕ್ಕೆ 1 ವಿಕೆಟ್‌ಗೆ 45 ರನ್ ಗಳಿಸಿದ್ದು, ಇನ್ನೂ 558 ರನ್ ಹಿನ್ನಡೆಯಲ್ಲಿದೆ.
ಮೊದಲ ದಿನ 3 ವಿಕೆಟ್‌ಗೆ 294 ರನ್ ಗಳಿಸಿದ್ದ ರಾಜ್ಯ ತಂಡ ಬುಧವಾರವೂ ಗೋವಾ ಬೌಲರ್‌ಗಳ ಮೇಲೆ ಸವಾರಿ ಮಾಡಿತು. ಚೊಚ್ಚಲ ಶತಕದ ನಿರೀಕ್ಷೆಯಲ್ಲಿದ್ದ ವಿಶಾಲ್ 91ಕ್ಕೆ ಔಟಾದರು. ಶರತ್(29), ಕೆ.ಗೌತಮ್(16) ವೈಫಲ್ಯ ಅನುಭವಿಸಿದರು. ಆದರೆ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಪಾಂಡೆ ವೇಗವಾಗಿಯೇ ಬ್ಯಾಟ್ ಬೀಸಿ ರಣಜಿಯಲ್ಲಿ 3ನೇ ದ್ವಿಶತಕ ಪೂರ್ತಿಗೊಳಿಸಿ ಸಂಭ್ರಮಿಸಿದರು. 7ನೇ ವಿಕೆಟ್‌ಗೆ ಶುಭಾಂಗ್ ಹೆಗ್ಡೆ(39) ಜೊತೆ 123 ರನ್ ಜೊತೆಯವಾಟವಾಡಿದ ಪಾಂಡೆ 186 ಎಸೆತಗಳಲ್ಲಿ 14 ಬೌಂಡರಿ, 11 ಸಿಕ್ಸರನ್ನೊಳಗೊಂಡ 208 ರನ್ ಸಿಡಿಸಿ ಔಟಾಗದೆ ಉಳಿದರು. ದರ್ಶನ್ 3, ಅರ್ಜುನ್ ತೆಂಡುಲ್ಕರ್ 2 ವಿಕೆಟ್ ಕಿತ್ತರು. ಬಳಿಕ ಕ್ರೀಸ್‌ಗಿಳಿದ ಗೋವಾಕ್ಕೆ ಆರಂಭಿಕ ಆಘಾತ ಎದುರಾಗಿದ್ದು, ಸುನಿಲ್ ದೇಸಾಯಿ(05)ಯನ್ನು ರೋನಿತ್ ಮೋರೆ ಪೆವಿಲಿಯನ್‌ಗೆ ಅಟ್ಟಿದರು.
Ranji Trophy: ಸಮರ್ಥ್ ಆಕರ್ಷಕ ಶತಕ, ಗೋವಾ ಎದುರು ಬೃಹತ್ ಮೊತ್ತದತ್ತ ಕರ್ನಾಟಕ..!
ಸ್ಕೋರ್:
ಕರ್ನಾಟಕ 603/7ಡಿ.(ಮೊದಲ ದಿನ 294/3)(ಮನೀಶ್ 208*, ವಿಶಾಲ್ 91, ದರ್ಶನ್ 3-145),
ಗೋವಾ 45/1(2ನೇ ದಿನದಂತ್ಯಕ್ಕೆ) (ಸುಮಿರಾನ್ 30*, ಮೋರೆ 1-10)
ಅಂಕಿ-ಅಂಶ:
03 ದ್ವಿಶತಕ: ರಣಜಿ ಟ್ರೋಫಿಯಲ್ಲಿ ಪಾಂಡೆಗಿದು 3ನೇ ದ್ವಿಶತಕ. ದ್ರಾವಿಡ್(05), ಬ್ಯಾರಿಂಗ್ಟನ್(03) ಸಾಲಿಗೆ ಪಾಂಡೆ ಸೇರ್ಪಡೆಗೊಂಡಿದ್ದಾರೆ.
19 ಶತಕ: ರಣಜಿ ಟ್ರೋಫಿಯಲ್ಲಿ ಪಾಂಡೆಗಿದು 19ನೇ ಶತಕ. ರಾಜ್ಯದ ಪರ ಅತಿಹೆಚ್ಚು ಶತಕ ಬಾರಿಸಿದವರ ಪಟ್ಟಿಯಲ್ಲಿ ಉತ್ತಪ್ಪ(18 ಶತಕ) ಅವರನ್ನು ಪಾಂಡೆ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ್ದಾರೆ. ಬ್ರಿಜೇಶ್ ಪಟೇಲ್(26 ಶತಕ) ಮೊದಲ ಸ್ಥಾನದಲ್ಲಿದ್ದಾರೆ.
ರಿಯಾನ್ ಸ್ಫೋಟಕ ಅಟ: 28 ಎಸೆತದಲ್ಲಿ 78 ರನ್!
ಹೈದರಾಬಾದ್: ಇತ್ತೀಚೆಗೆ ಬಹಳ ಸುದ್ದಿಯಲ್ಲಿರುವ ಅಸ್ಸಾಂನ ಯುವ ಆಲ್ರೌಂಡರ್ ರಿಯಾನ್ ಪರಾಗ್ ಮತ್ತೊಂದು ಸ್ಫೋಟಕ ಇನ್ನಿಂಗ್‌್ಸ ಮೂಲಕ ಗಮನ ಸೆಳೆದಿದ್ದಾರೆ. ಹೈದರಾಬಾದ್ ವಿರುದ್ಧ ಅಸ್ಸಾಂ ಯುವ ಬ್ಯಾಟರ್ ರಿಯಾನ್ ಪರಾಗ್ ಸ್ಫೋಟಕ ಆಟವಾಡಿ 28 ಎಸೆತಗಳಲ್ಲಿ 78 ರನ್ ಸಿಡಿಸಿದರು. ಅವರ ಇನ್ನಿಂಗ್‌್ಸ 8 ಬೌಂಡರಿ, 6 ಸಿಕ್ಸರ್ ಒಳಗೊಂಡಿತ್ತು. ಮೊದಲ ಇನ್ನಿಂಗ್‌್ಸನಲ್ಲಿ ಅಸ್ಸಾಂನ್ನು 205ಕ್ಕೆ ನಿಯಂತ್ರಿಸಿದ್ದ ಹೈದರಾಬಾದ್ ಬಳಿಕ 208 ರನ್ ಕಲೆಹಾಕಿತು. ಅಸ್ಸಾಂ ಸದ್ಯ 2ನೇ ಇನ್ನಿಂಗ್‌್ಸನಲ್ಲಿ 182/6 ರನ್ ಗಳಿಸಿ, 179 ರನ್ ಮುನ್ನಡೆಯಲ್ಲಿದೆ.
ಒಟ್ಟಿಗೆ ಬ್ಯಾಟ್ ಮಾಡಿದ ಸರ್ಫರಾಜ್-ಮುಷೀರ್!
ಮುಂಬೈ: ರಣಜಿ ಟ್ರೋಫಿಯಲ್ಲಿ ಬುಧವಾರ ಮುಂಬೈನ ಸಹೋದರರಾದ ಸರ್ಫರಾಜ್ ಖಾನ್ ಹಾಗೂ ಮುಷೀರ್ ಖಾನ್ ಸೌರಾಷ್ಟ್ರ ವಿರುದ್ಧ ಒಟ್ಟಿಗೇ ಬ್ಯಾಟ್ ಮಾಡಿ ಗಮನ ಸೆಳೆದರು. 33ನೇ ಪ್ರಥಮ ದರ್ಜೆ ಪಂದ್ಯವಾಡುತ್ತಿರುವ 25 ವರ್ಷದ ಸರ್ಫರಾಜ್ 75 ರನ್ ಗಳಿಸಿ ಔಟಾದರೆ, ಚೊಚ್ಚಲ ಪಂದ್ಯವಾಡಿದ 17 ವರ್ಷದ ಮುಷೀರ್ 12 ರನ್‌ಗೆ ವಿಕೆಟ್ ಒಪ್ಪಿಸಿದರು. ಪಂದ್ಯದ ಮೊದಲ ದಿನವಾದ ಮಂಗಳವಾರ ಸರ್ಫರಾಜ್ ತಮ್ಮ ಕಿರಿಯ ಸಹೋದರ ಮುಷೀರ್‌ಗೆ ಮುಂಬೈ ತಂಡದ ಕ್ಯಾಪ್ ನೀಡಿದ್ದರು.