ಶೂಟಿಂಗ್ ಕೋಚ್ ಮತ್ತು ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಪ್ರೊ. ಸನ್ನಿ ಥಾಮಸ್ (85) ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. 19 ವರ್ಷ ಭಾರತೀಯ ಶೂಟಿಂಗ್ ತಂಡದ ಮುಖ್ಯ ಕೋಚ್ ಆಗಿದ್ದ ಅವರ ಮಾರ್ಗದರ್ಶನದಲ್ಲಿ ಭಾರತ ನೂರಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪದಕಗಳನ್ನು ಗೆದ್ದಿದೆ.
ಕೋಟಯಂ: ಶೂಟಿಂಗ್ ಕೋಚ್ ಮತ್ತು ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಪ್ರೊ. ಸನ್ನಿ ಥಾಮಸ್ ಇನ್ನಿಲ್ಲ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಕೋಟಯಂ ಉಳುವೂರಿನಲ್ಲಿ ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. 19 ವರ್ಷ ಭಾರತೀಯ ಶೂಟಿಂಗ್ ತಂಡದ ಮುಖ್ಯ ಕೋಚ್ ಆಗಿದ್ದರು. ಮಾಜಿ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ ಆಗಿದ್ದ ಸನ್ನಿ ಥಾಮಸ್ ತರಬೇತಿಯಲ್ಲಿ ಭಾರತ ನೂರಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪದಕಗಳನ್ನು ಗೆದ್ದಿದೆ. ಸನ್ನಿ ಥಾಮಸ್ ಮಾರ್ಗದರ್ಶನದಲ್ಲಿ ಭಾರತದ ಶೂಟರ್‌ಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ 108 ಚಿನ್ನ, 74 ಬೆಳ್ಳಿ ಹಾಗೂ 53 ಕಂಚಿನ ಪದಕ ಜಯಿಸಿದ್ದಾರೆ.
ಒಲಿಂಪಿಕ್ಸ್ ಪದಕ ವಿಜೇತ ಅಭಿನವ್ ಬಿಂದ್ರಾ ಅವರ ಕೋಚ್ ಆಗಿದ್ದರು ಸನ್ನಿ ಥಾಮಸ್. ಕೋಟಯಂ ಜಿಲ್ಲೆಯ ಉಳುವೂರಿನ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿದ್ದ ಅವರು 1993 ರಿಂದ 2012 ರವರೆಗೆ 19 ವರ್ಷಗಳ ಕಾಲ ಭಾರತೀಯ ಶೂಟಿಂಗ್ ತಂಡದ ಕೋಚ್ ಆಗಿದ್ದರು. ಅವರು ರೈಫಲ್ ಓಪನ್ ಸೈಟ್ ವಿಭಾಗದಲ್ಲಿ ಕೇರಳದ ಮಾಜಿ ಭಾರತೀಯ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್.
ಭಾರತೀಯ ಶೂಟಿಂಗ್‌ನ ಬೆಳವಣಿಗೆಗೆ ಪ್ರೊಫೆಸರ್ ಸನ್ನಿ ಥಾಮಸ್ ಅಡಿಪಾಯ ಹಾಕಿದ್ದಾರೆ ಎಂದು ಒಲಿಂಪಿಕ್ಸ್ ವಿಜೇತ ಅಭಿನವ್ ಬಿಂದ್ರಾ ಸಂತಾಪ ಸೂಚಕ ಪತ್ರದಲ್ಲಿ ತಿಳಿಸಿದ್ದಾರೆ. ಕೇವಲ ಕೋಚ್ ಮಾತ್ರವಲ್ಲ, ಮಾರ್ಗದರ್ಶಕರೂ ಆಗಿದ್ದರು. ನನ್ನ ವೃತ್ತಿಜೀವನದ ಮೇಲೆ ನಿರ್ಣಾಯಕ ಪ್ರಭಾವ ಬೀರಿದವರು ಎಂದು ಅಭಿನವ್ ಬಿಂದ್ರಾ ಹೇಳಿದ್ದಾರೆ. ಭಾರತೀಯ ಶೂಟಿಂಗ್‌ನ ದಿಕ್ಸೂಚಿ ಪ್ರೊಫೆಸರ್ ಸನ್ನಿ ಥಾಮಸ್ ಎಂದು ಒಲಿಂಪಿಕ್ ಪದಕ ವಿಜೇತ ಗಗನ್ ನಾರಂಗ್ ಏಷ್ಯಾನೆಟ್ ನ್ಯೂಸ್‌ಗೆ ಪ್ರತಿಕ್ರಿಯಿಸಿದ್ದಾರೆ. ನಾನು ಸೇರಿದಂತೆ ಹಲವರ ಬೆಳವಣಿಗೆಯಲ್ಲಿ ಅವರು ಮಾರ್ಗದರ್ಶಕರಾಗಿದ್ದರು. ಕೊನೆಯ ಕ್ಷಣದವರೆಗೂ ಸಕ್ರಿಯರಾಗಿದ್ದರು ಮತ್ತು ಭಾರತೀಯ ಕ್ರೀಡಾ ಕ್ಷೇತ್ರಕ್ಕೆ ಇದು ದೊಡ್ಡ ನಷ್ಟ ಎಂದು ಗಗನ್ ನಾರಂಗ್ ಹೇಳಿದರು.
ಗುರುವಾರ ಅಂತ್ಯಕ್ರಿಯೆ
ಎರ್ನಾಕುಲಂ ಸೇಂಟ್ ಮಾರ್ಟಿನ್ ಡೀ ಪೊರೆಸ್ ಚರ್ಚ್ ನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಇಂದು ಮಧ್ಯಾಹ್ನ 3 ಗಂಟೆಯಿಂದ ಉಳುವೂರು ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಪಾರ್ಥಿವ ಶರೀರದ ದರ್ಶನ ಇರುತ್ತದೆ. ನಾಳೆ ಚರ್ಚ್ ಪ್ಯಾರಿಷ್ ಹಾಲ್ ನಲ್ಲಿ ಪಾರ್ಥಿವ ಶರೀರದ ದರ್ಶನದ ನಂತರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.


