ಗೋವಾ(ಸೆ. 22): ಎಎಫ್'ಸಿ ಅಂಡರ್-16 ಫುಟ್ಬಾಲ್ ಟೂರ್ನಿಯಿಂದ ಭಾರತ ಹೊರಬಿದ್ದಿದೆ. ನಿನ್ನೆ ರಾತ್ರಿ ನಡೆದ ಎ ಗುಂಪಿನ ಕೊನೆಯ ಸುತ್ತಿನ ಪಂದ್ಯದಲ್ಲಿ ಇರಾನ್ ವಿರುದ್ಧ ಭಾರತ 0-3 ಗೋಲುಗಳ ಅಂತರದಿಂದ ಸೋಲನುಭವಿಸಿದೆ. ತಾಂತ್ರಿಕವಾಗಿ ಹಾಗೂ ದೈಹಿಕವಾಗಿ ಭಾರತಕ್ಕಿಂತ ಬಹಳ ಬಲಿಷ್ಠವಾಗಿರುವ ಇರಾನ್ ಎದುರು ಭಾರತೀಯ ಬಾಲಕರು ಹೆಚ್ಚು ಹೋರಾಟ ತೋರಲು ಸಾಧ್ಯವಾಗಲಿಲ್ಲ. ಆದರೆ, ಚುರುಕಿನ ಆಟದ ಮೂಲಕ ಭಾರತ ಗಮನ ಸೆಳೆದದಷ್ಟೇ ಸಮಾಧಾನದ ವಿಚಾರ. ಪ್ರಬಲ ಎದುರಾಳಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೋಚ್ ನಿಕೋಲಾಯ್ ಅಡಮ್ ಅವರು ರಕ್ಷಣೆಗೆ ಹೆಚ್ಚು ಗಮನ ಕೊಟ್ಟರು. ಇಬ್ಬರು ಸ್ಟ್ರೈಕರ್'ಗಳ ಬದಲು ಹೆಚ್ಚುವರಿ ಮಿಡ್'ಫೀಲ್ಡ್ ಹಾಗೂ ರಕ್ಷಣಾ ವಿಭಾಗಕ್ಕೆ ಆಟಗಾರರನ್ನು ನಿಯೋಜಿಸಿದರು. ಇದರಿಂದ ಭಾರತ ಒಂದಷ್ಟು ಕಾಲ ಚೆಂಡನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಸಾಧ್ಯವಾಯಿತು. ಇಷ್ಟು ಬಿಟ್ಟರೆ ಇಡೀ ಪಂದ್ಯದಲ್ಲಿ ಇರಾನೀ ಹುಡುಗರ ಪ್ರಾಬಲ್ಯವೇ ಹೆಚ್ಚಾಗಿತ್ತು. ಇಷ್ಟಾದರೂ ಪಂದ್ಯದ 80ನೇ ನಿಮಿಷದವರೆಗೂ ಭಾರತ ತಮ್ಮ ಎದುರಾಳಿಗೆ ಕೇವಲ ಒಂದು ಗೋಲಿನ ಮುನ್ನಡೆ ಮಾತ್ರ ನೀಡಿತ್ತು. ಆದರೆ, 81 ಹಾಗೂ ಹೆಚ್ಚುವರಿ ಸಮಯದಲ್ಲಿ ಇರಾನ್ ಇನ್ನೆರಡು ಗೋಲು ಗಳಿಸಿ ಗೆಲುವಿನ ಅಂತರ ಹೆಚ್ಚಿಸಿತ್ತು.
ಭಾರತ ಈ ಸೋಲಿನೊಂದಿಗೆ ಟೂರ್ನಿಯಿಂದ ಹೊರಬಿದ್ದಂತಾಗಿದೆ. ಎ ಗುಂಪಿನಲ್ಲಿ ಇರಾನ್ ಮತ್ತು ಯುಎಇ ತಂಡಗಳು ಕ್ವಾರ್ಟರ್'ಫೈನಲ್ ಹಂತಕ್ಕೇರಿವೆ. ಇದೇ ಗುಂಪಿನಲ್ಲಿ ಭಾರತದೊಂದಿಗೆ ಸೌದಿ ಅರೇಬಿಯಾ ಕೂಡ ನಿರ್ಗಮಿಸಿದೆ.
ಅಂಡರ್-19 ವಿಶ್ವಕಪ್ ಟೂರ್ನಿಗಾಗಿ ರೂಪುಗೊಳ್ಳುತ್ತಿರುವ ಭಾರತದ ಈ ತಂಡ ಸದ್ಯದ ಟೂರ್ನಿಯಲ್ಲಿ ಲೀಗ್ ಹಂತದಿಂದಲೇ ಹೊರಬಿದ್ದರೂ ಉತ್ತಮ ಪ್ರದರ್ಶನದ ಮೂಲಕ ಗಮನ ಸೆಳೆದಿದೆ. ಚೆಂಡಿನ ಮೇಲೆ ಒಳ್ಳೆಯ ನಿಯಂತ್ರಣ ಹೊಂದಿರುವ ಈ ಎಳೆಯ ಹುಡುಗರು ಭಾರತದ ಭವಿಷ್ಯದ ತಾರೆಗಳಾಗುವ ಎಲ್ಲಾ ಸೂಚನೆಗಳನ್ನು ನೀಡಿದ್ದಾರೆ. ಕೋಚ್ ನಿಕೋಲಾಯ್ ಅಡಂ ಕೂಡ ಈ ಹುಡುಗರ ಆಟವನ್ನು ಪ್ರಶಂಸಿಸಿದ್ದಾರೆ.
