ಈ ಪಂದ್ಯದಲ್ಲಿ ಬಹುತೇಕ ಕೊನೆಯವರೆಗೂ ಭಾರತವೇ ಹಿಡಿತ ಹೊಂದಿತ್ತು. ಹಾಫ್'ಟೈಮ್'ನಲ್ಲಿ ಭಾರತ 2-1ರಿಂದ ಮುನ್ನಡೆ ಹೊಂದಿತ್ತು. ಹರ್ಮನ್'ಪ್ರೀತ್ ಸಿಂಗ್ ಅವರೇ ಎರಡೂ ಗೋಲು ಗಳಿಸಿ ಭಾರತಕ್ಕೆ ಗೆಲುವಿನ ಆಸೆ ಮೂಡಿಸಿದ್ದರು. ಆದರೆ 44ನೇ ನಿಮಿಷದಲ್ಲಿ ಒಂದೇ ನಿಮಿಷಗಳ ಅಂತರದಲ್ಲಿ ಕೆನಡಾ 2 ಗೋಲು ಗಳಿಸಿ ಭಾರತಕ್ಕೆ ಶಾಕ್ ಕೊಟ್ಟಿತು.

ಲಂಡನ್(ಜೂನ್ 25): ವರ್ಲ್ಡ್ ಹಾಕಿ ಲೀಗ್ ಸೆಮಿಫೈನಲ್ ಪಂದ್ಯಾವಳಿಯಲ್ಲಿ ಭಾರತ 6ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಪಾಕಿಸ್ತಾನವನ್ನು ನಿನ್ನೆ ಭರ್ಜರಿಯಾಗಿ ಮಣಿಸಿದ್ದ ಭಾರತ ತಂಡ 5ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಕೆನಡಾ ವಿರುದ್ಧ ಸೋಲನುಭವಿಸಿದೆ. ಇಂದು ನಡೆದ ರೋಚಕ ಹಣಾಹಣಿಯಲ್ಲಿ ಕೆನಡಾ 3-2 ಗೋಲುಗಳಿಂದ ಭಾರತವನ್ನು ಸೋಲಿಸಿತು. ಗ್ರೂಪ್ ಹಂತದಲ್ಲಿ ಭಾರತ ವಿರುದ್ಧ 0-3 ಅಂತರದಿಂದ ಅನುಭವಿಸಿದ್ದ ಸೋಲಿಗೆ ಕೆನಡಾ ಈ ಪಂದ್ಯದಲ್ಲಿ ಸೇಡು ತೀರಿಸಿಕೊಂಡಂತಾಗಿದೆ.

ಈ ಪಂದ್ಯದಲ್ಲಿ ಬಹುತೇಕ ಕೊನೆಯವರೆಗೂ ಭಾರತವೇ ಹಿಡಿತ ಹೊಂದಿತ್ತು. ಹಾಫ್'ಟೈಮ್'ನಲ್ಲಿ ಭಾರತ 2-1ರಿಂದ ಮುನ್ನಡೆ ಹೊಂದಿತ್ತು. ಹರ್ಮನ್'ಪ್ರೀತ್ ಸಿಂಗ್ ಅವರೇ ಎರಡೂ ಗೋಲು ಗಳಿಸಿ ಭಾರತಕ್ಕೆ ಗೆಲುವಿನ ಆಸೆ ಮೂಡಿಸಿದ್ದರು. ಆದರೆ 44ನೇ ನಿಮಿಷದಲ್ಲಿ ಒಂದೇ ನಿಮಿಷಗಳ ಅಂತರದಲ್ಲಿ ಕೆನಡಾ 2 ಗೋಲು ಗಳಿಸಿ ಭಾರತಕ್ಕೆ ಶಾಕ್ ಕೊಟ್ಟಿತು. ಇತ್ತ ಭಾರತ ತಂಡವು ಕೆಲವಾರು ಗೋಲು ಗಳಿಸುವ ಅವಕಾಶಗಳನ್ನ ಕೈಚೆಲ್ಲಿ ಕೈಕೈ ಹಿಸುಕಿಕೊಳ್ಳುವಂತಾಯಿತು.

ಮತ್ತೊಂದು ಪಂದ್ಯದಲ್ಲಿ ಪಾಕಿಸ್ತಾನವು 3-1 ಗೋಲುಗಳಿಂದ ಚೀನಾವನ್ನು ಸೋಲಿಸಿ 7ನೇ ಸ್ಥಾನ ಪಡೆಯಿತು. ದಕ್ಷಿಣ ಕೊರಿಯಾ ತಂಡ 9ನೇ ಸ್ಥಾನ ಪಡೆದರೆ, ಸ್ಕಾಟ್'ಲೆಂಡ್ ಕೊನೆಯ ಹಾಗೂ 10ನೇ ಸ್ಥಾನಕ್ಕಿಳಿಯಿತು.

ವಿಶ್ವಕಪ್'ಗೆ ಅರ್ಹತೆ:
2018ರ ಹಾಕಿ ವಿಶ್ವಕಪ್'ಗೆ ಅರ್ಹತಾ ಟೂರ್ನಿಯಾಗಿ ಪರಿಗಣಿತವಾಗಿರುವ ಈ ಟೂರ್ನಿಯಲ್ಲಿ ಟಾಪ್ 5 ರಾಷ್ಟ್ರಗಳು ವರ್ಲ್ಡ್ ಕಪ್'ಗೆ ಕ್ವಾಲಿಫೈ ಆಗಿವೆ. ವಿಶ್ವಕಪ್ ಭಾರತದಲ್ಲಿ ನಡೆಯುತ್ತಿರುವುದರಿಂದ ಆತಿಥೇಯ ರಾಷ್ಟ್ರವಾಗಿ ಭಾರತ ಅರ್ಹತೆ ಪಡೆದಿದೆ.

ಒಟ್ಟು 16 ತಂಡಗಳು ಹಾಕಿ ವಿಶ್ವಕಪ್'ನಲ್ಲಿ ಪಾಲ್ಗೊಳ್ಳುತ್ತಿವೆ. ದಕ್ಷಿಣ ಆಫ್ರಿಕಾದ ಜೋಹಾನ್ಸ್'ಬರ್ಗ್'ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಮತ್ತೊಂದು ವರ್ಲ್ಡ್ ಹಾಕಿ ಲೀಗ್ ಸೆಮಿಫೈನಲ್ ಟೂರ್ನಿಯಲ್ಲಿ ಇನ್ನೂ 5 ತಂಡಗಳು ವಿಶ್ವಕಪ್'ಗೆ ಅರ್ಹತೆ ಗಿಟ್ಟಿಸಲಿವೆ. ಅದಾದ ನಂತರ ಅಮೆರಿಕ, ಆಫ್ರಿಕಾ, ಏಷ್ಯಾ, ಯೂರೋಪ್'ಗಳಲ್ಲಿ ನಡೆಯುವ ಹಾಕಿ ಟೂರ್ನಿಗಳ ಮೂಲಕ ವಿಶ್ವಕಪ್'ಗೆ ಅರ್ಹತೆ ಪಡೆಯುವ ಅವಕಾಶಗಳಿವೆ.